ಪುತ್ತೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ. ಆಶಾ ಪುತ್ತೂರಾಯ ಅವರಿಗೆ ಕರ್ತವ್ಯಕ್ಕೆ ಆದಿಪಡಿಸಿದ್ದ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿ ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿರುವುದಲ್ಲದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಪ್ರಕರಣದಲ್ಲಿ 18 ಮಂದಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಳೆದ ಎ.25ರಂದು ಡಾ.ಆಶಾ ಪುತ್ತೂರಾಯ ಅದರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ ನೀಡಿದ್ದ ದೂರಿನಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂದು ಆರೋಪಿಸಿ ಏ.26ರಂದು ಬೆಳಿಗ್ಗೆ ಮಹಿಳಾ ಪೊಲೀಸ್ ಠಾಣೆಯ ಮುಂಭಾಗ ಕೆಲವು ಸಂಘಟನೆಗಳ ಸದಸ್ಯರು ಪ್ರತಿಭಟನೆ ಆಯೋಜಿಸಿದ್ದು, ಪ್ರತಿಭಟನಾಕಾರರು ಮಹಿಳಾ ಪೊಲೀಸ್ ಠಾಣೆಯ ಮುಂಭಾಗದಿಂದ ಬೊಳುವಾರು ದರ್ಬೆ ಮುಖ್ಯ ರಸ್ತೆಗೆ ಬಂದು ರಸ್ತೆ ತಡೆ ನಡೆಸಿ ಪೊಲೀಸರಿಗೆ ದಿಕ್ಕಾರ ಘೋಷಣೆ ಕೂಗಿದ್ದರು.ಪ್ರಕರಣದ ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಪೊಲೀಸರು, ರಸ್ತೆ ತಡೆ ನಡೆಸದಂತೆ ಸೂಚನೆ ನೀಡಿದ್ದರೂ ಅದನ್ನು ಲೆಕ್ಕಿಸದೆ ಸುಮಾರು 1 ಗಂಟೆ ಕಾಲ ರಸ್ತೆ ತಡೆ ನಡೆಸಿ ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಲ್ಲದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎಂದು ಆರೋಪಿಸಿ ಎಸ್.ಐ.ಆಂಜನೇಯ ರೆಡ್ಡಿಯವರು ನೀಡಿದ್ದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸರು 27 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಹೆಚ್.ಅಜಿತ್ ರೈ ಹೊಸಮನೆ,ದಿನೇಶ್ ಪಂಜಿಗ, ನರಸಿಂಹ ಶೆಟ್ಟಿ ಮಾಣಿ, ಪುನೀತ್ ಮಾಡತ್ತಾರು, ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಸಂತೋಷ್ ಕುಮಾರ್ ರೈ ಕೈಕಾರ, ನಿತೀಶ್ ನೆಲಪ್ಪಾಲ್, ನಾಗೇಶ್ ದಾರಂದಕುಕ್ಕು, ಭಾಮಿ ಜಗದೀಶ ಶೆಣೈ, ಬಿ.ಶೀನಪ್ಪ ಕುಲಾಲ್ ಸೇಡಿಯಾಪು, ರಾಜೇಶ್ ಬನ್ನೂರು, ನಿತೀನ್ ಹಿರೇಬಂಡಾಡಿ, ಸಂಜಯ್ ಬನಾರಿ, ಲೀಲಾವತಿ ಅಣ್ಣು ನಾಯ್ಕ, ಗೌರಿ ಬನ್ನೂರು, ವಿದ್ಯಾ ಗೌರಿ ಆರ್..ದೀಕ್ಷಾ ಪೈ ಮತ್ತು ಸತೀಶ್ ನ್ಯಾಕ್ ಪರ್ಲಡ್ಕ ಎಂಬವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡ್, ಮೋಹಿನಿ ಕೆ.ವಾದಿಸಿದ್ದರು.
