ನೆಲ್ಯಾಡಿ: ಆಹಾರ ಪದಾರ್ಥ ಸಾಗಾಟ ಮಾಡುತ್ತಿದ್ದ ಲಾರಿ ಚರಂಡಿಗೆ ಬಿದ್ದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಜು.22ರಂದು ಸಂಜೆ ನಡೆದಿದೆ.
ಚಾಲಕ ಉದಯ ಭಂಡಾರಿ ಗಾಯಗೊಂಡವರಾಗಿದ್ದಾರೆ. ಇವರು ಜು.22ರಂದು ಲಾರಿಯಲ್ಲಿ ಬೆಂಗಳೂರಿನಿಂದ ಎಂ.ಟಿ.ಆರ್ ಪುಡ್ ಸಾಮಾಗ್ರಿಗಳನ್ನು ಲೋಡ್ ಮಾಡಿಕೊಂಡು ಮಂಗಳೂರು, ಉಡುಪಿ ಹಾಗೂ ಕುಂದಾಪುರ ಕಡೆಗೆ ಸಾಗಾಟ ಮಾಡಲು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ತಿರುವು ರಸ್ತೆಯಲ್ಲಿ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋದ ಪರಿಣಾಮ ಲಾರಿಯು ರಸ್ತೆಯ ಬಲಬದಿಯ ಚರಂಡಿಗೆ ಬಿದ್ದಿದೆ.
ಘಟನೆಯಲ್ಲಿ ಲಾರಿಯು ಜಖಂಗೊಂಡಿದೆ. ಚಾಲಕ ಉದಯ ಭಂಡಾರಿಯವರ ಎಡಕೈ ಹಾಗೂ ಬಲಕಾಲಿಗೆ ಗಾಯವಾಗಿದ್ದು, ನೆಲ್ಯಾಡಿ ಅಶ್ಚಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಲಾರಿ ಮಾಲಕ ಬೆಂಗಳೂರು ಜೆ.ಸಿ.ನಗರ ನಿವಾಸಿ ರವೀಂದ್ರ ಭಟ್ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
