@ ಸಿಶೇ ಕಜೆಮಾರ್
ಆಟಿ ತಿಂಗಳಿಗೆ ತುಳುನಾಡಿನಲ್ಲಿ ತನ್ನದೇ ಆದ ವಿಶೇಷತೆ ಇದೆ. ತುಳುವರ ಇಷ್ಟ ಮತ್ತು ಕಷ್ಟದ ತಿಂಗಳು ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಆಟಿ ತಿಂಗಳಲ್ಲಿ ಬರುವ ‘ಅಮಾವಾಸ್ಯೆ’ ಯನ್ನು ‘ ಆಟಿದ ಅಮಾಸೆ’ ಎಂದೇ ಆಚರಿಸಲಾಗುತ್ತದೆ. ತುಳುನಾಡಿನಲ್ಲಿ ವರ್ಷದ ಮೊದಲ ಹಬ್ಬ ಆರಂಭವಾಗುವುದೇ ಈ ಆಟಿಯ ಅಮಾವಾಸ್ಯೆಯ ಮೂಲಕ. ಆಟಿದ ಅಮಾವಾಸ್ಯೆಯ ಬಳಿಕ ಸಾಲು ಸಾಲು ಹಬ್ಬಗಳು ಬರುತ್ತವೆ. ಆಟಿದ ಅಮಾವಾಸ್ಯೆಗೆ ತುಳುನಾಡಿನಲ್ಲಿ ಬಹಳ ವಿಶೇಷ ಸ್ಥಾನಮಾನವಿದೆ. ದೈವಗಳಿಗೆ ಅಗೇಲು ಕೊಡುವ ಕ್ರಮ ಕೂಡ ಈ ದಿನವೇ ನಡೆಯುತ್ತದೆ. ತುಳುವರು ದೈವರಾಧಕರಾಗಿದ್ದು ಮನೆಯ ದೈವಗಳಿಗೆ ಈ ದಿನ ವಿಶೇಷವಾದ ಅಗೇಲು ಬಡಿಸುವ ಕ್ರಮ ಮಾಡುತ್ತಾರೆ.
ಇದಲ್ಲದೆ ನಮ್ಮನ್ನಗಲಿದ ಮನೆಯ ಸದಸ್ಯರಿಗೆ ಅಂದರೆ ಪ್ರೇತಗಳಿಗೆ ಬಡಿಸುವ ಕ್ರಮವೂ ಇದೇ ಆಟಿಯ ಅಮಾವಾಸ್ಯೆಯ ದಿನ ನಡೆಯುತ್ತದೆ. ತುಳುವರದ್ದು ಕೂಡು ಕುಟುಂಬ ಪದ್ಧತಿ. ಹಾಗಿದ್ದ ಮೇಲೆ ಸಾವು ಇಲ್ಲದ ಮನೆಯನ್ನು ಹುಡುಕುವುದು ಕಷ್ಟ. ಮನುಷ್ಯನ ಆತ್ಮವನ್ನು ತುಳುವರು ಪ್ರೇತ, ಕುಲೆ ಎಂದು ನಂಬುತ್ತಾರೆ. ಮನೆಯಲ್ಲಿ ಮರಣ ಹೊಂದಿದವರಿಗೆ ಆಟಿ ಅಮಾವಾಸ್ಯೆ ದಿನ ವಿಶೇಷ ಅಗೇಲು ಬಡಿಸುವ ಕ್ರಮ ತುಳುನಾಡಿನಲ್ಲಿ ನಡೆಯುತ್ತದೆ.
ಇನ್ನು ಆಟಿ ಅಮಾವಾಸ್ಯೆಯ ಮತ್ತೊಂದು ವಿಶೇಷವೆಂದರೆ ಈ ದಿನ ಹಾಲೆ ಮರದ ರಸ ಅಂದರೆ ‘ಆಟಿದ ಮರ್ದ್’ ಕುಡಿಯುವ ಕ್ರಮ ನಡೆಯುತ್ತದೆ. ಪ್ರತಿ ಮನೆಯಲ್ಲೂ ಈ ಆಟಿದ ಮರ್ದ್ ಕುಡಿಯುವ ಕ್ರಮ ನಡೆದರೆ ಕೆಲವೊಂದು ದೈವಸ್ಥಾನ, ದೇವಸ್ಥಾನಗಳಲ್ಲೂ ಬೆಳಗ್ಗಿನ ಜಾವ ಭಕ್ತರಿಗೆ ಆಟಿದ ಮರ್ದ್(ಹಾಲೆ ಮರದ ಕಷಾಯ) ವಿತರಣೆ ನಡೆಯುತ್ತದೆ. ಕನ್ನಡದಲ್ಲಿ ಹಾಲೆ ಮರ ಕರೆಯುವ ಈ ಮರವನ್ನು ತುಳುವಿನಲ್ಲಿ ಬಲಿಯೇಂದ್ರ ಮರ ಎಂತಲೂ ಇಂಗ್ಲೀಷ್ನಲ್ಲಿ ಡೆವಿಲ್ ಟ್ರೀ ಎಂದು ಕರೆಯುತ್ತಾರೆ. ಈ ಮರದ ತೊಗಟೆಯ ರಸವನ್ನು ಈ ದಿನ ಕುಡಿಯುತ್ತಾರೆ. ಮುಂಜಾವಿನ ವೇಳೆಗೆ ಹಾಲೆ ಮರದ ಬಳಿ ತೆರಳಿ ಒಂದು ಚೂಪು ಕಲ್ಲಿನಿಂದ ಜಜ್ಜಿ ಮರದ ತೊಗಟೆಯನ್ನು ತೆಗೆಯಲಾಗುತ್ತದೆ. ಇಲ್ಲಿ ಕತ್ತಿ ಸೇರಿದಂತೆ ಕಬ್ಬಿಣದ ವಸ್ತುಗಳನ್ನು ಬಳಸಬಾರದು ಎಂಬುದು ಹಿರಿಯರ ನಿಯಮವಿದೆ. ಏಕೆಂದರೆ ಲೋಹದ ಅಂಶ ಮರಕ್ಕೆ ತಾಗಿದರೆ ಔಷಧೀಯ ಗುಣಗಳು ನಾಶವಾಗುತ್ತದೆ ಎನ್ನಲಾಗಿದೆ. ಹೀಗೆ ತಂದ ತೊಗಟೆಯಿಂದ ರಸ ತೆಗೆದು ಅದನ್ನು ಸೋಸಿ ಕುಡಿಯುತ್ತಾರೆ. ಇದಲ್ಲದೆ ಇದನ್ನು ಕಷಾಯ ಮಾಡಿಕೊಂಡು ಕೂಡ ಕುಡಿಯಲಾಗುತ್ತದೆ. ಕಷಾಯಕ್ಕೆ ಓಮ, ಬೆಳ್ಳುಳ್ಳಿ, ಅರಿಶಿಣ, ಕರಿಮೆಣಸು ಇತ್ಯಾದಿಗಳನ್ನು ಬಳಸಲಾಗುತ್ತದೆ. ಈ ರಸದಲ್ಲಿ ವಿಶೇಷವಾದ ಔಷಧೀಯ ಗುಣವಿದೆ ಎಂದು ನಂಬಲಾಗಿದೆ. ಆಟಿ ಅಮಾವಾಸೆ ದಿನ ಸಾವಿರದೊಂದು ಬಗೆಯ ಔಷಧಿಗಳು ಈ ರಸದಲ್ಲಿ ಕೂಡಿಕೊಂಡಿರುತ್ತವೆ ಎಂಬುದು ತುಳುವರ ನಂಬಿಕೆ. ವೈಜ್ಞಾನಿಕವಾಗಿಯೂ ಈ ಬಗ್ಗೆ ಸಾಬೀತು ಆಗಿದ್ದು ಹಾಲೆ ಮರದ ಕಷಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಇದನ್ನು ಸೇವಿಸುವುದರಿಂದ ಶೀತ ದೂರವಾಗುತ್ತದೆ, ಜೀರ್ಣಾಂಗದ ಸಮಸ್ಯೆ ಸೇರಿದಂತೆ ಕ್ಯಾನ್ಸರ್ನಂತಹ ಮಾರಕ ರೋಗಗಳನ್ನು ತರುವಂತಹ ಬ್ಯಾಕ್ಟೀರಿಯಾಗಳು ಕೂಡ ಇದರಿಂದ ನಾಶವಾಗುತ್ತದೆ ಎನ್ನುತ್ತದೆ ವೈದ್ಯಲೋಕ. ಒಟ್ಟಿನಲ್ಲಿ ಹಲವು ಔಷಧೀಯ ಗುಣಗಳನ್ನು ಹೊಂದಿರುವ ಹಾಲೆ ಮರದ ಕಷಾಯವನ್ನು ಆಟಿ ಅಮಾವಾಸ್ಯೆಯ ದಿನ ಕುಡಿದು ನಮ್ಮಲ್ಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳೋಣ…