
ಹಿರೇಬಂಡಾಡಿ: ಈ ಹಿಂದೆ ಉಪ್ಪಿನಂಗಡಿ-ಹಿರೇಬಂಡಾಡಿ-ಶಾಖೆಪುರ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ರೂಟ್ ಹಾಗೂ ಸಮಯ ಬದಲಾವಣೆಯಾಗಿರುವುದರಿಂದ ಈ ಭಾಗದ ವಿದ್ಯಾರ್ಥಿಗಳು ಈಗ ಪಾಸು ಇದ್ದರೂ ಬಸ್ಸು ಇಲ್ಲದೇ ತೊಂದರೆಗೆ ಸಿಲುಕಿದ್ದಾರೆ.
ಈ ಹಿಂದೆ ಬೆಳಿಗ್ಗೆ 8.15ಕ್ಕೆ ಉಪ್ಪಿನಂಗಡಿಯಿಂದ ಹೊರಟ ಬಸ್ಸು 8.30ಕ್ಕೆ ಶಾಖೆಪುರಕ್ಕೆ ಬಂದು ತಿರುಗಿ ಉಪ್ಪಿನಂಗಡಿಗೆ ಹೋಗುತಿತ್ತು. ಈ ಬಸ್ಸು 9 ಗಂಟೆ ವೇಳೆಗೆ ಮತ್ತೆ ಉಪ್ಪಿನಂಗಡಿಗೆ ತಲುಪುತಿತ್ತು. ಇದರಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ, ಉದ್ಯೋಗಕ್ಕೆ ತೆರಳುವವರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತಿತ್ತು. ಇದೀಗ ಈ ಸರಕಾರಿ ಬಸ್ಸು ಕಡಬದಿಂದ ನೆಲ್ಯಾಡಿ, ರಾಮಕುಂಜ, ಕೊಲ ಮೂಲಕ ಶಾಖೆಪುರಕ್ಕೆ ಬಂದು ಹಿರೇಬಂಡಾಡಿಯಾಗಿ ಉಪ್ಪಿನಂಗಡಿಗೆ ಸಂಚಾರ ಮಾಡುತ್ತಿದೆ. ಈ ಬಸ್ಸು ಬೆಳಿಗ್ಗೆ ಶಾಖೆಪುರಕ್ಕೆ ಬರುವಾಗ 9 ಗಂಟೆಯಾಗುತ್ತಿದೆ. ಉಪ್ಪಿನಂಗಡಿಗೆ ತಲುಪುವಾಗ 9.30 ಆಗುತ್ತಿದೆ. ಇದರಿಂದ ಉಪ್ಪಿನಂಗಡಿ, ಪುತ್ತೂರು ಹಾಗೂ ಇತರೆಡೆ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ, ಉದ್ಯೋಗಕ್ಕೆ ತೆರಳುವವರಿಗೆ ತುಂಬಾ ಅನಾನುಕೂಲವಾಗುತ್ತಿದೆ. ಮಕ್ಕಳು ಬಸ್ಸು ಪಾಸ್ ಮಾಡಿಸಿದ್ದರೂ ಬಸ್ಸು ಇಲ್ಲದೆ ತುಂಬಾ ತೊಂದರೆಗೆ ಸಿಲುಕಿದ್ದಾರೆ. ಈ ವಿಚಾರ ಕಳೆದ ಹಿರೇಬಂಡಾಡಿ ಗ್ರಾಮಸಭೆಯಲ್ಲೂ ಪ್ರಸ್ತಾಪವಾಗಿತ್ತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದ್ದರೂ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಲಾ ಮಕ್ಕಳು ಸರಕಾರಿ ಬಸ್ಸಿನ ಬದಲು ಖಾಸಗಿ ವಾಹನಗಳಲ್ಲಿ ಹಣ ಕೊಟ್ಟು ಸಂಚಾರ ಮಾಡುತ್ತಿದ್ದಾರೆ. ಬಸ್ ಪಾಸ್ ಮಾಡಿದ್ದರೂ ಬಸ್ಸು ಇಲ್ಲದೇ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮೊದಲಿನಂತೆಯೇ ಸರಕಾರಿ ಬಸ್ಸನ್ನು ಬೆಳಿಗ್ಗೆ ೮.೩೦ಕ್ಕೆ ಶಾಖೆಪುರಕ್ಕೆ ಬರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಒತ್ತಾಯಿಸಿದ್ದಾರೆ.