ಸಾಂಪ್ರದಾಯಿಕ ಕ್ರೀಡೆಗಳು-ವಿವಿಧ ಆಟಿ ತಿನಿಸುಗಳ ಪ್ರದರ್ಶನ
ಪುತ್ತೂರು: ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಆಟಿಕೂಟ ಹಾಗೂ ಕೆಸರುಗದ್ದೆ ಕ್ರೀಡಾ ಕಾರ್ಯಕ್ರಮಗಳು ಜು.20ರಂದು ಕಲ್ಲರ್ಪೆಯ ನಿವೃತ್ತ ಪಶುವೈದ್ಯ ಯೋಗೀಶ್ ರಾವ್‌ರವರ ಗದ್ದೆಯಲ್ಲಿ ನಡೆಯಿತು.
ದ. ಕ. ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮ ಮುಗ್ರೋಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಂಪ್ರದಾಯಿಕ ಕ್ರೀಡಾ ಕೂಟಕ್ಕೆ ಪುತ್ತೂರು ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘದ ಸ್ಥಾಪಕಾಧ್ಯಕ್ಷ ತಿಮ್ಮಪ್ಪ ಪಾಟಾಳಿ ಮೊಟ್ಟೆತಡ್ಕ ಗದ್ದೆಯಲ್ಲಿ ತೆಂಗಿನಕಾಯಿ ಹೊಡೆಯುವ ಮೂಲಕ ಚಾಲನೆ ನೀಡಿದರು. ನಿವೃತ್ತ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಾಣಿಯನ್ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ ಮಾತನಾಡಿ, ಬದಲಾದ ಜೀವನ ಪದ್ಧತಿಯಲ್ಲಿ ಮಕ್ಕಳಿಗೆ ಗದ್ದೆಯ ಪರಿಕಲ್ಪನೆಯೇ ಇಲ್ಲವಾಗಿದೆ. ಸಮಾಜ ಬಾಂಧವರು ಒಟ್ಟು ಸೇರಿ ಕಾರ್ಯಕ್ರಮ ಆಯೋಜಿಸುವ ಮೂಲಕ ಯುವ ಸಮುದಾಯಕ್ಕೆ ಗದ್ದೆಯಲ್ಲಿ ಇಳಿದು ಸಂಭ್ರಮಿಸುವುದರ ಜೊತೆಗೆ ಒಂದಷ್ಟು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಪರಿಚಯಿಸುವ ಕಾರ್ಯ ಸಂಘದಿಂದ ಮಾಡಲಾಗಿದೆ ಎಂದರು.
ಕ್ರೀಡಾ ಕೂಟಕ್ಕೆ ಗದ್ದೆ ಒದಗಿಸಿಕೊಟ್ಟ ಯೋಗೀಶ್ ರಾವ್ ದಂಪತಿಯನ್ನು ಸನ್ಮಾನಿಸಲಾಯಿತು. ಮಂಗಳೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಡಿ.ಎಸ್, ಈಶ್ವರಮಂಗಲ ಗಾಣಿಗ ಸಮುದಾಯ ಸೇವಾ ನಿರತ ಸಂಘದ ಅಧ್ಯಕ್ಷ ಚಂದ್ರ ಪೆರ್ನಾಜೆ, ದ.ಕ. ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಪುತ್ತೂರು ತಾಲೂಕಿನ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ಕೆಸರು ಗದ್ದೆ ಕ್ರೀಡೆಯಲ್ಲಿ ವಿವಿಧ ವಯೋಮಾನದ ಸಮಾಜ ಬಾಂಧವರಿಗಾಗಿ ವಿವಿಧ ಮನೋರಂಜನಾತ್ಮಕ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಅಂತರಾಷ್ಟ್ರೀಯ ಕ್ರೀಡಾಪಟು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಕುಕ್ಕುಪುಣಿ ಕ್ರೀಡಾಕೂಟ ನಡೆಸಿಕೊಟ್ಟರು. ಕ್ರೀಡೆಯಲ್ಲಿ ವಿಜೇತರಾದ ಸಮಾಜ ಬಾಂಧವರಿಗೆ ಸಂಘದ ಹಿರಿಯ ಸದಸ್ಯ ಅಪ್ಪಣ್ಣ ಪಾಟಾಳಿ ಬಹುಮಾನ ವಿತರಿಸಿದರು.
ಜೊತೆ ಕಾರ್ಯದರ್ಶಿ ಧನುಷಾ ಪ್ರಾರ್ಥಿಸಿದರು. ಕಾರ್ಯದರ್ಶಿ ಜಯಲಕ್ಷ್ಮಿ ಡಿ.ಎಸ್ ಸ್ವಾಗತಿಸಿ, ನಿಕಟಪೂರ್ವ ಅಧ್ಯಕ್ಷ ಸುಬ್ಬಪ್ಪ ಪಟ್ಟೆ ವಂದಿಸಿದರು. ಮಹೇಶ್ ಆಲಂಕಾರು ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಸಮಾಜ ಬಾಂಧವರು ತಮ್ಮ ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದ ಆಟಿ ವಿಶೇಷತೆಯುಲ್ಲ ಸುಮಾರು 25ಕ್ಕೂ ಅಧಿಕ ಖಾದ್ಯಗಳೊಂದಿ ಸಮಾಜ ಬಾಂಧವರು ಸಹಭೋಜನವನ್ನು ಸವಿದರು.