ನೆಲ್ಯಾಡಿ: ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಅಶ್ವಿನ್ ಒಪ್ಟಿಕಲ್ಸ್ ಮತ್ತು ಕ್ಲಿನಿಕ್ಸ್ ಕಡಬ, ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಹಾಗೂ ರಾಮನಗರ ಫ್ರೆಂಡ್ಸ್ ರಾಮನಗರ ಇವರ ಸಹಭಾಗಿತ್ವದಲ್ಲಿ ತಜ್ಞ ವೈದ್ಯರಿಂದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಅಶ್ವಿನ್ ಒಪ್ಟಿಕಲ್ಸ್ ಕಡಬ ಇದರ ವತಿಯಿಂದ ಉಚಿತ ಕನ್ನಡಕ ವಿತರಣೆ ಶಿಬಿರ ಜು.27ರಂದು ನೆಲ್ಯಾಡಿ ಪಡುಬೆಟ್ಟು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ನಿವೃತ್ತ ಹಿರಿಯ ನೇತ್ರ ಪರಿವೀಕ್ಷಕ ಶಾಂತರಾಜ್‌ರವರು ಶಿಬಿರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ನೇತ್ರ ಸಮಸ್ಯೆ ಹಾಗೂ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸದೆ ತೀವ್ರವಾದ ಅಂಧತ್ವದಿಂದ ಬಳಲುತ್ತಿದ್ದಾರೆ. ಮೊಬೈಲ್, ಟಿ.ವಿ ಅತಿಯಾದ ವೀಕ್ಷಣೆಯಿಂದ ಈಗಿನ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಪ್ರಕರಣ ಹೆಚ್ಚುತ್ತಿದೆ. ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಶಿಬಿರ ಆಯೋಜಿಸುತ್ತಿದ್ದೇವೆ. ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಗೆ ಶಿಬಿರದ ಮೂಲಕ ಶಿಫಾರಸು ಮಾಡುತ್ತೇವೆ. ಸಾಮಾನ್ಯ ದೃಷ್ಟಿ ದೋಷ ಇದ್ದವರಿಗೆ ಸ್ಥಳದಲ್ಲಿಯೇ ಉಚಿತ ಕನ್ನಡಕ ವಿತರಿಸುತ್ತೇವೆ ಎಂದು ಹೇಳಿದರು. ಕಡಬ ಮತ್ತು ಪುತ್ತೂರು ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ವಿವಿಧ ಸಂಘ ಸಂಸ್ಥೆಯವರನ್ನು ಸೇರಿಸಿಕೊಂಡು 57 ಶಿಬಿರ ಸಂಘಟಿಸಿರುವ ನೇತ್ರ ಬಂಧು ಗಂಗಾಧರ ಶೆಟ್ಟಿ ಹೊಸಮನೆಯವರ ಸೇವಾ ಕಾರ್ಯ ಅಭಿನಂದನೀಯ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಅಧ್ಯಕ್ಷ ಪದ್ಮಪ್ಪ ಗೌಡರವರು ಮಾತನಾಡಿ, ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತೆ ಹೇಳಿದರು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಖ್ಯಾತ ಕಣ್ಣಿನ ತಜ್ಞ ಡಾ.ವಿಕಾಸ್, ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡುಬೆಟ್ಟು ಒಕ್ಕೂಟದ ಅಧ್ಯಕ್ಷ ಜೋನ್ ಮಂತೆರೋ, ರಾಮನಗರ ಫ್ರೆಂಡ್ಸ್‌ನ ಅಧ್ಯಕ್ಷ ಸುಶಾಂತ್ ಶೆಟ್ಟಿ ರಾಮನಗರ, ಪಡುಬೆಟ್ಟು ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಾಜಿ ಕಾರ್ಯದರ್ಶಿ ಮಹಮ್ಮದ್ ಹನೀಫ್ ಶುಭ ಹಾರೈಸಿದರು.
57ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಮನಗರ ಫ್ರೆಂಡ್ಸ್‌ನ ಅಧ್ಯಕ್ಷ ಸುಶಾಂತ್ ಶೆಟ್ಟಿ ರಾಮನಗರ ವಂದಿಸಿದರು. ಸವಿತಾ, ಯಕ್ಷಿತರವರು ನೇತ್ರ ತಪಾಸಣೆಗೆ ಸಹಕಾರ ನೀಡಿದರು. ರಾಮನಗರ ಫ್ರೆಂಡ್ಸ್‌ನ ಪದಾಧಿಕಾರಿಗಳು ಸಹಕರಿಸಿದರು.
125 ಮಂದಿಯಿಂದ ಕಣ್ಣಿನ ತಪಾಸಣೆ;
ಶಿಬಿರದಲ್ಲಿ 125 ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. 8 ಮಂದಿಯನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಾಗಿ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. 100 ಮಂದಿಗೆ ಕಡಬ ಅಶ್ವಿನ್ ಒಪ್ಟಿಕಲ್ಸ್ ಮತ್ತು ಕ್ಲಿನಿಕ್ಸ್ ವತಿಯಿಂದ ಉಚಿತವಾಗಿ ಕನ್ನಡ ವಿತರಿಸಲಾಯಿತು. ನೇತ್ರ ಪರಿವೀಕ್ಷಕ ಡಾ.ಶಾಂತರಾಜ್‌ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.