ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ಕೌಟುಂಬಿಕ ಕಲಹದಿಂದಾಗಿ ಗುರುವಾರ ಬೆಳಗ್ಗೆ ಪತಿ ತನ್ನ ಪತ್ನಿಯನ್ನೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಫೀಕ್ ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಜು.18ರಂದು ಬಂಧಿಸಿ, ಬೆಳ್ತಂಗಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಆರೋಪಿ ರಫೀಕ್ ಮತ್ತು ಪತ್ನಿ ಝೀನತ್ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿದ್ದು, ಜು.17ರಂದು ಬೆಳಗ್ಗೆ ಜಗಳ ಉಂಟಾಗಿತ್ತು. ಈ ಸಂದರ್ಭ ರಫೀಕ್ ಝೀನತ್‌ಳನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಅಕ್ರಮ ಸಂಬಂಧ ಕೊಲೆಗೆ ಹೇತು?
ಕೊಲೆಗೀಡಾಗಿರುವ ಝೀನತ್‌ಗೆ ತೆಕ್ಕಾರುವಿನ ಹಾರಿಸ್ ಎಂಬಾತನ ಜೊತೆಗೆ ಅಕ್ರಮ ಸಂಬಂಧವಿತ್ತೆನ್ನಲಾಗಿದೆ. ಈ ಹಿಂದೆ ಹಲವು ಬಾರಿ ಇವರಿಬ್ಬರು ಜೊತೆಯಾಗಿ ಇರುವುದನ್ನು ನೋಡಿದ್ದ ರಫೀಕ್ ತನ್ನ ಪತ್ನಿಗೆ ಆಗಾಗ್ಗೆ ಆತನಿಂದ ದೂರ ಇರುವಂತೆ ತಿಳಿಸಿದ್ದನು. ಅಲ್ಲದೇ, ರಫೀಕ್ ನಿವೇದನೆ ಮೇರೆಗೆ ಸ್ಥಳೀಯ ಮುಖಂಡರು ಹಾರಿಸ್‌ನಲ್ಲಿ 5 ಬಾರಿ ಮಾತುಕತೆ ನಡೆಸಿ ಮುಂದೆ ಝೀನತ್ ಬಳಿ ಹೋಗಬಾರದು ಎಂದು ತಾಕೀತು ಮಾಡಿ ಎಚ್ಚರಿಕೆ ನೀಡಿದ್ದರೆನ್ನಲಾಗಿದೆ.
ಜು.17ರಂದು ಬೆಳಗ್ಗೆ ರಫೀಕ್ ಕೆಲಸಕ್ಕೆಂದು ಹೋಗಿದ್ದು, ಆದರೆ ಕೆಲಸಕ್ಕೆ ಹೋಗದೆ ತುಸು ಸಮಯದ ಬಳಿಕ ರಫೀಕ್ ತನ್ನ ಮನೆಗೆ ಬಂದಿದ್ದ. ಆ ಸಂದರ್ಭದಲ್ಲಿ ಝೀನತ್ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಇದರಿಂದ ಅನುಮಾನಗೊಂಡ ರಫೀಕ್ ಬೀಡಿ ಬ್ರಾಂಚ್‌ನಲ್ಲಿ ವಿಚಾರಿಸಿದ್ದು, ಅಲ್ಲಿಯೂ ಇಲ್ಲವೆಂದಾಗ ರಫೀಕ್ ಮರಳಿ ಮನೆಗೆ ಬರುವಷ್ಟರಲ್ಲಿ ಝೀನತ್ ಹಾರಿಸ್ ಜೊತೆಗೆ ಮನೆಗೆ ಬಂದಿದ್ದು, ಈ ಕ್ಷಣದಲ್ಲಿ ಆಕ್ರೋಶಿತನಾದ ರಫೀಕ್‌ನು ಹಾರೀಸ್ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ಸಂದರ್ಭ ಆತ ತಪ್ಪಿಸಿಕೊಂಡು ಪರಾರಿ ಆಗಿರುವುದಾಗಿ ಹೇಳಲಾಗಿದೆ.
ಹಾರಿಸ್ ಬಂಧನಕ್ಕೆ ಆಗ್ರಹ:
ಅಕ್ರಮ ಸಂಬಂಧ ಹೊಂದಿರುವ ಹಾರಿಸ್ ಕುಟುಂಬವೊಂದನ್ನು ಹಾಳು ಮಾಡಿರುವುದಾಗಿ ಆರೋಪಿಸಲಾಗಿ ಆತನನ್ನು ಬಂಧಿಸಿ, ಆತನ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಪ್ರಜ್ಞಾವಂತ ನಾಗರಿಕರು ತೆಕ್ಕಾರು (ಬಾಜಾರ) ಎಂಬ ಹೆಸರಿನಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ದೂರು ಆಧಾರದಲ್ಲಿ ಪರಿಶೀಲಿಸಿ ಪ್ರಕರಣ ದಾಖಲಿಸಬಹುದಾಗಿದೆ-ಎಸ್.ಐ.
ಪ್ರಕರಣದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್ ಗೌಡ ಪ್ರತಿಕ್ರಿಯಿಸಿ “ಈ ಬಗ್ಗೆ ದೂರು ಬಂದಿಲ್ಲ, ದೂರು ಬಂದಲ್ಲಿ ಪರಿಶೀಲಿಸಿ ಅದರಲ್ಲಿನ ಅಂಶಗಳನ್ನು ಆಧರಿಸಿ ಪ್ರಕರಣ ದಾಖಲಿಸಬಹುದಾಗಿದೆ” ಎಂದು ತಿಳಿಸಿದ್ದಾರೆ.