ಮತ್ತೆ ವಾಕಿಂಗ್ ಹೊರಟ ಒಂಟಿ ಸಲಗ…! ಕೆಯ್ಯೂರು ದೇರ್ಲದಲ್ಲಿ ಆನೆ ಪ್ರತ್ಯಕ್ಷ

0

ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳ ಭೇಟಿ

ಪುತ್ತೂರು: ತಿಂಗಳುಗಳ ಕಾಲ ಸುಮ್ಮನಿದ್ದ ಒಂಟಿ ಸಲಗ ಮತ್ತೆ ವಾಕಿಂಗ್ ಹೊರಟಿದ್ದು ಜು.31 ರಂದು ಬೆಳಿಗ್ಗೆ ಕೆಯ್ಯೂರು ಗ್ರಾಮದ ದೇರ್ಲ ವಿನಯ ಕುಮಾರ್ ರೈಯವರ ಮನೆಯ ಎದುರಿನ ಗುಡ್ಡದಲ್ಲಿ ಕಾಣಿಸಿಕೊಂಡಿದೆ. ಕಾಡಾನೆ ಇರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಲಾಗಿದ್ದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಆನೆಯನ್ನು ಓಡಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು 2 ವರ್ಷಗಳಿಂದ ಕೊಳ್ತಿಗೆ ಹಾಗೂ ಕೆಯ್ಯೂರು ಗ್ರಾಮದ ವಿವಿಧ ಕಡೆಗಳಲ್ಲಿ ಓಡಾಡುತ್ತಿರುವ ಈ ಕಾಡಾನೆಯೂ ಎ.29 ರಂದು ಕೊಳ್ತಿಗೆ ಗ್ರಾಮದ ಹರ್ತ್ಯಡ್ಕ ಎಂಬಲ್ಲಿ ರಬ್ಬರ್ ತೋಟದೊಳಗೆ ಮಹಿಳೆಯೋರ್ವರ ಸಾವಿಗೆ ಕಾರಣವಾಗಿತ್ತು. ಆ ಬಳಿಕ ಆನೆಯನ್ನು ಕೇರಳ ಭಾಗದ ಪರಪ್ಪೆ ಅಭಯಾರಣ್ಯಕ್ಕೆ ಹಿಮ್ಮೆಟ್ಟಿಸುವ ಕಾರ್ಯ ನಡೆದಿತ್ತು. ಆನೆಯನ್ನು ಮತ್ತೆ ಸ್ವಸ್ಥಳಕ್ಕೆ ಹಿಮ್ಮೆಟ್ಟಿಸಲು ಚಿಕ್ಕಮಗಳೂರಿನಿಂದ ನುರಿತ ಎಟಿಎಫ್(ಎಲಿಫೆಂಟ್ ಟಾಸ್ಕ್‌ಫೋರ್ಸ್ ತಂಡ) ಆಗಮಿಸಿತ್ತು ವಾರಗಳ ಕಾಲ ಕಾರ್ಯಾಚರಣೆ ಮಾಡಿ ಆನೆಯನ್ನು ಓಡಿಸುವ ಕಾರ್ಯವನ್ನು ಕೂಡ ಮಾಡಿತ್ತು ಆ ಬಳಿಕ ಒಂದೆರಡು ತಿಂಗಳು ಆನೆಯ ಸುಳಿವು ಇರಲಿಲ್ಲ ಎನ್ನಲಾಗಿದೆ. ಇದೀಗ ಮತ್ತೆ ಕಾಡಾನೆ ತನ್ನ ಸಂಚಾರವನ್ನು ಆರಂಭಿಸಿದ್ದು ಜು.30 ರಂದು ರಾತ್ರಿ ಕೆಯ್ಯೂರು ಗ್ರಾಮದ ದೇರ್ಲ ಬಟ್ಯಪ್ಪ ರೈಯವರ ತೋಟಕ್ಕೆ ಬಂದಿದ್ದು ಯಾವುದೇ ಕೃಷಿ ಹಾನಿ ಮಾಡಿಲ್ಲ ಕೇವಲ ಜೀ ಹಲಸು ಮರದ ತೊಗಟೆಯನ್ನು ಮಾತ್ರ ತಿಂದಿದೆ ಎಂದು ಬಟ್ಯಪ್ಪ ರೈ ತಿಳಿಸಿದ್ದಾರೆ. ಇಳಂತಾಜೆ ಕಡೆಯಿಂದ ಆನೆ ಬಂದಿದ್ದು ಇಳಂತಾಜೆ ಅಮರನಾಥ ರೈ ತೋಟದಿಂದ ಸಾಗಿ ಬಂದಿದೆ ಎನ್ನಲಾಗಿದೆ. ಇದೀಗ ದೇರ್ಲ ವಿನಯ ಕುಮಾರ್ ರೈಯವರ ಗುಡ್ಡದಲ್ಲಿ ಬೀಡು ಬಿಟ್ಟಿದೆ.


ಅರಣ್ಯ ಅಧಿಕಾರಿಗಳ ಭೇಟಿ
ಕಾಡಾನೆ ಇರುವ ಬಗ್ಗೆ ಮಾಹಿತಿ ಪಡೆದುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಕೆಯ್ಯೂರು ದೇರ್ಲಕ್ಕೆ ಬಂದಿದ್ದು ಆನೆ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಆನೆಯನ್ನು ಹಿಮ್ಮೆಟ್ಟಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮಸ್ಥರು ಯಾವುದೇ ರೀತಿಯಲ್ಲಿ ಭಯ ಪಡುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಮತ್ತಿತರರು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here