ನೀಲಿ ಬಣ್ಣಕ್ಕೆ ತಿರುಗಿದ ಶಾಲಾ ಟ್ಯಾಂಕ್‌ನಲ್ಲಿದ್ದ ನೀರು…!? ನೀರು ಮುಟ್ಟಿದ್ದಲ್ಲೆಲ್ಲಾ ತುರಿಕೆ…ಅಜ್ಜಿಕಲ್ಲು ಶಾಲೆಯಲ್ಲಿ ನಡೆದ ಘಟನೆ

0

ಪುತ್ತೂರು: ಟ್ಯಾಂಕ್‌ನಲ್ಲಿ ತುಂಬಿಸಿಟ್ಟಿದ್ದ ನೀರು ಏಕಾಏಕಿ ನೀಲಿ ಬಣ್ಣಕ್ಕೆ ತಿರುಗಿದ್ದು ಅಲ್ಲದೆ ಈ ನೀರನ್ನು ಉಪಯೋಗಿಸಿದರೆ ಮೈಕೈ ತುರಿಕೆ ಬರುತ್ತಿದ್ದ ಘಟನೆ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.9 ರಂದು ನಡೆದಿದೆ.

ಶಾಲೆಯ ಪಕ್ಕದಲ್ಲೇ ಸಿಮೆಂಟ್‌ನಿಂದ ನಿರ್ಮಿತ ನೀರಿನ ಟ್ಯಾಂಕ್ ಇದ್ದು ಈ ಟ್ಯಾಂಕ್‌ನ ನೀರನ್ನು ಶಾಲಾ ಮಕ್ಕಳು ಕೈಕಾಲು ತೊಳೆಯಲು ಹಾಗೂ ಶೌಚಾಲಯಕ್ಕೆ ಬಳಸುತ್ತಿದ್ದರು. ಎಂದಿನಂತೆ ಜು.9 ರಂದು ಕೂಡ ಬೆಳಗ್ಗಿನ ಜಾವ ಮಕ್ಕಳು ಕೈ ತೊಳೆಯಲು ಹೋದರೆ ನಳ್ಳಿಯಲ್ಲಿ ನೀಲಿ ಬಣ್ಣದ ನೀರು ಬರುತ್ತಿತ್ತು. ಕೂಡಲೇ ಈ ವಿಷಯವನ್ನು ಶಿಕ್ಷಕರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಶಿಕ್ಷಕರು ಎಸ್‌ಡಿಎಂಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದು ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಆರೋಗ್ಯ ಇಲಾಖೆಯವರು ಭೇಟಿ ಕೊಟ್ಟಿದ್ದು ಲ್ಯಾಬ್ ಪರೀಕ್ಷೆಗಾಗಿ ನೀರಿನ ಸಂಗ್ರಹ ಮಾಡಿದ್ದಾರೆ ಎಂದು ತಿಳಿದು ಬಂದಿದೆ.


ಏನಿದು ಘಟನೆ…?
ಅಜ್ಜಿಕಲ್ಲು ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಹಾಗೂ ಕುಡಿಯಲು ಉಪಯೋಗಿಸುವ ನೀರಿನ ಟ್ಯಾಂಕ್ ಬೇರೆಯೇ ಇದ್ದು ಇನ್ನೊಂದು ಸಿಮೆಂಟ್‌ನಿಂದ ನಿರ್ಮಿತ ಟ್ಯಾಂಕ್ ಇದ್ದು ಇದರ ನೀರನ್ನು ಶೌಚಾಲಯ ಹಾಗೂ ಕೈಕಾಲು,ಮುಖ ತೊಳೆಯಲು ಮಾತ್ರ ಉಪಯೋಗಿಸಿದ್ದರು. ಈ ಸಿಮೆಂಟ್ ಟ್ಯಾಂಕ್‌ನ ನೀರನ್ನು ಜು.8 ರಂದು ಖಾಲಿ ಮಾಡಿ ತೊಳೆದು ಬೋರ್‌ವೆಲ್‌ನಿಂದ ಮತ್ತೆ ನೀರು ತುಂಬಿಸಲಾಗಿತ್ತು. ಜು.9 ರಂದು ಬೆಳಿಗ್ಗೆ ಬಂದು ಮಕ್ಕಳು ಕೈತೊಳೆಯಲು ನೋಡಿದಾಗ ನಳ್ಳಿಯಲ್ಲಿ ನೀಲಿ ಬಣ್ಣದ ನೀರು ಬರುತ್ತಿತ್ತು ಎನ್ನಲಾಗಿದೆ. ಇದಲ್ಲದೆ ಈ ನೀರಲ್ಲಿ ಕೈಕಾಲು,ಮುಖ ತೊಳೆದ ವಿದ್ಯಾರ್ಥಿಗಳಲ್ಲಿ ತುರಿಕೆ ಆರಂಭವಾಗಿದೆ. ನೀರು ಮುಟ್ಟಿದ ಜಾಗದಲ್ಲೆಲ್ಲ ತುರಿಕೆ ಆರಂಭವಾಗಿದೆ ಎಂದು ತಿಳಿದು ಬಂದಿದೆ.


ಹಲವು ಮಂದಿ ಭೇಟಿ, ಪರಿಶೀಲನೆ
ವಿಷಯ ತಿಳಿಯುತ್ತಿದ್ದ ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್ ಮುಂಡೋವುಮೂಲೆ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯ ಮಹೇಶ್ ರೈ ಕೇರಿ, ಆರೋಗ್ಯ ಇಲಾಖೆಯ ಸಿಎಚ್‌ಓ ವಿದ್ಯಾಶ್ರೀ, ಆಶಾ ಕಾರ್ಯಕರ್ತೆ ಸರೋಜಿನಿ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಲೆಯಲ್ಲಿರುವ ಈ ಟ್ಯಾಂಕ್‌ನ ನೀರನ್ನು ನಾವು ಶೌಚಾಲಯ ಹಾಗೂ ಮಕ್ಕಳಿಗೆ ಕೈಮುಖ ತೊಳೆಯಲು ಮಾತ್ರವೇ ಬಳಸುತ್ತಿದ್ದೇವೆ. ಜು.8 ರಂದು ಟ್ಯಾಂಕ್ ಅನ್ನು ತೊಳೆದು ಕೊಳವೆ ಬಾವಿಯಿಂದ ನೀರು ತುಂಬಿಸಿದ್ದೇವೆ. ಜು.9 ರಂದು ಬೆಳಿಗ್ಗೆ ನೋಡಿದಾಗ ನೀರು ನೀಲಿ ಬಣ್ಣಕ್ಕೆ ತಿರುಗಿದ್ದು, ಈ ನೀರು ಮುಟ್ಟಿದ ಕಡೆಯಲ್ಲೇ ತುರಿಕೆ ಬರುತ್ತಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಸಿಎಚ್‌ಓರವರು ಸ್ಥಳಕ್ಕೆ ಬಂದು ನೀರಿನ ಸಂಗ್ರಹವನ್ನು ಪರೀಕ್ಷೆಗೆ ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯಶಿಕ್ಷಕಿ ಚಿತ್ರಾ ರೈಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here