ಪೆರ್ನೆಯಲ್ಲಿ ಜನಜಾಗೃತಿ ಸಭೆ

0

3-4 ತಿಂಗಳಲ್ಲಿ 2 ಸಾವಿರ ನಿವೇಶನ ಹಂಚಿಕೆ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಒಂದು ಗ್ರಾ.ಪಂ. ವ್ಯಾಪ್ತಿಗೊಳಪಟ್ಟ ನಿವೇಶನ ರಹಿತರು ತಮ್ಮ ಗ್ರಾ.ಪಂ.ನಲ್ಲೇ ನಿವೇಶನಕ್ಕೆ ಅರ್ಜಿ ಸಲ್ಲಿಸಬೇಕೆಂಬ ನಿಯಮ ಈ ಮೊದಲಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿವೇಶನ ರಹಿತರು ತಮ್ಮ ಗ್ರಾಮದಲ್ಲಿ ನಿವೇಶನಕ್ಕೆ ಜಾಗವಿಲ್ಲದಿದ್ದರೆ ಬೇರೆ ಯಾವ ಗ್ರಾ.ಪಂ.ನಲ್ಲಿ ಬೇಕಾದರೂ ಅರ್ಜಿ ಸಲ್ಲಿಸಬಹುದೆಂಬ ನಿಯಮವನ್ನು ಈಗ ರೂಪಿಸಲಾಗಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 300 ಎಕರೆ ಜಮೀನನ್ನು ಈಗಾಗಲೇ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದ್ದು, 4-5 ತಿಂಗಳಲ್ಲಿ ಎರಡು ಸಾವಿರ ನಿವೇಶನಗಳನ್ನು ಹಂಚುವ ಕಾರ್ಯವಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಪೆರ್ನೆ ವಲಯ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಪೆರ್ನೆಯಲ್ಲಿ ನಡೆದ `ಬಿಜೆಪಿ ಸುಳ್ಳಿಗೆ ಕಾಂಗ್ರೆಸ್ ಉತ್ತರ’ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಿನ ನಿಯಮದಿಂದಾಗಿ ಯಾವುದೇ ಗ್ರಾ.ಪಂ. ವ್ಯಾಪ್ತಿಗೆ ಸಂಬಂಧಪಟ್ಟ ನಿವೇಶನರಹಿತರು ಬೇರೆ ಗ್ರಾ.ಪಂ.ನಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಕೇವಲ ರಸ್ತೆ, ಚರಂಡಿ ಮಾಡುವುದು ಅಭಿವೃದ್ಧಿಯಲ್ಲ. ಇದರೊಂದಿಗೆ ಬೆಂಚ್ ಮಾರ್ಕ್ ಕೆಲಸಗಳಾಗಬೇಕು. ಉದ್ಯಮದೊಂದಿಗೆ ಉದ್ಯೋಗವಕಾಶಗಳ ಸೃಷ್ಟಿಯೂ ಆಗಬೇಕು ಎಂಬ ಕಲ್ಪನೆ ನನ್ನದು. ಅದಕ್ಕಾಗಿ ಕೆಎಂಎಫ್‌ಗೆ ನನ್ನ ಕ್ಷೇತ್ರದಲ್ಲಿ ಜಾಗ ಮಂಜೂರು ಮಾಡುವ ಕೆಲಸವಾಗಿದೆ. ಸರಕಾರಿ ಮೆಡಿಕಲ್ ಕಾಲೇಜು ತಾಲೂಕಿಗೆ ತರುವ ಕೆಲಸವಾಗಿದೆ. ಮುಂಡೂರಿನಲ್ಲಿ ಕ್ರೀಡಾಂಗಣಕ್ಕೆ ಅನುದಾನ ತಂದಿದ್ದೇನೆ. ಶಾಸಕನಾದ ಒಂದೂವರೆ ವರ್ಷದಲ್ಲಿ 3,400 ಅಕ್ರಮ- ಸಕ್ರಮ ಕಡತಗಳನ್ನು ಮಾಡಲಾಗಿದೆ.

ಅಕ್ರಮ- ಸಕ್ರಮದಲ್ಲಿ ಕರ್ನಾಟಕ ರಾಜ್ಯದಲ್ಲಿ ಪುತ್ತೂರು ತಾಲೂಕು ನಂ.1 ಸ್ಥಾನದಲ್ಲಿದೆ. ತನ್ನ ಕ್ಷೇತ್ರದಲ್ಲಿ ಟೆಂಪಲ್ ಟೂರಿಸಂ ಬೆಳೆಸಬೇಕು ಎಂಬ ಕನಸಿದ್ದು, ಅದಕ್ಕಾಗಿ ಶ್ರೀ ಮಹಾಲಿಂಗೇಶ್ವರ ದೇವಾಲಯ ಹಾಗೂ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಗಳ ಅಭಿವೃದ್ದಿಗೆ ಅನುದಾನಗಳು ಬಿಡುಗಡೆಯಾಗಿವೆ. ಇಷ್ಟು ಬಾರಿ ಅಧಿಕಾರಕ್ಕೆ ಬಂದರೂ ಬಿಜೆಪಿಯವರಿಗೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಒತ್ತುವರಿಯಾದ ಜಾಗವನ್ನು ತೆರವು ಗೊಳಿಸಲು ಸಾಧ್ಯವಾಗಿರಲಿಲ್ಲ. ಅದನ್ನು ನಾನು ಶಾಸಕನಾದ ಮೇಲೆ ಮಾಡಿ ತೋರಿಸಿದ್ದು, ಅದಕ್ಕೆ ರಾಜಕೀಯಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುವವರೇ ಅಡ್ಡಿ ಬಂದಿದ್ದಾರೆ. ಇವರದ್ದೆಲ್ಲಾ ನಕಲಿ ಹಿಂದುತ್ವವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದ್ದು, ಬಿಜೆಪಿಯವರ ಸುಳ್ಳುಗಳಿಗೆ ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳ ಮೂಲಕವೇ ಉತ್ತರ ನೀಡಲಿದೆ ಎಂದರು.


ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಪಂಚಗ್ಯಾರಂಟಿ ಯೋಜನೆ ಜಾರಿಯಾದ ಬಳಿಕ ಕಳೆದ ಮೇ 25ರವರೆಗೆ ಪುತ್ತೂರು ತಾಲೂಕಿಗೆ ಗೃಹಲಕ್ಷ್ಮೀ ಯೋಜನೆಯಡಿ ನೂರ ಮೂವತ್ತೈದು ಕೋಟಿಯ ತೊಂಬತ್ತೈದು ಲಕ್ಷದ ನಲವತ್ತ ಆರು ಸಾವಿರದ ಇನ್ನೂರ ಐವತ್ತೊಂಬತ್ತು ರೂಪಾಯಿ ಬಂದಿದೆ. ಬಂಟ್ವಾಳ ತಾಲೂಕಿನ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ನಲವತ್ತೊಂದು ಕೋಟಿಯ ಇಪ್ಪತ್ತೇಳು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಬಂದಿದೆ. ಅನ್ನಭಾಗ್ಯ ಯೋಜನೆಯಡಿ ಪುತ್ತೂರು ತಾಲೂಕಿಗೆ ಇಪ್ಪತ್ತೊಂಬತ್ತು ಕೋಟಿಯ 25 ಲಕ್ಷದ 50 ಸಾವಿರ ರೂಪಾಯಿ ಬಂದಿದೆ. ಬಂಟ್ವಾಳ ತಾಲೂಕಿನ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ೨೬ ಕೋಟಿಯ ೯೨ ಲಕ್ಷದ ೫೨ ಸಾವಿರದ ೫೯೪ ರೂ. ಬಂದಿದೆ. ಪುತ್ತೂರು ತಾಲೂಕಿಗೆ ಯುವನಿಧಿಯಲ್ಲಿ ೮೬ ಲಕ್ಷದ ೮೫ ಸಾವಿರ ರೂ., ಪುತ್ತೂರು ತಾಲೂಕಿಗೆ ಗೃಹ ಜ್ಯೋತಿ ಯೋಜನೆಯಡಿ ೭೮ ಕೋಟಿಯ ೩೫ ಲಕ್ಷದ ೯೧ ಸಾವಿರದ ೫೭೨ ರೂ. ಬಂದಿದೆ. ಬಂಟ್ವಾಳ ತಾಲೂಕಿನ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ೯ ಕೋಟಿಯ ೯೮ ಲಕ್ಷದ ೪೫ ಸಾವಿರದ ೮೪೦ ರೂ. ಬಂದಿದೆ. ಹೀಗೆ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಡಿಯಲ್ಲಿ ಮುನ್ನೂರ ಎಪ್ಪತ್ತೈದು ಕೋಟಿಯ ಮೂವತ್ತೈದು ಲಕ್ಷದ ೧೮ ಸಾವಿರದ ಮುನ್ನೂರ ತೊಂಬತ್ತು ರೂಪಾಯಿ ಬಂದಿದೆ. ಇದನ್ನು ಬಿಜೆಪಿಯವರೂ ಪಡೆದುಕೊಂಡಿದ್ದಾರೆ. ಇದನ್ನೆಲ್ಲಾ ಪಡೆದುಕೊಂಡು ಬಿಜೆಪಿಯವರು ಸುಳ್ಳಿನ ರಾಜಕಾರಣದ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.


ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಂ ಕೆ.ಬಿ. ಮಾತನಾಡಿ, ಬಿಜೆಪಿಯೆಂಬುದೇ ಸುಳ್ಳು ಪಕ್ಷ. ಇವರ ಧ್ಯೇಯ, ಸಿದ್ಧಾಂತ, ಆಶ್ವಾಸನೆಗಳೆಲ್ಲಾ ಸುಳ್ಳೇ. ಅವರಲ್ಲಿ ಅಭಿವೃದ್ಧಿ ಬಗ್ಗೆ ಮಾತಿಲ್ಲ. ಓಟಿಗಾಗಿ ಧರ್ಮ ಧರ್ಮದ ನಡುವೆ ಕಂದಕಗಳನ್ನು ಸೃಷ್ಟಿಸುವುದೇ ಅವರ ಕೆಲಸ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಚುನಾವಣೆ ಪೂರ್ವದಲ್ಲಿ ಆಶ್ವಾಸನೆ ಕೊಟ್ಟಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಅನುಷ್ಠಾನ ಮಾಡಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳ ನಡುವೆಯೂ ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳಾಗುತ್ತಿವೆ ಎಂದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್ ಮಾತನಾಡಿ ಅಶೋಕ್ ಕುಮಾರ್ ರೈಯವರು ಶಾಸಕರಾದ ಅಲ್ಪ ಅವಧಿಯಲ್ಲಿಯೇ ಪೆರ್ನೆ- ಬಿಳಿಯೂರು ಗ್ರಾಮಗಳಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ೯ ಕೋ. ರೂ. ಅನುದಾನವನ್ನು ನೀಡಿದ್ದಾರೆ. ಇದು ಇಲ್ಲಿನ ಜನರಿಗೆ ಗೊತ್ತಿದೆ. ಬಿಜೆಪಿಯವರು ಸುಳ್ಳುಗಳಿಗೆ ಆಯುಷ್ಯ ಮುಗಿಯುವರೆಗೂ ಉತ್ತರ ಕೊಡಲು ಸಾಧ್ಯವಿಲ್ಲ. ಅವರ ಬಾಯಲ್ಲಿ ಸುಳ್ಳುಗಳು ಬಿಟ್ಟರೆ ಬೇರೆನೂ ಬರೋದಿಲ್ಲ. ಖಾಸಗಿ ಮೆಡಿಕಲ್ ಕಾಲೇಜುಗಳ ಲಾಬಿ ನಡುವೆಯೂ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜನ್ನು ತಂದ ಕೀರ್ತಿ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಸಲ್ಲುತ್ತದೆ. ಈಗಿನ ಅಭಿವೃದ್ದಿಯನ್ನು ಸಹಿಸದ ಬಿಜೆಪಿಯವರು ಸುಳ್ಳುಗಳನ್ನು ಹೇಳುವ ಮೂಲಕ ಜನರ ದಾರಿ ತಪ್ಪಿಸಲು ಹೊರಟಿದ್ದಾರೆ. ಆದರೆ ಜನಗಳು ಈಗ ವಿದ್ಯಾವಂತರಾಗಿದ್ದು, ಇವರ ಸುಳ್ಳುಗಳನ್ನು ಅರ್ಥೈಸಿಕೊಳ್ಳುವಷ್ಟು ಸಮರ್ಥರಾಗಿದ್ದಾರೆ ಎಂದರು.


ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಮಾತನಾಡಿ ಬಿಜೆಪಿಯ ಸುಳ್ಳುಗಳಿಗೆ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಪೆರ್ನೆ ಸಿಎ ಬ್ಯಾಂಕ್ ಅಧ್ಯಕ್ಷರಾದ ತೋಯಜಾಕ್ಷ ಶೆಟ್ಟಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸೀಫ್ ಯು.ಟಿ., ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಪೆರ್ನೆ ಗ್ರಾ.ಪಂ. ಅಧ್ಯಕ್ಷೆ ವಿಜಯ, ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಕೋಡಿಂಬಾಡಿ, ಕಾಂಗ್ರೆಸ್ ಉಸ್ತುವಾರಿ ವಿಕ್ರಂ ರೈ ಕೋಡಿಂಬಾಡಿ, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಪೆರ್ನೆ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಶಾಫಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here