ಕೆಸರುಗದ್ದೆಯಲ್ಲಿ ಮಿಂದೆದ್ದು ಸಂಭ್ರಮಿಸಿದ ಸಮಾಜ ಬಾಂಧವರು
ಪುತ್ತೂರು: ನಾಥ ಪಂಥೀಯ ಜೋಗಿ ಸಮಾಜ ಸುಧಾರಕ ಸಂಘದ ವತಿಯಿಂದ ಜು.20ರಂದು ಮುಗೇರಡ್ಕ ಸುಶೀಲ ಜಯರಾಮ ಪುರುಷರವರ `ಜಯಶೀಲ ನಿಲಯ’ದ ಎದುರಿನ ಗದ್ದೆಯಲ್ಲಿ ವಿವಿಧ ಮನೋರಂಜನಾತ್ಮಕ ಕ್ರೀಡಾಕೂಟಗಳೊಂದಿಗೆ ನಡೆದ 7ನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಸಮಾಜ ಬಾಂಧವರು ಉತ್ಸಾಹದಲ್ಲಿ ಭಾಗವಹಿಸಿ ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.

ಮಳೆಯ ಸಿಂಚನದೊಂದಿಗೆ ಪ್ರಾರಂಭವಾದ ಆಟೋಟ ಸ್ಪರ್ಧೆಗಳು ಪ್ರಾರಂಭಗೊಂಡಿತ್ತು. ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟಗಳು ನೋಡುಗರಿಗೆ ಬಹಳಷ್ಟು ಮುದ ನೀಡಿತ್ತು. ಓಟದ ಸ್ಪರ್ಧೆಯಲ್ಲಿ ಕೆಸರಿನಲ್ಲಿ ಬಿದ್ದು ಎದ್ದು ಓಡುವುದು, ಹಗ್ಗ ಜಗ್ಗಾಟದಲ್ಲಿ ಗುಂಪು ಜೋರಾಗಿ ಕೆಸರಿನಲ್ಲಿ ಬೀಳುವ ಮನಮೋಹಕ ದೃಶ್ಯಗಳು ನೋಡುಗರ ಮನರಂಜಿಸಿತು. ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕವಾಗಿ ನಡೆದ ಸ್ಪರ್ಧೆಗಳು ಕಣ್ಮನ ಸೆಳೆದವು. ಒಂದೆಡೆ ಗೆಲ್ಲುವ ತವಕ, ಇನ್ನೊಂದೆಡೆ ಕೆಸರಿನ ಗದ್ದೆಯಲ್ಲಿ ಆಟದ ಸಂಭ್ರಮದಲ್ಲಿದ್ದ ಸ್ಪರ್ಧಾಳುಗಳು ಸಖತ್ ಎಂಜಾಯ್ ಮಾಡಿದರು. ಬಟ್ಟೆಯೆಲ್ಲ ಕೆಸರಿನಿಂದ ಕೂಡಿದ್ದರೂ, ಗೆಲುವಿಗಾಗಿ ಶಕ್ತಿಮೀರಿ ಆಟವಾಡುವ ದೃಶ್ಯ ಮನಮೋಹಕವಾಗಿತ್ತು. ಕೆಲವರು ಕೆಸರಿನಲ್ಲಿ ಬಿದ್ದು ಓಡಲಾಗದೆ ವಾಪಸಾಗುವ ದೃಶ್ಯಗಳು ಸಾಮಾನ್ಯವಾಗಿತ್ತು. ಸುರಿವ ಮಳೆಯ ಮಧ್ಯೆಯೂ ಕೆಸರಿನ ಗದ್ದೆಯಲ್ಲಿ ಧುಮುಕಿ ಮೈ ಚಳಿ ಬಿಟ್ಟು ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮೈನವಿರೇಳಿಸುವ ಕೆಸರು ಗದ್ದೆ ಆಟಗಳು ಜನರ ಮನಸ್ಸು ಗೆದ್ದವು. ಎದ್ದೋ, ಬಿದ್ದೋ ಎಂಬಂತೆ ಕೆಸರಿನಲ್ಲಿ ಆಡಿದ ಜನರು ಸ್ಪರ್ಧೆ ಜತೆಗೆ ಆಟದಲ್ಲಿ ಸಂಭ್ರಮಿಸಿ ಮಿಂದೆದ್ದರು.
ಕೆಸರು ಗದ್ದೆ ಕ್ರೀಡೋತ್ಸವವನ್ನು ವಿಟ್ಲ ಶ್ರೀ ಯೋಗೀಶ್ವರ ಮಠದ ಶ್ರೀ ರಾಜಗುರು ಶ್ರದ್ದಾನಾಥಾಜಿ ಸ್ವಾಮಿಜಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಮುಡಿಪು ಜೋಗಿ ಸಮಾಜದ ಅಧ್ಯಕ್ಷ ಸಂಜೀವ ಜೋಗಿ ಮುಡಿಪು ಮಾತನಾಡಿ, ಕೆಸರುಗದ್ದೆ ಕ್ರೀಡೆಗಳು, ಆಟಿದ ಆಚರಣೆಗಳ ಮೂಲಕ ದಿನಗಳ ಮಹತ್ವವನ್ನು ತಿಳಿಸುವ ಕಾರ್ಯವಗುತ್ತಿದೆ. ಅಲ್ಲದೆ ಪುರಾತನ ಸಂಪ್ರದಾಯ ಮುಂದಿನ ಪೀಳಿಗೆಗೆ ತಿಳಿಯಲು ಪೂರಕವಾಗಿದೆ.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನವೀನ್ ಡಿ. ದೋಳ್ತಟ್ಟ ಮಾತನಾಡಿ, ಸಂಘದ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ಕೆಸರುಗದ್ದೆ ಕ್ರೀಡೋತ್ಸವ ಎಂಬ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕಾಗಿ ಸಮಾಜದ ಪ್ರತಿ ಮನೆಯವರನ್ನು ಆಮಂತ್ರಿಸಲಾಗುತ್ತಿದೆ. ಸಮಾಜವನ್ನು ಸದೃಢವಾಗಿ ಬೆಳೆಸುವುದು ಹಾಗೂ ಸಮಾಜ ಬಾಂಧವರೆಲ್ಲರೂ ಒಟ್ಟು ಸೇರಿ ಸಂಭ್ರಮಿಸಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಕೆಸರುಗದ್ದೆ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಕ್ರೀಡೋತ್ಸವದಲ್ಲಿ ಪ್ರತಿಯೊಬ್ಬರೂ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಬೇಕು. ಎಲ್ಲರ ಸಹಕಾರದಿಂದ ಕ್ರೀಡೋತ್ಸವವು ಯಶಸ್ವಿಯಾಗಿ ಸಂಭ್ರಮಿಸಿದ್ದು, ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಸಂಘದ ಸಂಚಾಲಕ ದಯಾನಂದ ಪುತ್ತೂರಮೂಲೆ, ಸಂಘಟನಾ ಕಾರ್ಯದರ್ಶಿ ಉಮೇಶ್ ಇಂದಿರಾನಗರ ಮಾತನಾಡಿ ಶುಭಹಾರೈಸಿದರು. ಸ್ಥಳದಾನಿ ಸುಶೀಲಾ ಜಯರಾಮ ಪುರುಷ ಮುಗೇರಡ್ಕ, ಸಂಘದ ಉಪಾಧ್ಯಕ್ಷೆ ಸುಜಾತ ಸತೀಶ್, ಕೋಶಾಧಿಕಾರಿ ಜಗನ್ನಾಥ ನೆಲ್ಲಿಕಟ್ಟೆ, ಜಯರಾಮ ಪುರುಷ ಮರೀಲ್, ವಿಶ್ವನಾಥ ಜೋಗಿ ಮುಗೇರಡ್ಕ, ಚೆನ್ನಪ್ಪ ಜೋಗಿ ಮುಗೇರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಸ್ರಾವ್ಯ, ಅನುಜ್ಞಾ, ಕೀರ್ತನಾ ಪ್ರಾರ್ಥಿಸಿದರು. ಸತೀಶ್ ಇಂದಿರಾನಗರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೋನಪ್ಪ ಪುರುಷ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್ ಅನುಪಮ ದಂಪತಿ ಸ್ವಾಮೀಜಿಯವರನ್ನು ಗೌರವಿಸಿದರು. ಮಹೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಅಶ್ವಿನ್ ಜೋಗಿ ವಂದಿಸಿದರು. ಆನಂದ ಮಣಿಯ, ರಘು ಮಣಿಯ, ವಿಠಲ್ ಜೋಗಿ, ಶಿವಕುಮಾರ್, ರವಿ ಮುಗೇರಡ್ಕ, ಭವಿತ್ ನಡುಗುಡ್ಡೆ, ಹರಿಣಾಕ್ಷಿ ಇಂದಿರಾ ನಗರ, ರವಿ, ಯೋಗಿನಾಥ್, ಸೌಮ್ಯ, ರಮೇಶ್ ಜೋಗಿ ಮುಗೇರಡ್ಕ, ಗಂಗಾಧರ ಜೋಗಿ, ಅಶ್ವಿನ್ ಜೋಗಿ, ಸುಜಾತ, ಭವ್ಯ, ಕೀರ್ತಿ, ಅಶ್ವಥ್, ಸುಜಿತಾ ಸಂತೋಷ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ, ಗೌರವಾರ್ಪಣೆ:
ಕ್ರೀಡೋತ್ಸವವಕ್ಕೆ ಗದ್ದೆ ಒದಗಿಸಿಕೊಟ್ಟ ಸುಶೀಲಾ ಜಯರಾಮ ಪುರುಷ ಮುಗೇರಡ್ಕ, ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಸುಶ್ರಾವ್ಯ, ನಿಟ್ಟೆ ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪದವಿ ಪಡೆದ ಡಾ|ನಿಶಿತ್ ಕುಮಾರ್ ಜೋಗಿಯವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ ಅತೀ ಹೆಚ್ಚು ಅಂಕ ಗಳಿಸಿದ ತೃಷಾ, ಅದಿತ್ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಶೃತಿಯವರನ್ನು ಗೌರವಿಸಲಾಯಿತು. ಶ್ರೀಧರ ಹೆಗ್ಡೆ ಎಳ್ಮುಡಿ, ಕ್ರೀಡೋತ್ಸವಕ್ಕೆ ಗದ್ದೆ ಸಿದ್ದಗೊಳಿಸಿದ ರಂಜಿತ್ ಪೂಜಾರಿ, ಸಮಾಜದ ಹಿರಿಯರಾದ ಜಯಾನಂದ ಜೋಗಿ,, ಲೋಕೇಶ್, ದೇವಕಿ, ನಾಗೇಶ್ವರಿ, ಶಾಂಭವೀ, ಮೋಹಿನಿಯವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಅಶೋಕ್ ರೈ, ಮಠಂದೂರು, ಪುತ್ತಿಲ ಭೇಟಿ:
ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವು ಮಂದಿ ಗಣ್ಯರು ಕ್ರೀಡೋತ್ಸವಕ್ಕೆ ಆಗಮಿಸಿ ಶುಭಹಾರೈಸಿದರು.
ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಪುರುಷರಿಗೆ 100 ಮೀ., 200ಮೀ.ಓಟ, ಹಗ್ಗ ಜಗ್ಗಾಟ, ವಾಲಿಬಾಲ್, ಮಹಿಳೆಯರಿಗೆ 100 ಮೀ., 200ಮೀ. ಓಟ, ಹಗ್ಗ ಜಗ್ಗಾಟ, ಥ್ರೋಬಾಲ್, ಮಡಿಕೆ ಒಡೆಯುವುದು, ಮಕ್ಕಳಿಗೆ 100 ಮೀ., 200ಮೀ. ಓಟ, ಬಾಲ್ ಎಸೆತ, ಮಡಿಕೆ ಒಡೆಯುವುದು, 60 ವರ್ಷ ಮೇಲ್ಪಟ್ಟವರಿಗೆ 100 ಮೀ.ಓಟ ಹಾಗೂ ಮಡಿಕೆ ಒಡೆಯುವ ಸ್ಪರ್ಧೆ ಮಾತ್ರವಲ್ಲದೆ ಕಂಬ ಸುತ್ತು ಓಟ, ದಂಪತಿಗಳಿಗೆ ಹಾಳೆ ಎಳೆಯುವ ಸ್ಪರ್ಧೆ, ಬಾಟಲಿಗೆ ನೀರು ತುಂಬಿಸುವುದು, ಇನ್ನಿತರ ಮನೋರಂಜನಾತ್ಮಕ ಸ್ಪರ್ಧೆಗಳಲ್ಲಿ ಸಮಾಜ ಬಾಂಧವರು ಅತ್ಯಂತ ಉತ್ಸಾಹದಲ್ಲಿ ಭಾಗವಹಿಸಿ, ಸಂಭ್ರಮಿಸಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ನಾಥ ಪಂಥೀಯ ಜೋಗಿ ಸಮಾಜ ಬಾಂಧವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪುಷ್ಪಾವತಿ, ಕೀರ್ತನ್ ತೀರ್ಪುಗಾರರಾಗಿ ಸಹಕರಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡೋತ್ಸವದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಉಪಾಹಾರ, ಮಧ್ಯಾಹ್ನ ಭೋಜನ ಏರ್ಪಡಿಸಿದ್ದರು. ನೂರಾರು ಮಂದಿ ಸಮಾಜ ಬಾಂಧವರು ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದರು.