‘ಪುತ್ತೂರ್‌ಡ್ ನಾಗವಲ್ಲಿನ್ ತೂಯರ ಜನಸಾಗರ’ – 2ನೇ ವಾರದತ್ತ ದಾಪುಗಾಲು ‘ಧರ್ಮ ಚಾವಡಿ’

0

ಪುತ್ತೂರು: ಕೃಷ್ಣವಾಣಿ ಪಿಕ್ಚರ‍್ಸ್ ಲಾಂಛನದಲ್ಲಿ ತಯಾರಾದ, ಪುತ್ತೂರಿನ ಉದ್ಯಮಿ ಜಗದೀಶ್ ಅಮೀನ್ ನಡುಬೈಲು ನಿರ್ಮಾಣದ, ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ಮೂಡಿ ಬಂದಿರುವ ಧರ್ಮದೈವ ಚಿತ್ರತಂಡದ ಎರಡನೇ ಕಾಣಿಕೆಯಾಗಿರುವ ಧರ್ಮ ಚಾವಡಿ ಜು.11ರಂದು ಕರಾವಳಿದಾದ್ಯಂತ ಬಿಡುಗಡೆಗೊಂಡಿದ್ದು, ಇದೀಗ ಆರು ದೇಖಾವೆಯ ಹೌಸ್‌ಫುಲ್ ಪ್ರದರ್ಶನದೊಂದಿಗೆ ಎರಡನೇ ವಾರಕ್ಕೆ ಕಾಲಿಟ್ಟಿದೆ.


ಕರಾವಳಿದಾದ್ಯಂತ ಬಿಡುಗಡೆಗೊಂಡಿರುವ ಥಿಯೇಟರ್‌ಗಳಲ್ಲಿ ಧರ್ಮ ಚಾವಡಿ ತುಳು ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಪುತ್ತೂರ್‌ಡ್ ನಾಗವಲ್ಲಿನ್ ತೂಯರ ಜನಸಾಗರ ಎಂಬಂತೆ ಪುತ್ತೂರಿನ ಜಿ.ಎಲ್ ಮಾಲ್ ವನ್‌ನಲ್ಲಿನ ಭಾರತ್ ಸಿನೆಮಾಸ್‌ನಲ್ಲಿಯೂ ಚಿತ್ರವು ತುಳುವರ ಪ್ರೋತ್ಸಾಹದೊಂದಿಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರತಂಡದ ಮೊದಲ ಸಿನೆಮಾ ಧರ್ಮದೈವ ತುಳುವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಎರಡನೇ ಸಿನೆಮಾ ತುಳುವರ ಆರಾಧನೆಯಾಗಿರುವ ದೈವಾರಾಧನೆ ಕುರಿತಾದ ‘ಧರ್ಮ ಚಾವಡಿ’ ಸಿನೆಮಾವು ಪ್ರೇಕ್ಷಕರ ಕರತಾಡನದೊಂದಿಗೆ ಯಶಸ್ವಿಯತ್ತ ಮುನ್ನುಗ್ಗುತ್ತಿದೆ.


ಸಿನೆಮಾಕ್ಕೆ ಪ್ರಸಾದ್ ಕೆ.ಶೆಟ್ಟಿರವರು ಅದ್ಭುತ ಸಂಗೀತ ನೀಡಿದ್ದಾರೆ. ಶ್ರೀನಾಥ್ ಪವಾರ್ ಸಂಕಲನ, ಅರುಣ್ ರೈ ಪುತ್ತೂರು ಛಾಯಾಗ್ರಾಹಣ, ಸ್ಕೂಲ್ ಲೀಡರ್ ಖ್ಯಾತಿಯ ರಝಾಕ್ ಪುತ್ತೂರು ಚಿತ್ರಕಥೆ ಹೆಣೆದಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಮೇಶ್ ರೈ ಕುಕ್ಕುವಳ್ಳಿ, ನಾಯಕನಾಗಿ ಚಿತ್ರದ ನಿರ್ಮಾಪಕ ಜಗದೀಶ್ ಅಮೀನ್‌ರವರ ಸಹೋದರ ಯುವ ಕಲಾವಿದ ರವಿ ಸ್ನೇಹಿತ್, ನಾಯಕಿಯಾಗಿ ಧನ್ಯ ಪೂಜಾರಿ, ಸಹ ನಾಯಕಿಯಾಗಿ ನೇಹಾ ಕೋಟ್ಯಾನ್ ಹಾಗೂ ನಿಶ್ಮಿತಾ ಶೆಟ್ಟಿ, ಚೇತನ್ ರೈ ಮಾಣಿ, ಸುರೇಶ್ ರೈ, ಪ್ರಕಾಶ್ ಶೆಟ್ಟಿ ಧರ್ಮನಗರ, ದೀಪಕ್ ರೈ ಪಾಣಾಜೆ, ಅಭಿನಯ ಚಕ್ರವರ್ತಿ ಸುಂದರ್ ರೈ ಮಂದಾರ, ರಂಜನ್ ಬೋಳೂರು, ಮನೀಶ್ ಶೆಟ್ಟಿ ಸಿದ್ಧಕಟ್ಟೆ, ರಕ್ಷಣ್ ಮಾಡೂರು, ಶರತ್ ಆಳ್ವ ಕೂರೇಲು, ರೂಪ ಡಿ.ಶೆಟ್ಟಿ, ಸವಿತಾ ಅಂಚನ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.


ಸಚಿನ್ ಉಪ್ಪಿನಂಗಡಿ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದು, ಚಿತ್ರವು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಎಲ್ಲಾ ಥಿಯೇಟರ್‌ಗಳಲ್ಲಿ ಬಿಡುಗಡೆಗೊಂಡಿದೆ. ಚಿತ್ರದಲ್ಲಿ ಬಹುತೇಕ ನಟರು ಹಾಗೂ ತಾಂತ್ರಿಕ ವರ್ಗ ಪುತ್ತೂರಿನವರೇ ಆಗಿದ್ದು ಕರಾವಳಿಯ ಸುಂದರ ತಾಣಗಳಲ್ಲಿ ಈ ಚಿತ್ರವು ಚಿತ್ರೀಕರಣಗೊಂಡಿದ್ದು ಚಿತ್ರವು ಸುಂದರವಾಗಿ ಮೂಡಿ ಬಂದಿದೆ.


ಸಿನೆಮಾ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ..
ಧರ್ಮಚಾವಡಿ ಸಿನೆಮಾವು ನನ್ನ ಎರಡನೇ ಸಿನೆಮಾವಾಗಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಚಿತ್ರದ ಪ್ರೀಮಿಯರ್ ಶೋವನ್ನು ವೀಕ್ಷಿಸಿದ ಪ್ರೇಕ್ಷಕರು ಸಿನೆಮಾವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಸಿನೆಮಾವು ಹೊಸ ಕಥಾಹಂದರದೊಂದಿಗೆ ಕೂಡಿದ್ದು ಮಾತ್ರವಲ್ಲ ಸಿನೆಮಾವು ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಚಿತ್ರದ ಗೆಲುವಿಗೆ ನಮ್ಮ ತುಳುವರ ಪ್ರೋತ್ಸಾಹ ಮುಖ್ಯವಾಗಿದ್ದು ಚಿತ್ರವನ್ನು ಕುಟುಂಬಸಮೇತ ವೀಕ್ಷಿಸಿ ನಮ್ಮನ್ನು ಹರಸಿ ಎಂದು ಚಿತ್ರದ ನಿರ್ಮಾಪಕರು, ನಿರ್ದೇಶಕರು, ತಾಂತ್ರಿಕವರ್ಗ ದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here