ಉಪ್ಪಿನಂಗಡಿ: ಲಾರಿಯೊಂದು ಇನ್ನೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ರಸ್ತೆ ಮಧ್ಯದಲ್ಲೇ ಮಗುಚಿ ಬಿದ್ದ ಘಟನೆ ಜು.23ರಂದು 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ನಡೆದಿದ್ದು, ಘಟನೆಯಿಂದ ಎರಡು ಲಾರಿಗಳ ಚಾಲಕರಿಗೆ ಗಾಯವಾಗಿದೆ.

ಗಾಯಗೊಂಡವರನ್ನು ಕುದ್ಮಾರು ಗ್ರಾಮದ ಹಬೀಬ್ (43) ಹಾಗೂ ಯಮುನಪ್ಪ (31) ಎಂದು ಗುರುತಿಸಲಾಗಿದೆ. ವಿಆರ್ಎಲ್ ಸಂಸ್ಥೆಗೆ ಸೇರಿದ ಲಾರಿಯನ್ನು ಅದರ ಚಾಲಕ ಯಮುನಪ್ಪ ಎಂಬವರು ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಬಂದಿದ್ದು, ಪೆರ್ನೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹಬೀಬ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಹಬೀಬ್ ಅವರು ಚಲಾಯಿಸಿಕೊಂಡು ಬರುತ್ತಿದ್ದ ಲಾರಿಯು ಹೆದ್ದಾರಿಯಲ್ಲಿ ಪೆರ್ನೆ ಕಡೆ ಹೋಗುವ ರಸ್ತೆಗೆ ತಿರುಗಿದೆ. ಈ ಸಂದರ್ಭ ಯಮುನಪ್ಪ ಚಲಾಯಿಸುತ್ತಿದ್ದ ಲಾರಿಯ ಹಿಂಬದಿ ಹಬೀಬ್ ಅವರ ಲಾರಿಯ ಮುಂಭಾಗಕ್ಕೆ ಢಿಕ್ಕಿ ಹೊಡೆದು, ಹೆದ್ದಾರಿಯಲ್ಲೇ ಮಗುಚಿ ಬಿದ್ದಿದೆ. ಗಾಯಾಳುಗಳನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.