ಜೇಸಿಐ ಆಲಂಕಾರು ಘಟಕದಿಂದ ಆಟಿ ಆಚರಣೆ, ಸನ್ಮಾನ

0

ಆಲಂಕಾರು: ತುಳುನಾಡು ನಾಗಾರಾಧನೆ, ಭೂತರಾಧನೆ ಜೊತೆಗೆ ವೈಜ್ಞಾನಿಕ ನೆಲಗಟ್ಟಿನಿಂದ ಕೂಡಿದ ಆಚರಣೆಗಳಿಗೆ ಪ್ರಸಿದ್ದಿ ಪಡೆದಿದೆ. ಆಟಿ ತಿಂಗಳ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಖುಷಿಯಿಂದ ಅನುಭವಿಸಬೇಕು. ಆಟಿ ತಿಂಗಳಲ್ಲಿ ತಯಾರಿಸುವ ಸಸ್ಯಹಾರಿ ಖಾದ್ಯಗಳಲ್ಲಿ ಔಷಧೀಯ ಗುಣಗಳಿವೆ. ಎಲ್ಲರೂ ಒಟ್ಟಾಗಿ ಆಟಿ ಆಚರಣೆ ಮಾಡುವ ಮೂಲಕ ಪರಸ್ಪರ ಸಹಕಾರ, ಆಚಾರ ವಿಚಾರಗಳ ವಿನಿಮಯ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಆಲಂಕಾರು ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಅಕ್ಷತಾ ಶೇಖರ್ ಹೇಳಿದರು.
ಅವರು ಜೇಸಿಐ ಆಲಂಕಾರು ಘಟಕದಿಂದ ಜು.೨೩ರಂದು ಸಾಯಂಕಾಲ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತುಳು ಸಂಸ್ಕೃತಿಯೂ ಬಿನ್ನತೆಯಿಂದ ಕೂಡಿದ್ದು, ಪ್ರತಿಯೊಬ್ಬರಿಗೂ ಪ್ರೀತಿ ಹಂಚುತ್ತದೆ. ಪ್ರಸಕ್ತ ಆಟಿ ಆಚರಣೆಗಳಲ್ಲಿ ನಮ್ಮ ಹಿರಿಯರು ಅನುಭವಿಸಿದ ಆಟಿ ತಿಂಗಳ ದಿನಗಳನ್ನು ಮೆಲುಕು ಹಾಕಲಾಗುತ್ತದೆ. ಆ ಮೂಲಕ ನಾವೆಲ್ಲರೂ ತುಳು ಸಂಸ್ಕೃತಿ ಬೆಳೆಸುವ ಕಾರ್ಯ ಮಾಡೋಣ ಎಂದರು.

ಅತಿಥಿಯಾಗಿದ್ದ ಜೆಸಿಐ ವಲಯ 15ರ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ನಾವು ಸಂಘಟಿತರಾಗಿ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಕೊಂಡು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕೆಲಸವಾಗಬೇಕು ಎಂದರು.

ಸನ್ಮಾನ:
ಕಾರ್ಯಕ್ರಮದಲ್ಲಿ ಪತ್ರಕರ್ತ ಪ್ರವೀಣ್‌ರಾಜ್ ಕೊಲ, ಆಲಂಕಾರಿನ ವೈದ್ಯೆ ಡಾ.ಕೃತಿ ಶೆಟ್ಟಿ, ಉದ್ಯಮಿ, ಇಂಜಿನಿಯಾರ್ ಮನೋಹರ್ ಕೋಳೆಂಜಿರೋಡಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಅಯೋಜಿಸಿದ ವಿವಿಧ ಮನೋರಂಜನಾ ಕ್ರೀಡೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಮಹಿಳಾ ಜೇಸಿ ಅಧ್ಯಕ್ಷೆ ಸುನಿತಾ ಜಿ ರೈ, ನಿಕಟಪೂರ್ವ ಅಧ್ಯಕ್ಷೆ ಮಮತಾ ಅಂಬರಾಜೆ, ಜೂನಿಯರ್ ಜೆಸಿ ಅಧ್ಯಕ್ಷೆ ಕೃತಿ ಕೆ.ಎಸ್.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೇಸಿ ಪದಾಧಿಕಾರಿಗಳಾದ ಚೇತನ್ ಮೊಗ್ರಲ್, ಗುರುಕಿರಣ್, ಹೇಮಲತಾ ಬಾಕಿಲ, ಪೂರ್ಣೇಶ್ ಬಾಬ್ಲಬೆಟ್ಟು ಅತಿಥಿಗಳ ಹಾಗು ಸನ್ಮಾನಿತರನ್ನು ಪರಿಚಯಿಸಿದರು. ಜೇಸಿಐ ಆಲಂಕಾರು ಘಟಕದ ಅಧ್ಯಕ್ಷ ಗುರುರಾಜ್ ರೈ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ್ ಪಾಟಾಳಿ ವಂದಿಸಿದರು.

LEAVE A REPLY

Please enter your comment!
Please enter your name here