ಪುತ್ತೂರು: ಸಂತ ಫಿಲೋಮಿನಾ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕ ಲೂಯಿಸ್ ಮಸ್ಕರೇನ್ಹಸ್(82ವ.) ರವರು ಆ.3 ರಂದು ನಿಧನ ಹೊಂದಿದರು.
ಮೃತ ಲೂಯಿಸ್ ಮಸ್ಕರೇನ್ಹಸ್ ರವರು ಎನ್.ಡಿ.ಎಸ್ ಮಾಸ್ಟ್ರು ಎಂದೇ ಚಿರಪರಿಚಿತರಾಗಿದ್ದರು. ಲೂಯಿಸ್ ಮಸ್ಕರೇನ್ಹಸ್ ರವರು ಕೇಂದ್ರ ಸರಕಾರದ ಎನ್.ಡಿ.ಎಸ್ ವಿಭಾಗದಲ್ಲಿ 12 ವರ್ಷ ಸೇವೆ ನೀಡಿದ್ದರು. ಬಳಿಕ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ 27 ವರ್ಷ ಸೇವೆ ಹೀಗೆ ಒಟ್ಟು 39 ವರ್ಷ ಸೇವೆ ನೀಡಿ ನಿವೃತ್ತರಾಗಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಸೇವೆಯಲ್ಲಿ ಅವರು ನೀಡಿದ ಸೇವೆಯನ್ನು ಗುರುತಿಸಿ ಅವರಿಗೆ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಲೂಯಿಸ್ ಮಸ್ಕರೇನ್ಹಸ್ ರವರು ತಮ್ಮ ಇಳಿ ವಯಸ್ಸಿನಲ್ಲೂ ಮನೆ ಹತ್ತಿರದ ಫಿಲೋಮಿನಾ ಕಾಲೇಜಿನ ಚಾಪೆಲಿನಲ್ಲಿ ನಿತ್ಯವೂ ಪೂಜೆಗೆ ಹಾಜರಾಗುತ್ತಿದ್ದರು.
ಮೃತ ಲೂಯಿಸ್ ಮಸ್ಕರೇನ್ಹಸ್ ರವರು ಪತ್ನಿ ಲಿಟ್ಲ್ ಫ್ಲವರ್ ಶಾಲೆಯ ನಿವೃತ್ತ ಶಿಕ್ಷಕಿ ರೋಜ್ಲಿನ್ ಡಿ’ಸಿಲ್ವ, ಪುತ್ರಿಯರಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಶಿಕ್ಷಕಿ ಶೈಲಾ ಮಸ್ಕರೇನ್ಹಸ್, ಶೈನಿ ಮಸ್ಕರೇನ್ಹಸ್ ಕತಾರ್, ಮೈಸೂರು ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸೋನಿ ಮಸ್ಕರೇನ್ಹಸ್, ಅಳಿಯಂದಿರಾದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಪ್ರೊ|ಐವನ್ ಡಿ’ಸೋಜ, ಮೈಸೂರು ಸೈಂಟ್ ಫಿಲೋಮಿನಾ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಶ್ರೇಣಿ ಗ್ರಂಥಪಾಲಕರಾಗಿರುವ ಪ್ರೊ|ಪ್ರಕಾಶ್ ಕುಟಿನ್ಹಾ, ಕತಾರ್ ನಲ್ಲಿ ಉದ್ಯಮಿಯಾಗಿರುವ ವಿನ್ಸೆಂಟ್ ಲೋಬೊರವರನ್ನು ಅಗಲಿದ್ದಾರೆ.
ಹುಟ್ಟಿದ ದಿನದಂದೇ ಸಾವು..
ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಲೂಯಿಸ್ ಮಸ್ಕರೇನ್ಹಸ್ ರವರು ಅಪಾರವಾದ ವಿದ್ಯಾರ್ಥಿ ವರ್ಗದವರನ್ನು ಹೊಂದಿದ್ದು ಮಾತ್ರವಲ್ಲ ಎಲ್ಲರಿಗೂ ಪ್ರೀತಿ ಪಾತ್ರರಾಗಿರುತ್ತಾರೆ. ವಿಶೇಷ ಏನೆಂದರೆ ಲೂಯಿಸ್ ಮಸ್ಕರೇನ್ಹಸ್ ರವರು ಆ. 3 ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಿದ್ದು ಸಂಜೆ ವಿಧಿವಶರಾಗಿರುವುದು ಕಾಕತಾಳೀಯವಾಗಿದೆ.