ಮಂಗಳೂರಿನಲ್ಲಿ ನಡೆದಿದ್ದ ಗುಂಪು ಹತ್ಯೆ ಪ್ರಕರಣ – ಎಸ್.ಪಿ.ಪಿ.ಯಾಗಿ ಶಿವಪ್ರಸಾದ್ ಆಳ್ವ ನೇಮಕ

0

ಪುತ್ತೂರು: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕುಡುಪು ಎಂಬಲ್ಲಿ ಎಪ್ರಿಲ್ 27ರಂದು ನಡೆದಿದ್ದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸರಕಾರದ ಪರ ವಾದಿಸಲು ಕೆ. ಶಿವಪ್ರಸಾದ್ ಆಳ್ವ ಅವರನ್ನು ಸರಕಾರ ನೇಮಕ ಮಾಡಿದೆ.


ಕೇರಳದ ವಯನಾಡು ನಿವಾಸಿ ಅಶ್ರಫ್ ಎಂಬವರನ್ನು ಕ್ರಿಕೆಟ್ ಆಡುತ್ತಿದ್ದ ಯುವಕರು ಥಳಿಸಿ ಕೊಲೆ ಮಾಡಿದ್ದರು. ಅಶ್ರಫ್ ಪಾಕಿಸ್ಥಾನ ಪರ ಘೋಷಣೆ ಕೂಗಿದ್ದಕ್ಕಾಗಿ ಈ ಹತ್ಯೆ ನಡೆಸಲಾಗಿದೆ ಎಂದು ಆರಂಭದಲ್ಲಿ ಹೇಳಲಾಗಿದ್ದರೂ, ಬಳಿಕ ಆ ಕಾರಣಕ್ಕಾಗಿ ಕೊಲೆ ನಡೆದಿಲ್ಲ ಎಂದು ಹೇಳಲಾಗಿತ್ತು. ಅಮಾಯಕ ಅಶ್ರಫ್ ಕೊಲೆ ಪ್ರಕರಣ ಬಳಿಕ ಭಾರೀ ಚರ್ಚೆಗೆ ಕಾರಣವಾಗಿತ್ತು.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮ 37/2025ರಂತೆ ಗುಂಪು ಹತ್ಯೆ ಪ್ರಕರಣ ದಾಖಲಿಸಿದ್ದ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಹತ್ಯೆಯಲ್ಲಿ ಪ್ರಭಾವಿಗಳ ಹೆಸರು ಕೇಳಿ ಬಂದಿದ್ದರಿಂದ ಭಾರೀ ಸಂಚಲನ ಸೃಷ್ಠಿಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಕೆ. ಶಿವಪ್ರಸಾದ್ ಆಳ್ವ ಅವರನ್ನು ನೇಮಕ ಮಾಡಲಾಗಿದೆ.


ಶಿವಪ್ರಸಾದ್ ಆಳ್ವ ಅವರು ಪುತ್ತೂರು ತಾಲೂಕಿನ ದರ್ಬೆ ಸಮೀಪದ ಕಾವೇರಿಕಟ್ಟೆ ನಿವಾಸಿಯಾಗಿದ್ದು, ಹಲವು ಕ್ಲಿಷ್ಟಕರ ಪ್ರಕರಣಗಳಲ್ಲಿ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಳ್ವ ಅವರ ದಕ್ಷ ಕಾರ್ಯ ನಿರ್ವಹಣೆಗಾಗಿ ಸರಕಾರ ಇತ್ತೀಚೆಗೆ ಅವರಿಗೆ ರಾಜ್ಯ ಮಟ್ಟದ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಿತ್ತು.

LEAVE A REPLY

Please enter your comment!
Please enter your name here