ಟೈಲರ್ ವೃತ್ತಿ ಬಾಂಧವರಿಗೆ ಸನ್ಮಾನ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಟೈಲರ್ ವೃತ್ತಿ ಬಾಂಧವರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ-ನಾರಾಯಣ ಬಿ.ಎ.
ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಪುತ್ತೂರು ಕ್ಷೇತ್ರ ಸಮಿತಿಯ ಮಹಾಸಭೆ, ಟೈಲರ್ ವೃತ್ತಿ ಬಾಂಧವರಿಗೆ ಸನ್ಮಾನ ಹಾಗೂ ಟೈಲರ್ ವೃತ್ತಿ ಬಾಂಧವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ರಾಜ್ಯ ಸಮಿತಿ ಅಧ್ಯಕ್ಷ ನಾರಾಯಣ ಬಿ.ಎ. ಮಾತನಾಡಿ ಸಂಘಟನೆಯಲ್ಲಿ ಎಲ್ಲಾ ಟೈಲರ್ ವೃತ್ತಿ ಬಾಂಧವರು ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಆಗ ಸಂಘಟನೆ ಬಲಿಷ್ಠವಾಗುತ್ತದೆ ಎಂದು ಹೇಳಿ ಹಾರೈಸಿದರು. ರಾಜ್ಯ ಸಮಿತಿ ಉಪಾದ್ಯಕ್ಷ ಸುರೇಶ್ ಸಾಲಿಯಾನ್ ಮಾತನಾಡಿ ನಮಗೆ ಸಂಘಟನೆ ಮುಖ್ಯ. ಸಂಘಟನೆಯಲ್ಲಿ ಪುತ್ತೂರು ಕ್ಷೇತ್ರ ಬಲಿಷ್ಠವಾಗಿದೆ. ಪ್ರತೀ ತಿಂಗಳು ಸಂಘದಿಂದ ಸಭೆ ನಡೆಸಬೇಕು ಇದರಿಂದ ಸಂಘಟನೆ ಉಳಿಯಲು, ಬೆಳೆಯಲು ಸಾಧ್ಯ ಎಂದು ಹೇಳಿದರು.
ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಮಾತನಾಡಿ ಸಂಘಟನೆ ನಿರಂತರಾಗಿರಬೇಕು. ಮುಂದಿನ ದಿನಗಳಲ್ಲಿ ನಿರಂತರಾಗಿ ನಾವೆಲ್ಲರೂ ಸಂಘಟನೆ ಬಲಪಡಿಸಬೇಕು. ಇದರಿಂದ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಸಾಧ್ಯ. ಸರಕಾರದಿಂದ ಸಿಗುವ ಭದ್ರತೆ, ಸೌಲಭ್ಯಗಳನ್ನು ಪಡೆಯಲು ಸಂಘಟನೆ ಅಗತ್ಯ. ಭದ್ರತೆ, ಸೌಲಭ್ಯಗಳನ್ನು ಪಡೆದುಕೊಳ್ಳಲು ನಾವು ಪ್ರತಿಭಟನೆ, ಮುಷ್ಕರಕ್ಕೆ ಸಿದ್ಧರಿರಬೇಕು ಎಂದು ಹೇಳಿದ ಅವರು ಕಾರ್ಡ್ನಿಂದ ಸಿಗುವ ಸೌಲಭ್ಯಗಳನ್ನು ತಿಳಿಸಿದರು.
ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷೆ ವಿದ್ಯಾ ಶೆಟ್ಟಿ ಮಾತನಾಡಿ ಪುತ್ತೂರು ಕ್ಷೇತ್ರದ ವಲಯ ಸಮಿತಿಗಳು ಉತ್ತಮ ಕೆಲಸ ಮಾಡುತ್ತಿದೆ. ಸದಸ್ಯರೆಲ್ಲರೂ ಸದಸ್ಯತನ ನೀಕರಣ ಮಾಡಿಕೊಳ್ಳಬೇಕು. ಇದರಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ನಮ್ಮ ಜನಸಂಖ್ಯೆ ನೋಡಿದಾಗ ಸರಕಾರೂ ಹೆದರಬೇಕು ಎಂದು ಹೇಳಿದ ಅವರು ನಾಎಲ್ಲರೂ ಒಗ್ಗಟ್ಟಾಗಿ ಸಂಘಟನೆ ಬೆಳೆಸೋಣ ಎಂದರು.
ರಾಜ್ಯ ಸಮಿತಿ ಆಂತರಿಕ ಲೆಕ್ಕ ಪರಿಶೋಧಕ ರಘುನಾಥ್ ಬಿ. ಮಾತನಾಡಿ ನಮ್ಮ ಸಂಘಟನೆ ಬಲವಾಗಿದೆ. ಇದಕ್ಕೆ ಇಂದಿನ ಮಹಾಸಭೆಗೆ ಹೆಚ್ಚಿನ ಟೈಲರ್ ವೃತ್ತಿ ಬಾಂಧವರು ಆಗಮಿಸಿದ್ದಾರೆ. ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು ಅದು ಅಧಿಕಾರಕ್ಕೆ ಅಲ್ಲ ಅದು ಜವಾಬ್ದಾರಿಯಾಗಿದೆ. ತಾಳ್ಮೆಯಿಂದ ಕೆಲಸ ನಿರ್ವಹಿಸಿ. ಮುಂದಿನ ದಿನಗಳಲ್ಲಿ ಸಮಾವೇಶ ಮಾಡಲು ಎಲ್ಲರ ಸಹಕಾರ ಬೇಕು ಎಂದರು. ದ.ಕ. ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಜಯರಾಮ ಬಿ.ಎನ್. ಮಾತನಾಡಿ ಸಂಘಟನೆ ನಮಗೆ ಉಪಯೋಗವಾಗುತ್ತದೆ. ನಮ್ಮನ್ನು ಸಮಾಜದಲ್ಲಿ ಗುರುತಿಸಕೊಳ್ಳಲು ಸಂಘಟನೆ ಮುಖ್ಯ. ನಾನು ಯಾರು ಎನ್ನುವುದು ನಮ್ಮ ಸಂಘಟನೆಯಿಂದ ಗೊತ್ತಾಗಿದೆ ಎಂದು ಹೇಳಿದ ಅವರು ಸನ್ಮಾನ ಮಾಡಿದ ಸಮಿತಿಗೆ ಕೃತಜ್ಞತೆ ಸಲ್ಲಿಸಿ ಎಲ್ಲರ ಸಹಕಾರ ಕೋರಿದರು.
ಪುತ್ತೂರು ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷ ದಯಾನಂದ ಹೆಗ್ಡೆ ಮಾತನಾಡಿ ನನ್ನನ್ನು 2ನೇ ಬಾರಿ ಸಮಿತಿಗೆ ಆಯ್ಕೆ ಮಾಡಿದ್ದೀರಿ. ಎಲ್ಲಾ ಸದಸ್ಯರು ಸಭೆಗೆ ಆಗಮಿಸಿ ಸಲಹೆ ಸೂಚನೆ ನೀಡುತ್ತಿರಬೇಕು ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷೆ ಉಮಾ ಯು.ನಾೖಕ್ ಮಾತನಾಡಿ ನಾನು ಕಳೆದ 23 ವರ್ಷಗಳಿಂದ ಟೈಲರ್ ವೃತ್ತಿ ನಡೆಸುತ್ತಿದ್ದೇನೆ. 6 ವರ್ಷದಿಂದ ಸಮಿತಿಯ ಸದಸ್ಯಳಾಗಿ ಪ್ರಥಮ ಬಾರಿಗೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಎರಡು ವರ್ಷದ ಹಿಂದೆ ನಾನು ಅಧ್ಯಕ್ಷಳಾಗಿ ಆಯ್ಕೆಯಾಗಿದ್ದೆ. 9 ಲಯದ ಸದಸ್ಯರ ಸಹಕಾರ ಮುಂದೆಯೂ ಕ್ಷೇತ್ರ ಸಮಿತಿಗೆ ಇರಲಿ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮಾಜಿ ದ.ಕ. ಜಿಲ್ಲಾಧ್ಯಕ್ಷ ಜಯಂತ್ ಉರ್ಲಾಂಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಎಸ್ಕೋಡಿ, ಕೋಶಾಧಿಕಾರಿ ಚಕ್ರೇಶ್ ಅಮೀನ್, ಉಪಾಧ್ಯಕ್ಷ ಶಂಭು ಬಲ್ಯಾಯ, ಜತೆ ಕಾರ್ಯದರ್ಶಿ ಸುರೇಖಾ ನಿಡ್ಪಳ್ಳಿ, ಪುತ್ತೂರು ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಿತ್ರಾ ಬಿ.ಸಿ., ಕೋಶಾಧಿಕಾರಿ ಪರಮೇಶ್ವರ ಅನಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
2024-25ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕಾಣಿಯೂರು ವಲಯದ ಸದಸ್ಯೆ ವೈಶಾಲಿರವರ ಪುತ್ರಿ ಕುಮಾರಿ ಹನ್ಸಿಕಾರವರನ್ನು ಸನ್ಮಾನಿಸಲಾಯಿತು. ಹಲವಾರು ವರ್ಷಗಳಿಂದ ವಲಯ ಹಾಗೂ ಕ್ಷೇತ್ರ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ ದ.ಕ.ಜಿಲ್ಲಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಜಯಂತ ಉರ್ಲಾಂಡಿ ದಂಪತಿ ಹಾಗೂ ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಜಯರಾಮ ಬಿ.ಎನ್. ದಂಪತಿಯನ್ನು ಶಾಲು, ಹಾರ, ಪೇಟ, ಹಣ್ಣುಹಂಪಲು ನೀಡಿ ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ:
2024-25ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ಟೈಲರ್ ವೃತ್ತಿ ಬಾಂಧವರ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಭಿನಂದನೆ:
ಪುತ್ತೂರು ಕ್ಷೇತ್ರ ಸಮಿತಿಯ ನಿಕಟರ್ಪೂ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಕ್ಷೇತ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಜಯರಾಮ ಬಿ.ಎನ್., ಪ್ರಧಾನ ಕಾರ್ಯದರ್ಶಿ ಉಮಾ ಯು. ನಾೖಕ್ ಹಾಗೂ ಕೋಶಾಧಿಕಾರಿ ಸುಜಾತ ಮಂದಾರರವರನ್ನು ಶಾಲು, ಹಾರ, ಪೇಟ, ಫಲಪುಷ್ಪ ನೀಡಿ ಅಭಿನಂದಿಸಲಾಯಿತು.
9 ವಲಯಗಳ ಪದಾಧಿಕಾರಿಗಳಿಗೆ ಗೌರವಾರ್ಪಣೆ:
ಪುತ್ತೂರುನಗರ, ಸವಣೂರು, ನರಿಮೊಗರು, ಕಾಣಿಯೂರು, ಪುಣಚ, ಪಾಣಾಜೆ, ಕುಂಬ್ರ, ಉಪ್ಪಿನಂಗಡಿ ಹಾಗೂ ಈಶ್ವರಮಂಗಲ ವಲಯಗಳ ನಿಕಟಪೂರ್ವ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರಿಸಲಾಯಿತು.
ಮೊದಲು ಆಗಮಿಸಿದ ಸದಸ್ಯನ ಆಯ್ಕೆ:
ಕಾರ್ಯಕ್ರಮಕ್ಕೆ 10.30 ಗಂಟೆಯ ಮೊದಲು ಆಗಮಿಸಿ ಹಾಜರಾತಿ ಹಾಕಿದ ಸದಸ್ಯರಲ್ಲಿ ಒಬ್ಬನನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಚೀಟಿಯಲ್ಲಿ ವಿಜೇತರಾಗಿ ಆಯ್ಕೆಯಾದ ವಿಶ್ವನಾಥ ಈಶ್ವರಮಂಗಲರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೆ ಜಾಹೀರಾತು ನೀಡಿ ಸಹಕರಿಸಿದ ಪ್ರಾಯೋಜಕರನ್ನು ಹಾಗೂ ಮಹಾಪೋಷಕರನ್ನು ಶಾಲು, ಹೂ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಅತೀಹೆಚ್ಚು ಸದಸ್ಯರನ್ನು ಶೇಕಡಾವಾರು ಕರೆತಂದ ಕಾಣಿಯೂರು ವಲಯವನ್ನು ಗೌರವಿಸಲಾಯಿತು. 9 ವಲಯಕ್ಕೆ ಆಯ್ಕೆಯಾದ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕೋಶಾದಿಕಾರಿಯನ್ನು ಹೂ, ಶಾಲು ನೀಡಿ ಅಭಿನಂದಿಸಲಾಯಿತು. ವೇದಿಕೆಯಲ್ಲಿದ್ದ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪುತ್ತೂರು ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಿತ್ರ ಬಿ.ಸಿ. ವರದಿ ವಾಚಿಸಿದರು. ಕೋಶಾಧಿಕಾರಿ ಪರಮೇಶ್ವರ ಅನಿಲ ಲೆಕ್ಕಪತ್ರ ಮಂಡಿಸಿದರು. ಸವಣೂರು ವಲಯದ ಯಶೋಧ ಮೆದು ಬಳಗ ಪ್ರಾರ್ಥಿಸಿದರು. ಭಾರತಿ ಎಚ್. ವಂದಿಸಿ ತೇಜಸ್ ನಾಕ್ ಕೊಂಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಸಭೆ ಬಳಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಪುತ್ತೂರು ಕ್ಷೇತ್ರ ಸಮಿತಿಗೆ ಪದಾಧಿಕಾರಿಗಳ ಆಯ್ಕೆ : ಅಧಿಕಾರ ಹಸ್ತಾಂತರ
ಪುತ್ತೂರು ಕ್ಷೇತ್ರ ಸಮಿತಿಗೆ ಮುಂದಿನ ಎರಡು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 9 ವಲಯಗಳಿಂದ ಒಟ್ಟು 57 ಮಂದಿ ಸದಸ್ಯರನ್ನು ಕ್ಷೇತ್ರ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕ್ಷೇತ್ರ ಸಮಿತಿ ನೂತನ ಅಧ್ಯಕ್ಷರಾಗಿ ನಗರ ವಲಯದ ದಯಾನಂದ ಹೆಗ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಈಶ್ವರಮಂಗಲ ವಲಯದ ಗಣೇಶ್, ಕೋಶಾಧಿಕಾರಿಯಾಗಿ ಉಪ್ಪಿನಂಗಡಿ ವಲಯದ ಜಯಂತ್, ಉಪಾಧ್ಯಕ್ಷರಾಗಿ ಪರಮೇಶ್ವರ್, ಯಶೋಧರ್, ಚಿತ್ರಾ, ಜತೆಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ, ಯಶೋಧಾ ಮೆದು, ಸಂಘಟನಾ ಕಾರ್ಯದರ್ಶಿಯಾಗಿ ಯಶೋಧರ್ ಜೈನ್ರವರನ್ನು ಆಯ್ಕೆ ಮಾಡಲಾಯಿತು. ಬಳಿಕ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಕ್ಷೇತ್ರ ಸಮಿತಿಯಿಂದ ಜಯರಾಮ ಬಿ.ಎನ್., ಜಯಂತ ಉರ್ಲಾಂಡಿ, ರಘುನಾಥ್, ಉಮಾ ನಾಕ್, ಶಂಭು ಬಲ್ಯಾಯರವರನ್ನು ದ.ಕ.ಜಿಲ್ಲಾ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಹಿರಿಯರಿ ಟೈಲರ್ ವೃತ್ತಿ ಬಾಂಧವರಿಗೆ ಸನ್ಮಾನ
ಹಿರಿಯ ಟೈಲರ್ ವೃತ್ತಿ ಬಾಂಧವರನ್ನು ಸನ್ಮಾನಿಸಲಾಯಿತು. ಪುತ್ತೂರು ನಗರ ವಲಯದ ವಾಮನ ಗೌಡ ತೆಂಕಿಲ ಹಾಗೂ ಪುಣಚ ವಲಯದ ಬಾಬು ಗೌಡರವರನ್ನು ಶಾಲು, ಹಾರ, ಪೇಟ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.