ಪ್ರಚೋಧನಕಾರಿ ಭಾಷಣಕ್ಕೆ ಕಡಿವಾಣ ಹಾಕಿ – ದ್ವೇಷ ಭಾಷಣ ಮಾಡಿದರೆ ವೇದಿಕೆಯಿಂದಲೇ ಎತ್ಕೊಂಡು ಹೋಗುವ ಕೆಲಸ ಪೊಲೀಸರು ಮಾಡಬೇಕು: ಶಾಸಕ ಅಶೋಕ್ ರೈ

0


ಪುತ್ತೂರು: ಜಿಲ್ಲೆಯಲ್ಲಿ ಶಾಂತಿ, ಸೌಹಾರ್ಧತೆ ನೆಲೆಸಬೇಕಾದರೆ ಜಿಲ್ಲೆಯಲ್ಲಿ ಯಾರು ಪ್ರಚೋಧನಕಾರಿ ಭಾಷಣ ಮಾಡುತ್ತಾರೆ,ಯಾರು ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿಗೆ ಕಾರಣರಾಗುತ್ತಾರೋ ಅಂತಹವರನ್ನು ವೇದಿಕೆಯಿಂದಲೇ ಪೊಲೀಸರು ಎತ್ತಿಕೊಂಡು ಹೋಗಿ ಅಂತವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಜಿ.ಪಂ ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ‌ಮಟ್ಟದ ಶಾಂತಿ ಸಭೆಯಲ್ಲಿ ಮಾತನಾಡಿದರು.


ಗೃಹ ಸಚಿವ ಡಾ.ಜಿ ಪರಮೇಶ್ವರ್ ಸಭಾಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಜನ ಶಾಂತಿ ಪ್ರಿಯರು 5% ಇರುವ ಸಮಾಜ ಘಾತುಕ ವ್ಯಕ್ತಿಗಳು ಇಂತಹ ಕೃತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಇಂತಹ ಕಿಡಿಗೇಡಿಗಳಿಗೆ ಕೆಲವು ರಾಜಕೀಯ ವ್ಯಕ್ತಿಗಳು ಬೆಂಬಲವನ್ನು ನೀಡುತ್ತಿದ್ದಾರೆ. ಈ ಕನಿಷ್ಟ ಸಂಖ್ಯೆಯಲ್ಲಿರುವವರನ್ನು ಸದೆಬಡಿಯುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು. ಈಗ ಹೊಸದಾಗಿ ಬಂದಿರುವ ಕಮಿಷನರ್,ಎಸ್ಪಿಯವರು ಸಮರ್ಪಕವಾಗಿ ಅದನ್ನು ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.


ಜಿಲ್ಲೆಯಲ್ಲಿ ಕೋಮು ಸಂಘರ್ಷ ನಡೆದರೆ ಇಲ್ಲಿ ಅಭಿವೃದ್ದಿ ಗೆ ಹಿನ್ನಡೆಯಾಗುತ್ತದೆ. ನಾನೇ ಒಂದು ಐಟಿಬಿಟಿ ಉದ್ಯಮಕ್ಕೆ ಕೈ ಹಾಕಿದ್ದೆ ಆದರೆ ಇಲ್ಲಿ ಮೊನ್ನೆ ನಡೆದ ಘಟನೆಯ ಬಳಿಕ ಕಂಪೆನಿಯವರೇ ಹಿಂದೆ ಸರಿದಿದ್ದಾರೆ, ಇದರಿಂದ 800 ಮಂದಿ ಉದ್ಯೋಗ ಕಳೆದುಕೊಳ್ಳುವಂತಾಗಿದೆ ಇದಕ್ಕೆಲ್ಲಾ ಯಾರು ಹೊಣೆ? ಎಂಬುದನ್ನು ನಾವು ಅರಿತುಕೊಳ್ಳಬೇಕು. ತಮ್ಮ ಮಕ್ಕಳು ಮತೀಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಜಾತ್ರೋತ್ಸವಕ್ಕೆ ಸುತ್ತೋಲೆ ಬೇಡ:
ದೇವರ ಜಾತ್ರೋತ್ಸವ ಇಷ್ಟೇ ಹೊತ್ತಿನವರೆಗೆ ನಡೆಸಬೇಕು ಎಂಬ ಪೊಲೀಸರ ಹೊಸ ಕಾನೂನು ಸರಿಯಲ್ಲ. ಪುತ್ತೂರಿನ ಮಹಾಲಿಂಗೇಶ್ವರ ದೇವರ ಜಾತ್ರೆಯನ್ನು ರಾತ್ರಿ 11 ಗಂಟೆಗೆ ನಿಲ್ಲಿಸಲು ಸಾಧ್ಯವಿಲ್ಲ. ಅದು ಹಲವು ದಿನಗಳ ಕಾಲ ದಿನದ 24 ಗಂಟೆ ನಡೆಯುತ್ತದೆ. ಇಂತಹ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಅಗತ್ಯವಾಗಿದೆ ಅದನ್ನು ಸರಕಾರ ಮಾಡಬೇಕು ಎಂದು ಶಾಸಕರು ಹೇಳಿದರು.

LEAVE A REPLY

Please enter your comment!
Please enter your name here