ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿನ ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ದಾರಿಯಲ್ಲಿ ಶಾಲೆಯ ಬಸ್ ಅನ್ನು ಅಡ್ಡಲಾಗಿ ನಿಲ್ಲಿಸಿ ಪೋಷಕ ಪ್ರತಿನಿಧಿಗಳಿಗೆ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಹಾಗೂ ಮನೆಗೆ ಕರೆದೊಯ್ಯಲು ತೊಂದರೆಯಾಗುತ್ತಿರುವ ಬಗ್ಗೆ ಪೋಷಕ ಪ್ರತಿನಿಧಿ ಹಾಗೂ ಬಸ್ ಚಾಲಕನ ನಡುವೆ ವಾಗ್ಯುದ್ದ ನಡೆದು, ಸ್ಥಳದಲ್ಲಿ ಜನರು ಜಮಾಯಿಸಿದ ಘಟನೆ ಜು.26ರಂದು ಬೆಳಿಗ್ಗೆ ನಡೆದಿದೆ.

ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಮೂರು ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಚರ್ಚ್ ನ ಬಲಬದಿಯಲ್ಲಿ ಸಂತ ವಿಕ್ಟರ್ ಆಂಗ್ಲ ಮಾದ್ಯಮ ಶಾಲೆ ಹಾಗೂ ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆ ಇದೆ. ಇವೆರಡು ಶಾಲೆಗೆ ಹೋಗಲು ಒಂದೇ ದಾರಿ ಹೊಂದಿದ್ದು ಆ ದಾರಿಯಲ್ಲಿ ಶಾಲೆಯ ಬಸ್ ಅನ್ನು ಬೆಳಿಗ್ಗೆ ಹಾಗೂ ಸಂಜೆ ಪಾರ್ಕ್ ಮಾಡಲಾಗುತ್ತಿತ್ತು. ಈ ಬಸ್ ಪಾರ್ಕ್ ಮಾಡುವುದರಿಂದ ಮಕ್ಕಳ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಮತ್ತು ಮನೆಗೆ ಕರೆದೊಯ್ಯಲು ತೊಂದರೆಯಾಗುತ್ತಿರುವ(ಮೊದಲೇ ಮಳೆಗಾಲ ಬೇರೆ) ಬಗ್ಗೆ ತಿಂಗಳ ಹಿಂದೆ ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಸಭೆಯಲ್ಲಿ ಪೋಷಕ ಪ್ರತಿನಿಧಿಯೋರ್ವರು ಧ್ವನಿಯನ್ನು ಎತ್ತಿದ್ದರು. ಆದರೆ ಇಲ್ಲಿಯವರೆಗೆ ಬಸ್ ತೆರವು ಆಗಿರಲಿಲ್ಲ. ಈ ಕುರಿತು ಪೋಷಕ ಪ್ರತಿನಿಧಿ ಶನಿವಾರದಂದು ಚರ್ಚ್ ವಠಾರದಲ್ಲಿದ್ದ ಪಾರ್ಕ್ ಮಾಡಿದ ಬಸ್ ಚಾಲಕನಲ್ಲಿ ಈ ಕುರಿತು ವಿಚಾರಿಸಿದಾಗ ಮಾತಿಗೆ ಮಾತು ಬೆಳೆದು, ಅವಾಚ್ಯ ಶಬ್ದಗಳಿಂದ ಬೈದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ.
ಶುಲ್ಕ ಶಾಲೆಗೆ ಕಟ್ಟಿದ್ದು..
ಬಸ್ ತೆರವು ಕುರಿತು ಪೋಷಕ ಪ್ರತಿನಿಧಿಯು ಶಾಲೆಯ ಮುಖ್ಯ ಶಿಕ್ಷಕರಲ್ಲಿ ಮತ್ತೊಮ್ಮೆ ವಿಚಾರಿಸಿದಾಗ ಅವರು, ನೀವು ಶಾಲಾ ಸಂಚಾಲಕರಲ್ಲಿ ಮಾತನಾಡಿ ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಪೋಷಕ ಪ್ರತಿನಿಧಿ, ನಾನು ಶಾಲೆಗೆ ಶುಲ್ಕ ಕಟ್ಟಿದ್ದು, ನೀವೇ ಸಂಚಾಲಕರಲ್ಲಿ ಮಾತನಾಡಿ. ತಿಂಗಳ ಹಿಂದೆ ನಡೆದ ಶಾಲೆಯ ರಕ್ಷಕ-ಶಿಕ್ಷಕ ಸಭೆಯಲ್ಲಿ ಸಂಚಾಲಕರ, ಚರ್ಚ್ ಉಪಾಧ್ಯಕ್ಷರ ಎದುರಿನಲ್ಲೇ ಈ ಕುರಿತು ಪ್ರಸ್ತಾಪ ಮಾಡಿದ್ದೇನಲ್ಲ ಎಂದಿದ್ದರು.
2 ದಿನ ಟೈಮ್ ಕೊಡಿ..
ಸದ್ರಿ ಸ್ಥಳದಲ್ಲಿ ಜನ ಸೇರಿದನ್ನು ಕಂಡು ಚರ್ಚ್ ಉಪಾಧ್ಯಕ್ಷರವರು ಸ್ಥಳಕ್ಕೆ ಆಗಮಿಸಿದ್ದು, ಕೇವಲ ಎರಡೇ ದಿನ ಟೈಮ್ ಕೊಡಿ, ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದಿದ್ದಾರೆ.
ಅಲ್ಲಲ್ಲಿ ಗೇಟ್ ಗಳು ಹಾಕಿ ತೊಂದರೆ..
ಚರ್ಚ್ ಆವರಣದಲ್ಲಿನ ಶಾಲೆಗಳಿಗೆ ಮಕ್ಕಳನ್ನು ಹಲವಾರು ಪೋಷಕ ಪ್ರತಿನಿಧಿಗಳು ತಮ್ಮ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬರುತ್ತಿದ್ದರು. ಮಳೆಗಾಲದಲ್ಲಿ ತಮ್ಮ ಮಕ್ಕಳಿಗೆ ರೈನ್ ಕೋಟ್ ತೊಡಿಸಿ ಬರುತ್ತಿದ್ದರೂ ಶಾಲೆಯ ಆವರಣದಲ್ಲಿ ಮಕ್ಕಳ ರೈನ್ ಕೋಟ್ ತೆಗೆಯಲು ಅಲ್ಲಲ್ಲಿ ಅವಕಾಶಗಳು ತೆರೆದುಕೊಂಡಿದ್ದವು. ಇದೀಗ ಅಂತಹ ಜಾಗಗಳಲ್ಲಿ ಗೇಟ್ ಗಳನ್ನು ಅಳವಡಿಸಿ ಮುಚ್ಚಿಸಲಾಗಿದ್ದು, ಮಕ್ಕಳ ರೈನ್ ಕೋಟ್ ತೆಗೆಸಲು(ಅದರಲ್ಲೂ ಮಹಿಳೆಯರು) ಹರಸಾಹಸ ಪಡಬೇಕಾಗಿದೆ ಎಂದು ಘಟನಾ ಸ್ಥಳದಲ್ಲಿದ್ದವರು ಮಾತನಾಡಿಕೊಳ್ಳುತ್ತಿದ್ದರು.