ಹವಾಮಾನ ಆಧಾರಿತ ಬೆಲೆ ವಿಮೆ ಪರಿಹಾರದಲ್ಲಿ ಭಾರಿ ಕಡಿತ -ಸದಸ್ಯರ ಆಕ್ರೋಶ
ಪೂರ್ಣ ಪ್ರಮಾಣದಲ್ಲಿ ವಿಮಾ ಸೌಲಭ್ಯ ದೊರಕಿಸಲು ಸರಕಾರಕ್ಕೆ ಬರೆಯಲು ನಿರ್ಣಯ
ಪುತ್ತೂರು: ಹವಾಮಾನ ಆಧಾರಿತ ಬೆಲೆ ವಿಮೆ ಪರಿಹಾರ ರೈತರ ಖಾತೆಗೆ ಜಮಾ ಆಗಲು ಪ್ರಾರಂಭವಾಗಿದ್ದು ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಳೆಗಾಲವೇ ಮುಗಿದಿಲ್ಲ ಇದು ಎಲ್ಲರ ಗಮನಕ್ಕೂ ಬಂದಿದೆ. ಆದರೆ ಇವತ್ತು ಈ ವಿಮಾ ಕಂಪನಿಗಳು ರಾಜ್ಯ ಸರ್ಕಾರದ ಗಮನಕ್ಕೆ ತಂದೋ , ತಾರದೆಯೋ ರೈತರಿಗೆ ವಂಚನೆ ಮಾಡುತ್ತಿರುವ ಹಾಗೆ ಕಂಡುಬರುತ್ತಿದೆ. ಹಾಗಾಗಿ ಸರಕಾರ ತಕ್ಷಣ ರೈತರಿಗೆ ಪೂರ್ಣ ಪ್ರಮಾಣದಲ್ಲಿ ವಿಮಾ ಸೌಲಭ್ಯ ಲಭಿಸುವಂತಾಗಲು ಕ್ರಮ ತೆಗೆದುಕೊಳ್ಳಬೇಕು ಇಲ್ಲವೇ ರೈತರ ಸಾಲ ಮನ್ನಾ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಈ ಬಗ್ಗೆ ಸರ್ಕಾರ ತಕ್ಷಣ ಗಮನಹರಿಸಬೇಕಿದೆ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಎಂದು ಸದಸ್ಯ ಮಹೇಶ್ ಕೇರಿ ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ದ.11 ರಂದು ಗ್ರಾಪಂ ಕಛೇರಿ ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಹವಾಮಾನ ವೈಪರೀತ್ಯದಿಂದ ರೈತರು ಸಂಕಷ್ಟಕ್ಕೆ ಒಳಗಾಗಬಾರದು ಎಂದು ಕೇಂದ್ರ ಸರ್ಕಾರ 2015 ರಿಂದ ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಪ್ರಕಾರ ರೈತರು ಎಕರೆಗೆ ಪ್ರೀಮಿಯಂ ಮೊತ್ತದ ಶೇ 10% ಪಾವತಿಸಿದರೆ ಉಳಿದ ಪ್ರೀಮಿಯಂ ಮೊತ್ತವನ್ನು ರೈತರ ಪರವಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಮಾನವಾಗಿ ಎಕರೆಗೆ ಸುಮಾರು 18೦೦೦ ದಷ್ಟು ಪ್ರೀಮಿಯಂ ಮೊತ್ತವನ್ನು ಕಂಪೆನಿಗೆ ಪಾವತಿ ಮಾಡಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರ ಪರವಾಗಿ ಪಾವತಿ ಮಾಡುವ ಪ್ರೀಮಿಯಂ ಮೊತ್ತವನ್ನು ದ್ವಿಗುಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಈ ಪ್ರಕಾರ ಗರಿಷ್ಠ ಪರಿಹಾರ ಮೊತ್ತ ಎಕರೆಗೆ 51೦೦೦ ದಷ್ಟು ಪಾವತಿ ಮಾಡಬೇಕೆಂದು ಎಂದು ಪರಿಸ್ಕ್ರತ ಬೆಲೆ ವಿಮೆಯ ಕರಾರು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಳೆಗಾಲವೇ ಮುಗಿದಿಲ್ಲ ಇದು ಎಲ್ಲರ ಗಮನಕ್ಕೂ ಬಂದಿದೆ. ಆದರೆ ಇವತ್ತು ಈ ವಿಮಾ ಕಂಪನಿಗಳು ರಾಜ್ಯ ಸರ್ಕಾರದ ಗಮನಕ್ಕೆ ತಂದೋ , ತಾರದೆಯೋ ರೈತರಿಗೆ ವಂಚನೆ ಮಾಡುತ್ತಿರುವ ಹಾಗೆ ಕಂಡುಬರುತ್ತಿದೆ. ಹಾಗಾಗಿ ಸರಕಾರ ತಕ್ಷಣ ರೈತರಿಗೆ ಪೂರ್ಣ ಪ್ರಮಾಣದಲ್ಲಿ ವಿಮಾ ಸೌಲಭ್ಯ ಲಭಿಸುವಂತಾಗಲು ಕ್ರಮ ತೆಗೆದುಕೊಳ್ಳಬೇಕು ಇಲ್ಲವೇ ರೈತರ ಸಾಲ ಮನ್ನಾ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಸರ್ಕಾರ ತಕ್ಷಣ ಗಮನಹರಿಸಬೇಕಿದೆ ಎಂದು ಮಹೇಶ್ ರೈ ಕೇರಿ ಹೇಳಿದರು. ಈ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿಕೊಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಕುಟ್ಟಿನೋಪಿನಡ್ಕದಲ್ಲಿ ರಸ್ತೆಯಲ್ಲಿ ಇಟ್ಟಿರುವ ಮೋರಿಯಿಂದ ವಾಹನ ಸಂಚಾರಕ್ಕೆ ಅಡಚಣೆ
ಕುಟ್ಟಿನೋಪಿನಡ್ಕ ಎಂಬಲ್ಲಿ ಕಲ್ಲಡ್ಕ , ನೀರ್ಪಾಡಿ ಗೆ ಹೋಗುವ ರಸ್ತೆಯಲ್ಲಿ ಯಾವುದೇ ಅನುಮತಿ ಪಡೆಯದೆ ಮೋರಿಯನ್ನು ಸರ್ಕಲ್ ರೀತಿಯಲ್ಲಿ ಇರಿಸಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ ಮತ್ತು ಅಪಘಾತಗಳು ಸಂಭವಿಸುತ್ತವೆ ಈ ಬಗ್ಗೆ ಕಳೆದ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರು ದೂರು ನೀಡಿದ್ದರು ಈ ಬಗ್ಗೆ ಏನು ಕ್ರಮ ವಹಿಸಲಾಗಿದೆ ಎಂದು ಸದಸ್ಯ ಮಹೇಶ್ ಕೇರಿ ಪ್ರಶ್ನಿಸಿದರು , ಸಭೆಗೆ ಉತ್ತರ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ರವರು ಈ ಬಗ್ಗೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿಗಳ ದೂರು ಪ್ರಾಧಿಕಾರಕ್ಕೆ ಅಲ್ಲಿಯವರು ದೂರು ಸಲ್ಲಿಸಿದ್ದಾರೆ. ನಮ್ಮಲ್ಲಿ ಇದರ ವರದಿಯನ್ನು ಕೇಳಿದ್ದಾರೆ. ನಾವು ಯಥಾಸ್ಥಿತಿ ಛಾಯಾಚಿತ್ರ ತೆಗೆದು ವರದಿಯನ್ನು ನೀಡಿದ್ದೇವೆ. ಇನ್ನು ಅಲ್ಲಿಂದ ನಮಗೆ ಉತ್ತರ ಬರದೆ ನಾವು ಮುಂದುವರಿಯಲು ಆಗುವುದಿಲ್ಲ ಎಂದು ತಿಳಿಸಿದರು.
ಇ-ಸ್ವತ್ತು ತಂತ್ರಾಂಶ ದಲ್ಲಿ ತೊಡಕು ಕಡತಗಳು ಬಾಕಿ
ಗ್ರಾಮ ಪಂಚಾಯತ್‌ಗಳ ಇ-ಸ್ವತ್ತು ತಂತ್ರಾಂಶ ದಲ್ಲಿನ ತಾಂತ್ರಿಕ ತೊಡಕಿನಿಂದಾಗಿ ಸಾರ್ವಜನಿಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿಲ ಎಂದು ಅಭಿವೃದ್ಧಿ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಬರೆದು ಕೊಳ್ಳಲು ತೀರ್ಮಾನಿಸಲಾಯಿತು.
ನೀರಿನ ಶುಲ್ಕ , ಕಟ್ಟಡ ತೆರಿಗೆ ಪಾವತಿ ನಿರೀಕ್ಷಿತ ಪ್ರಗತಿ ಇಲ್ಲ
ಪ್ರಸಕ್ತ ಸಾಲಿನಲ್ಲಿ ಕಟ್ಟಡ ತೆರಿಗೆ ಪಾವತಿ, ನೀರಿನ ಶುಲ್ಕ ಪಾವತಿಯಲ್ಲಿ ನಮ್ಮ ಪಂಚಾಯತ್‌ನಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಚರ್ಚಿಸಿ ರೂ. 2000 ಕ್ಕಿಂತ ಅಧಿಕ ಮೊತ್ತದ ನೀರಿನ ಶುಲ್ಕ ಪಾವತಿ ಮಾಡದೇ ಇರುವ ಫಲಾನುಭವಿಗಳಿಗೆ ಅಂತಿಮ ಗಡುವಿನ ನೋಟೀಸ್ ನೀಡಬೇಕು. ಅಂತಿಮ ಗಡುವಿನೊಳಗೆ ಶುಲ್ಕ ಪಾವತಿ ಮಾಡದೇ ಇದ್ದರೆ ನಳ್ಳಿ ನೀರಿನ ಸಂಪರ್ಕ ಕಡಿತ ಮಾಡುವುದೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. 15 ನೇ ಹಣಕಾಸು ನಿಧಿಯ ಬಡ್ಡಿ ಹಣವನ್ನು ಕುಡಿಯುವ ನೀರು ಸ್ಥಾವರದ ವಿದ್ಯುತ್ ಬಿಲ್ ಪಾವತಿ ಮಾಡುವುದು ಎಂದು ನಿರ್ಣಯಿಸಲಾಯಿತು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ಮಹೇಶ್ ರೈ ಕೇರಿ, ಪ್ರದೀಪ್, ಲತೀಫ್ ಟೈಲರ್, ಸಿರಾಜುದ್ದೀನ್, ಸುಂದರಿ, ಚಿತ್ರಾ ಬಿ.ಸಿ, ನಳಿನಾಕ್ಷಿ, ರೇಖಾ ಯತೀಶ್, ನಿಮಿತಾ ರೈ, ಶಾರದಾ ಆಚಾರ್ಯರವರುಗಳು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಕೆ.ರವರು ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಓದಿದರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಕೇಶವ, ಗುಲಾಬಿ, ಜಾನಕಿ, ಲೋಕನಾಥ್, ಮೋಹನ್ ಕೆ.ಪಿ, ಸಿರಿನಾ ಸಹಕರಿಸಿದ್ದರು.
ದ.24 ಮಕ್ಕಳ ಗ್ರಾಮಸಭೆ
ಗ್ರಾಮ ಪಂಚಾಯತ್ ಮಕ್ಕಳ ಗ್ರಾಮಸಭೆಯು ದಶಂಬರ್ 24 ಕ್ಕೆ ನಡೆಸುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
‘ ದ.ಕ ಜಿಲ್ಲೆಯಲ್ಲಿ ಈ ವರ್ಷ ಅತ್ಯಧಿಕ ಮಳೆ ಸುರಿದಿದ್ದು ರೈತರಿಗೆ ಅಪಾರ ಕೃಷಿ ನಷ್ಟ ಉಂಟಾಗಿದೆ. ಇದಲ್ಲದೆ ಅಡಿಕೆಗೆ ವಿವಿಧ ರೀತಿಯ ರೋಗಬಾಧೆಯಿಂದ ಅಡಿಕೆ ಮರ ಸಾಯುತ್ತಿದೆ. ಹೀಗಿದ್ದರೂ ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ರೈತರಿಗೆ ಅತೀ ಕಡಿಮೆ ಮೊತ್ತದ ಪರಿಹಾರ ಸಿಕ್ಕಿರುವುದು ಸರಿಯಲ್ಲ ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ವಿನಂತಿ.’
ಅಶ್ರಫ್ ಉಜಿರೋಡಿ, ಉಪಾಧ್ಯಕ್ಷರು ಒಳಮೊಗ್ರು ಗ್ರಾಪಂ
