ಯುವ ಜನತೆಗೆ ಉದ್ಯೋಗ ಕೊಡಿಸುವುದೇ ಶಾಸಕರ ಉದ್ದೇಶವಾಗಿದೆ: ಸುದೇಶ್ ಶೆಟ್ಟಿ
ಪುತ್ತೂರು: ಮೂಡಬಿದ್ರೆ ಆಳ್ವಾಸ್ ನಲ್ಲಿ ನಡೆಯುತ್ತಿರುವ ಬೃಹತ್ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ ಮೊದಲನೇ ದಿನ 450 ಮಂದಿ ಆಕಾಂಕ್ಷಿಗಳು ತೆರಳಿದ್ದು , ಶಾಸಕ ಅಶೋಕ್ ರೈ ಅವರ ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಸರ್ವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು ಯುವ ಜನತೆಗೆ ಉದ್ಯೋಗ ಕೊಡಿಸುವುದೇ ಶಾಸಕರ ಉದ್ದೇಶವಾಗಿದೆ ಎಂದು ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಹೇಳಿದರು.
ಆಳ್ವಾಸ್ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ ತೆರಳುವ ಆಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡಿದರು.
ಯುವಜನತೆ ಉದ್ಯೋಗವಿಲ್ಲದೆ ದಾರಿ ತಪ್ಪಬಾರದು. ಕಷ್ಟಪಟ್ಟು ಪೋಷಕರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಬ್ಯಾಸವನ್ನು ಕೊಡಿಸುತ್ತಾರೆ, ವಿದ್ಯೆ ಕಲಿತ ಮಕ್ಕಳು ಉದ್ಯೋಗವಿಲ್ಲದೆ ಮನೆಯಲ್ಲೇ ಇರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಆಳ್ವಾಸ್ನಲ್ಲಿ ಪ್ರತೀ ವರ್ಷ ನಡೆಯುವ ಉದ್ಯೋಗ ಮೇಳದಲ್ಲಿ ಸಾವಿರಾರು ಮಂದಿ ಉದ್ಯೋಗ ಪಡೆದುಕೊಳ್ಳುತ್ತಿದ್ದು ಪುತ್ತೂರಿನವರಿಗೂ ಅಲ್ಲಿ ಉದ್ಯೋಗ ದೊರೆಯಬೇಕು, ನಮ್ಮೂರಿನ ಯುವಕ , ಯುವತಿಯರು ಮೇಲೆ ಬರಬೇಕು ಎಂಬ ಉದ್ದೇಶದಿಂದ ಶಾಸಕ ಅಶೋಕ್ ರೈ ಅವರು ತಮ್ಮ ಟ್ರಸ್ಟ್ ಮೂಲಕ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಟ್ರಸ್ಟ್ ಮೂಲಕ ವಿವಿಧ ಕಾರ್ಯಕ್ರಮ
ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಉದ್ಯೋಗ ಮೇಳ ಸೇರಿದಂತೆ ಐಎಎಸ್, ಐಪಿಎಸ್ ತರಬೇತಿಯನ್ನು ನೀಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಈ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಯುವ ಜನತೆಗಾಗಿ ಶಾಸಕರು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ಆಕಾಂಕ್ಷಿಗಳು ಶಾಸಕರ ಕಚೇರಿಯನ್ನು ಸಂಪರ್ಕ ಮಾಡುವಂತೆ ಸುದೇಶ್ ಶೆಟ್ಟಿಯವರು ಮನವಿ ಮಾಡಿದರು.
ಯುವಕರೇ ಎಚ್ಚರಿಕೆಯಿಂದ ಇರಿ: ನಿಹಾಲ್ ಪಿ ಶೆಟ್ಟಿ
ಯುವ ಜನತೆಯನ್ನು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಕೆ ಮಾಡುತ್ತಿದ್ದಾರೆ. ವಿದ್ಯಾವಂತ ಯುವಕರ ಮೈಂಡ್ ವಾಷ್ ಮಾಡಿ ಅವರನ್ನು ತಮ್ಮ ಲಾಭಕ್ಕಾಗಿ ವಿವಿಧ ಚಟವಟಿಕೆಯಲ್ಲಿ ಬಳಸಿಕೊಳ್ಳುತ್ತಾರೆ ಆದರೆ ಅದೇ ಯುವಕರಿಗೆ ಎನಾದರೂ ಹೆಚ್ಚು ಕಮ್ಮಿಯಾದಲ್ಲಿ ಯಾರೂ ನೆರವಿಗೆ ಬರುವುದಿಲ್ಲ. ತಮ್ಮನ್ನು ಸಾಕಿ ಸಲಹಿದ ತಂದೆ ತಾಯಿಯ ಸೇವೆಗೆ ಯುವ ಜನತೆ ಸಿದ್ದವಾಗಬೇಕು. ಉದ್ಯೋಗವಿಲ್ಲದೆ ಯರೂ ತಿರುಗಾಡುವಂತಾಗಬಾರದು. ದುಶ್ಚಟಗಳಿಗೆ ಬಲಿಯಾಗದೆ ಯಾವುದಾದರೂ ಸಣ್ಣ ಕೆಲಸವಾದರೂ ನಮ್ಮ ಜೀವನದಲ್ಲಿ ಇರಬೇಕು ಎಂದು ಟ್ರಸ್ಟ್ ಸಲಹೆಗಾರರಾದ ಉದ್ಯಮಿ ನಿಹಾಲ್ ಪಿ ಶೆಟ್ಟಿ ಯುವಕರಲ್ಲಿ ಮನವಿ ಮಾಡಿದರು.
ಪ್ರತೀಯೊಬ್ಬರಿಗೂ ತಮ್ಮ ತಂದೆ ತಾಯಿ ಕಷ್ಟಪಟ್ಟು ವಿದ್ಯೆ ಕಲಿಸಿರುತ್ತಾರೆ. ಆ ವಿದ್ಯೆ ಯಿಂದ ನಾವು ಉದ್ಯೋಗ ಪಡೆದು ತಂದೆ ತಾಯಿಗೆ ನೆರವಾಗಬೇಕು. ಜೀವನದಲ್ಲಿ ಯಶಶ್ಸನ್ನು ಸಾಧಿಸುವ ಮೂಲಕ ಭಾರತದ ಸತ್ಪ್ರಜೆಗಳಾಗಿ ಬಾಳಬೇಕು. ಕೆಲಸ ಮಾಡುವ ಹಂಬಲ, ಉತ್ಸಾಹ, ಆಸಕ್ತಿ ಇದ್ದಲ್ಲಿ ಕೆಲಸ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಇದರಲ್ಲಿ ಯವುದೇ ಅನುಮಾನವೇ ಇಲ್ಲ. ಪುತ್ತೂರು ಶಾಸಕರಾದ ಅಶೋಕ್ ರೈ ಅವರು ತನ್ನ ಕ್ಷೇತ್ರದ ವಿದ್ಯಾವಂತ ಯುವಕರು ಯಾರೂ ಕೆಲಸವಿಲ್ಲದೆ ಇರಬಾರದು ಎಂಬ ಉದ್ದೇಶದಿಂದ ಆಳ್ವಾಸ್ನಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ತೆರಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಇದರ ಪ್ರಯೋಜನವನ್ನು ಪ್ರತೀಯೊಬ್ಬರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ಶಾಸಕರಿಂದ ಪುಣ್ಯದ ಕೆಲಸ: ಕೆ ಪಿ ಆಳ್ವ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವರವರು ಮಾತನಾಡಿ, ಪುತ್ತೂರು ಶಾಸಕರು ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಆಳ್ವಾಸ್ಗೆ ತೆರಳಲು ಸರ್ವ ವ್ಯವಸ್ಥೆಯನ್ನು ಮಾಡಿರುವುದು ಪುಣ್ಯದ ಕಲಸವಾಗಿದೆ. ಕೆಲಸ ಪಡೆದುಕೊಂಡ ಯುವಕರು ಇವರ ಸೇವೆಯನ್ನು ಎಂದೂ ಮರೆಯಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈ ಚಾರಿಟೇಬಲ್ ಟ್ರಸ್ಟ್ ಮೆನೆಜರ್ ಲಿಂಗಪ್ಪ ಕೊಡಿಪ್ಪಾಡಿ,ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ಕಾಂಗ್ರೆಸ್ ನಾಯಕಿ ಮುರ ಜಾನಕಿ,ಬಾಲಕೃಷ್ಣ ಉಪಸ್ಥಿತರಿದ್ದರು. ಯೋಗೀಶ್ ಸಾಮಾನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.