ಸಂಸ್ಥೆಯ ಹೆಸರನ್ನು ಬೆಳಗುವಲ್ಲಿ ಜಯಲಕ್ಷ್ಮೀಯವರಿಂದ ಕರ್ತವ್ಯ ನಿರ್ವಹಣೆ- ಕಾವು ಹೇಮನಾಥ ಶೆಟ್ಟಿ
ಪುತ್ತೂರು: ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಜು.31 ರಂದು ಸೇವಾ ನಿವೃತ್ತಿ ಹೊಂದಿದ ಜಯಲಕ್ಷ್ಮಿ ಎ.ರವರಿಗೆ ಸಂಸ್ಥೆಯ ವತಿಯಿಂದ ಬೀಳ್ಕೋಡುಗೆ ನಡೆಯಿತು.
ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆದ ವಿದಾಯ ಸಮಾರಂಭದಲ್ಲಿ ಮಾತನಾಡಿದ ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು, ಜಯಲಕ್ಷ್ಮೀರವರು ನಮ್ಮ ವಿದ್ಯಾಸಂಸ್ಥೆಯಲ್ಲಿ 34 ವರ್ಷ ಪದವೀಧರ ಶಿಕ್ಷಕಿಯಾಗಿ, ನಂತರ ಮುಂಬಡ್ತಿ ಹೊಂದಿ 4 ವರ್ಷ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ತಮ್ಮ ಸೇವಾವಧಿಯಲ್ಲಿ ರಾಷ್ಟ್ರಮಟ್ಟದ Iris science fair on research projects, ವಿಭಾಗೀಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ, ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ, ವಿಜ್ಞಾನ ಯೋಜನಾ ವರದಿ, ವಿಜ್ಞಾನ ವಿಚಾರ ಗೋಷ್ಠಿಗಳಲ್ಲಿ ಮಾರ್ಗದರ್ಶಿ ಶಿಕ್ಷಕರಾಗಿ ದುಡಿದು ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣೀಕರ್ತರಾಗಿದ್ದಾರೆ. ಕೇಂದ್ರ ಸರಕಾರದ ನೀತಿ ಆಯೋಗದ ಆರ್ಥಿಕ ನೆರವಿನೊಂದಿಗೆ ಅಟಲ್ ಇನ್ನೋವೇಷನ್ ಮಿಷನ್ ಇವರ ಆಶ್ರಯದಲ್ಲಿ ಸಂಸ್ಥೆಯಲ್ಲಿ ಕಾರ್ಯಾಚರಿಸುತ್ತಿರುವ ಅಟಲ್ ಟಿಂಕರಿಂಗ್ ಲ್ಯಾಬ್‌ನ ಉತ್ತಮ ಕಾರ್ಯನಿರ್ವಹಣೆಗೆ ರಾಷ್ಟ್ರೀಯ ಮಟ್ಟದಲ್ಲಿ Regional Teacher of Change ಬಿರುದು ಮುಡಿಗೇರಿಸಿಕೊಂಡು, ತಮ್ಮ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಅಟಲ್ ಲ್ಯಾಬ್‌ಗಳ ಮಾರ್ಗದರ್ಶಿ ಶಿಕ್ಷಕರಿಗೆ RToC ಆಗಿ ಕಾರ್ಯನಿರ್ವಹಿಸಿದ್ದಾರೆ. 2023-24 ನೇ ಸಾಲಿನಲ್ಲಿ ನಮ್ಮ ಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ 17 ರ ವಯೋಮಾನದ ಕ್ರೀಡಾಕೂಟವು ಜಯಲಕ್ಷ್ಮೀರವರ ಸಂಯೋಜನೆಯಲ್ಲಿ ತುಂಬಾ ಯಶಸ್ವಿಯಾಗಿ ನಡೆದಿರುತ್ತದೆ. ಈ ಕ್ರೀಡಾಕೂಟ ಭಾರಿ ಸಾಧನೆ ಮಾಡುವ ಮೂಲಕ, ಸಂಸ್ಥೆಗೆ ಉತ್ತಮ ಹೆಸರನ್ನು ತಂದಿದೆ. ಜಯಲಕ್ಷ್ಮೀರವರು ಶಿಸ್ತಿಗೆ ಹೆಚ್ಚಿನ ಮಹತ್ವವನ್ನು ನೀಡಿ, ಸಂಸ್ಥೆಯ ಪ್ರಗತಿ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಅತೀ ಹೆಚ್ಚಿನ ಮಹತ್ವ ನೀಡಿದ್ದಾರೆ. ಒಟ್ಟಿನಲ್ಲಿ ನಮ್ಮ ಸಂಸ್ಥೆಯ ಹೆಸರನ್ನು ಎಲ್ಲ ರೀತಿಯಿಂದಲ್ಲೂ ಬೆಳಗುವಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಜಯಲಕ್ಷ್ಮಿರವರನ್ನು ಅಭಿನಂದಿಸುತ್ತೇವೆ ಎಂದು ಹೇಳಿ, ಅವರ ನಿವೃತ್ತ ಜೀವನಕ್ಕೆ ಶುಭಹಾರೈಸಿದರು.
ಉತ್ತಮವಾದ ಸೇವೆ- ಲೋಕೇಶ್
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ರವರು ಮಾತನಾಡಿ, ಜಯಲಕ್ಷ್ಮೀರವರು ಶಿಕ್ಷಕ ವೃತ್ತಿ ಬದುಕಿನಲ್ಲಿ ಉತ್ತಮವಾದ ಸೇವೆ ಸಲ್ಲಿಸಿದ್ದಾರೆ. ಅವರು ವೃತ್ತಿಯಿಂದ ನಿವೃತ್ತರಾಗಿದ್ದಾರೆ ವಿನ: ಅವರಿಗೆ ಸಮಾಜದಲ್ಲಿ ಮತ್ತಷ್ಟು ಅವಕಾಶಗಳು ಇವೆ. ನಿವೃತ್ತಿಯ ಬಳಿಕ ಶೈಕ್ಷಣಿಕವಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು, ಜೊತೆಗೆ ಸಮಾಜ ಸೇವೆ ಮಾಡಬಹುದು ಎಂದರು.
ಅಚ್ಚುಮೆಚ್ಚಿನ ಶಿಕ್ಷಕಿ- ವಸಂತಿ ಕೆ
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ವಸಂತಿ ಕೆ.ರವರು ಮಾತನಾಡಿ, ಜಯಲಕ್ಷ್ಮೀರವರು ಶಾಲೆಯಲ್ಲಿ ಶಿಸ್ತಿನ ಶಿಕ್ಷಕಿಯಾಗಿ, ಹೊರಗಡೆ ವಿದ್ಯಾರ್ಥಿಗಳ ಪಾಲಿನ ಪ್ರೀತಿಯ ಅಕ್ಕ ಆಗಿದ್ದರು. ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಯಾವುದೇ ಕೆಲಸವನ್ನು ಕೊಟ್ಟರೂ ಅದನ್ನು ಶಿಸ್ತುಬದ್ಧವಾಗಿ ಅಚ್ಚುಕಟ್ಟಾಗಿ ನೆರವೇರಿಸುವಲ್ಲಿ ಜಯಲಕ್ಷ್ಮೀ ಅವರು ಹೆಸರು ಪಡೆದಿದ್ದಾರೆ ಎಂದು ಹೇಳಿ ಅವರ ನಿವೃತ್ತಿ ಜೀವನಕ್ಕೆ ಶುಭಕೋರಿದರು.
ಅಮೂಲ್ಯವಾದ ಕೊಡುಗೆಯಾಗಿತ್ತು- ಕುಂಬ್ರ ದುರ್ಗಾಪ್ರಸಾದ್ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ಜಯಲಕ್ಷ್ಮೀರವರು ಶಿಕ್ಷಕಿಯಾಗಿ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸಲ್ಲಿಸಿದ ಸೇವಾ ಕಾರ್‍ಯ ಸದಾ ನೆನಪಲ್ಲಿ ಉಳಿಯುತ್ತದೆ. ಅವರ ಮೃದು ಮಾತು, ಸರಳ ವ್ಯಕ್ತಿತ್ವ ಹಾಗೂ ಶಿಸ್ತಿನ ಪಾಠ ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯವಾದ ಕೊಡುಗೆಯಾಗಿತ್ತು ಎಂದು ಹೇಳಿದರು.
ಸಂಸ್ಥೆಯ ಏಳಿಗೆಗಾಗಿ ಸದಾ ದುಡಿದಿದ್ದಾರೆ- ದಂಬೆಕ್ಕಾನ ಸದಾಶಿವ ರೈ
ತಾಲೂಕು ಬಂಟರ ಸಂಘದ ನಿರ್ದೇಶಕ, ಸಹಕಾರರತ್ನ ದಂಬೆಕ್ಕಾನ ಸದಾಶಿವ ರೈಯವರು ಮಾತನಾಡಿ, ಜಯಲಕ್ಷ್ಮಿರವರು ಸಂಸ್ಥೆಯ ಏಳಿಗೆಗಾಗಿ ಸದಾ ದುಡಿದಿದ್ದಾರೆ. ಕರ್ತವ್ಯವನ್ನು ಪ್ರಾಮಾಣಿಕ ನೆಲೆಯಲ್ಲಿ ನಿರ್ವಹಿಸಿ ಸಂಸ್ಥೆಗೆ ಉತ್ತಮ ಹೆಸರನ್ನು ತಂದಿದ್ದಾರೆ ಎಂದರು.
ಮೆಚ್ಚುಗೆಯನ್ನು ಗಳಿಸಿದ್ದಾರೆ- ದಯಾನಂದ ರೈ ಮನವಳಿಕೆಗುತ್ತು
ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ, ಜಯಲಕ್ಷ್ಮೀರವರು ಸಂಸ್ಥೆಯಲ್ಲಿ ಸಾರ್ಥಕವಾದ ಸೇವೆಯನ್ನು ಸಲ್ಲಿಸಿ, ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ ಎಂದರು.
ಶಾಲಾ ರಕ್ಷಕ ಶಿಕ್ಷಣ ಸಂಘದ ಅಧ್ಯಕ್ಷ ಆನಂದ ಸಿ. ಸಂದರ್ಭೋಚಿತವಾಗಿ ಮಾತನಾಡಿದರು.
ಸನ್ಮಾನ: ನಿವೃತ್ತರಾದ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ಮತ್ತು ಅವರ ಪತಿ ಯಶವಂತ ಶೆಟ್ಟಿ ಅವರನ್ನು ಅದ್ದೂರಿಯಾಗಿ ಶಾಲೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯಲಕ್ಷ್ಮೀರವರು, 38 ವರ್ಷಗಳ ಕಾಲ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರಿಗೆ, ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೃತಜ್ಞತೆ ತಿಳಿಸಿದರು. ತನ್ನ ಸೇವಾವಧಿಯಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಭಗವದ್ಗೀತೆ ಪುಸ್ತಕ ನೀಡಿ ಗೌರವ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ವತಿಯಿಂದ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರು ಜಯಲಕ್ಷ್ಮೀರವರಿಗೆ ಭಗವದ್ಗೀತೆ ಪುಸ್ತಕವನ್ನು ನೀಡಿದರು.
ಶಾಲಾ ಹಿರಿಯ ಶಿಕ್ಷಕಿ ಗಾಯತ್ರಿ ಎಸ್ ಸ್ವಾಗತಿಸಿ, ಸುಚಿತ್ರಾ ಸನ್ಮಾನ ಪತ್ರ ವಾಚಿಸಿದರು. ಗೀತಾ ವಂದಿಸಿದರು. ಸಂಧ್ಯಾ ಕಾರ್‍ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರುಗಳಾದ ಜಯಪ್ರಕಾಶ್ ರೈ ನೂಜಿಬೈಲು, ಜೈರಾಜ್ ಭಂಡಾರಿ ನೊಣಾಲು, ರಮೇಶ್ ರೈ ಸಾಂತ್ಯ, ವಾಣಿ ಶೆಟ್ಟಿ, ಜಿ.ಪಂ, ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು, ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರು, ತಾಲೂಕು ಯುವ ಬಂಟರ ವಿಭಾಗದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ದಯಾನಂದ ರೈ ಕೊರ್ಮಂಡ, ಜಗನ್ನಾಥ ರೈ, ತಾಲೂಕು ಬಂಟರ ಸಂಘದ ಮಾಜಿ ಕಾರ್‍ಯದರ್ಶಿ ಮೋಹನ್ ರೈ ನರಿಮೊಗರು, ರಂಜಿನಿ ಶೆಟ್ಟಿ, ಡಾ.ರಂಜೀತಾ ಶೆಟ್ಟಿ, ದಿವ್ಯಾನಂದ ಶೆಟ್ಟಿ ಕಾವು, ಮಲ್ಲಿಕಾ ಜೆ.ರೈ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂಧಿಗಳು, ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪಧಾಧಿಕಾರಿಗಳು ಉಪಸ್ಥಿತರಿದ್ದರು.
ಸವಣೂರು ಸೀತಾರಾಮ ರೈಯವರಿಂದ ಗೌರವಾರ್ಪಣೆ
ಸಹಕಾರ ರತ್ನ ಸವಣೂರು ಸೀತಾರಾಮ ರೈಯವರು ಸಭಾ ಕಾರ್‍ಯಕ್ರಮ ಆರಂಭಕ್ಕಿಂತ ಮುಂಚೆ ಆಗಮಿಸಿ, ಜಯಲಕ್ಷ್ಮೀರವರನ್ನು ಅಭಿನಂದಿಸಿದರು.