ಗ್ರಾಮದಲ್ಲಿ ನಡೆಯುತ್ತಿರುವ ಅನಧಿಕೃತ ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಆಗ್ರಹ
ಗ್ರಾಮ ಆಡಳಿತಾಧಿಕಾರಿಯ ಬದಲಾವಣೆಗೆ ಸದಸ್ಯರ ಒತ್ತಾಯ
ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ಜಲ್ಲಿ ಕ್ರಷರ್ ಅನಧಿಕೃತವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಪರವಾನಿಗೆ ನೀಡಬಾರದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆ.ಮುಡ್ನೂರು ಗ್ರಾ.ಪಂಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ಸಭೆ ಗ್ರಾ.ಪಂ ಅಧ್ಯಕ್ಷೆ ಫೌಝಿಯಾ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಜಲ್ಲಿ ಕ್ರಷರ್ ಗಣಿಗಾರಿಕೆ ಪರವಾನಿಗೆ ನವೀಕರಣಕ್ಕೆ ಬಂದಿದೆ ಎಂದು ಪಿಡಿಒ ಹೇಳಿದರು. ಗಣಿ ಇಲಾಖೆ ಅನುಮತಿ ಇಲ್ಲದ ಕಾರಣಕ್ಕೆ ಪರವಾನಿಗೆ ನೀಡಬೇಡಿ ಎಂದು ಸದಸ್ಯರು ಹೇಳಿದರು. ಸಂಜೆ ಸಮಯದಲ್ಲಿ ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ದೊಡ್ಡ ಶಬ್ದಗಳು ಕೇಳುವುದರಿಂದ ಮಕ್ಕಳು, ಗರ್ಭಿಣಿ ಮಹಿಳೆಯರ ಸಹಿತ ಎಲ್ಲರಿಗೂ ತೊಂದರೆಯಾಗುತ್ತದೆ. ಗ್ರಾಮದಲ್ಲಿ ಇರುವ ಅನಧಿಕೃತ ಜಲ್ಲಿ ಕ್ರಷರ್ ಗಣಿಗಾರಿಕೆ ನಿಲ್ಲಿಸುವಂತೆ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.
ಗ್ರಾಮ ಆಡಳಿತಾಧಿಕಾರಿಯ ಬದಲಾವಣೆಗೆ ಆಗ್ರಹ:
ಗ್ರಾಮ ಆಡಳಿತಾಧಿಕಾರಿಯವರು ಸಕಾಲದಲ್ಲಿ ಕೆಲಸ ಕಾರ್ಯಗಳನ್ನು ಮಾಡದ ಹಿನ್ನೆಲೆಯಲ್ಲಿ ಅಭಿವೃದ್ದಿಗೆ ಹಿನ್ನಡೆಯಾಗಿದ್ದು, ಈ ನಿಟ್ಟಿನಲ್ಲಿ ಅವರನ್ನು ಬದಲಾಯಿಸುವುದು ಸೂಕ್ತ ಎಂದು ಸದಸ್ಯರು ಹೇಳಿದರು. ಕಚೇರಿಗೆ ನಿರಂತರ ರಜೆ ಹಾಕುತ್ತಿರುವ ಆಡಳಿತಾಧಿಕಾರಿಯವರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕಚೇರಿಯಲ್ಲಿ ಇದ್ದರೂ ಗ್ರಾ.ಪಂ ಸದಸ್ಯರ, ಗ್ರಾಮಸ್ಥರ ಫೋನ್ ಕರೆಗಳನ್ನು ಅವರು ನಿರ್ಲಕ್ಷಿಸುತ್ತಾರೆ ಎನ್ನುವ ಆರೋಪ ಅವರ ಮೇಲಿದ್ದು ಅವರನ್ನು ಕೂಡಲೇ ಬದಲಾಯಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಪೊಲೀಸ್ ಹೊರಠಾಣೆಗೆ ಕಟ್ಟಡ ಕೊಡಿ:
ಈಶ್ವರಮಂಗಲ ಪೊಲೀಸ್ ಹೊರಠಾಣೆಗೆ ಸ್ವಂತ ಜಾಗ ಇದ್ದರೂ ಪುನ: ಬೇರೆ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದಾರೆ. ಸ್ವಂತ ಕಟ್ಟಡಕ್ಕೆ ಅನುದಾನ ಬರುವ ನಿರೀಕ್ಷೆ ಇದೆ. ಕಟ್ಟಡದ ವಿಚಾರದಲ್ಲಿ
ಕೂಡಲೇ ಎಸ್.ಪಿ, ಐಜಿಪಿ ಹಾಗೂ ಶಾಸಕರಿಗೆ ಸೂಕ್ತ ಕ್ರಮಕ್ಕೆ ಬರೆಯುವುದಾಗಿ ನಿರ್ಣಯ ಕೈಗೊಳ್ಳಲಾಯಿತು.
ಇತರ ವಿಷಯಗಳು:
ಬಾಳೆ ಕೊಚ್ಚಿ-ಕಟ್ಟತ್ತಾರು ಕಾಲನಿಗೆ ಅನುದಾನ ನೀಡಿದ ಶಾಸಕರಿಗೆ, ಸಹಕರಿಸಿದ ರೈತ ಸಂಘಕ್ಕೆ ಅಭಿನಂದನೆ ಸಲ್ಲಿಸಲಾಯಿತು. ಈಶ್ವರಮಂಗಲ ಮೆಸ್ಕಾಂಗೆ ಲೈನ್ ಮ್ಯಾನ್ ನೇಮಕ ಮಾಡುವ ಬಗ್ಗೆ ಚರ್ಚೆ ನಡೆಯಿತು. ಗಾಳಿಮುಖ ಅಂಗಡಿ ಕೊಠಡಿ ಏಲಂ ಮಾಡುವ ಬಗ್ಗೆ ಹಾಗೂ ನಡುಬೈಲು ಎಂಬಲ್ಲಿ ವಿದ್ಯುತ್ ಪರಿವರ್ತಕವನ್ನು ಅಳವಡಿಸುವ ಕ್ರಮ ವಹಿಸುವ ಬಗ್ಗೆ ಚರ್ಚೆ ನಡೆಯಿತು.
ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯರಾದ ರಮೇಶ್ ರೈ ಸಾಂತ್ಯ, ಶ್ರೀರಾಮ್ ಪಕ್ಕಳ, ಇಬ್ರಾಹಿಂ ಪಳ್ಳತ್ತೂರು, ವೆಂಕಪ್ಪ ನಾಯ್ಕ, ಮಹಮ್ಮದ್ ರಿಯಾಯ್, ಚಂದ್ರಹಾಸ ಈಶ್ವರಮಂಗಲ, ಪ್ರದೀಪ್ ಕುಮಾರ್ ರೈ, ಲಲಿತಾ, ಪ್ರಪುಲ್ಲ ರೈ ಚರ್ಚೆಯಲ್ಲಿ ಭಾಗವಹಿಸಿದರು. ಸದಸ್ಯರಾದ ಸುಮ್ಮಯ್ಯ, ಲಲಿತಾ, ಶಶಿಕಲಾ, ಕುಮಾರನಾಥ, ವತ್ಸಲಾ, ಇಂದಿರಾ, ಕುಸುಮ ಉಪಸ್ಥಿತರಿದ್ದರು. ಪಿಡಿಒ ಸುಬ್ಬಯ್ಯ ಸ್ವಾಗತಿಸಿದರು. ಸಿಬ್ಬಂದಿ ಶೀನಪ್ಪ ವಂದಿಸಿದರು. ಚಂದ್ರಶೇಖರ ಸಹಕರಿಸಿದರು.