100 ಕ್ಕೂ ಮಿಕ್ಕಿ ಫಲಾನುಭವಿಗಳು
ಶಾಲೆಯ ಬೆಳ್ಳಿಹಬ್ಬದ ಸಲುವಾಗಿ ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ಈ ಶಿಬಿರವೂ ಒಂದಾಗಿದ್ದು, ಸುಮಾರು ನೂರಕ್ಕೂ ಮಿಕ್ಕಿ ಫಲಾನುಭವಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. 50 ಯೂನಿಟ್ ಗೂ ಮಿಕ್ಕಿ ರಕ್ತ ಸಂಗ್ರಹವಾಯಿತು.
ಬೆಟ್ಟಂಪಾಡಿ: ಇಲ್ಲಿನ ವಿದ್ಯಾಗಿರಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯು 25 ನೇ ವರ್ಷದ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, ಅದರ ಅಂಗವಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಯೋಜಿಸಿದೆ.
ಈ ಪೈಕಿ ಆ.7 ರಂದು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ಪ್ರಗತಿ ಪಾರಾ ಮೆಡಿಕಲ್ ಕಾಲೇಜು ಪುತ್ತೂರು ಮತ್ತು ರೋಟರಿ ಪ್ರಸಾದ ನೇತ್ರಾಲಯ ಕಣ್ಣಿನ ಆಸ್ಪತ್ರೆ ಪುತ್ತೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ, ರಕ್ತ ವರ್ಗಿಕರಣ ಹಾಗೂ ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಯಿತು.

ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ, ಎಸ್‌ಸಿಡಿಸಿಸಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ‘ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಕೈಗೊಂಡ ಈ ಕಾರ್ಯಕ್ರಮ ಹತ್ತು ಹಲವು ಸಾರ್ವಜನಿಕರಿಗೆ ಸದುಪಯೋಗವಾಗಿದೆ. ಈ ಸಂಸ್ಥೆಯಲ್ಲಿ ಇಂತಹ ಸಮಾಜ ಸೇವಾ ಕಾರ್ಯಗಳು ಇನ್ನಷ್ಟು ಮೂಡಿ ಬರಲಿ. ಅನೇಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ತಾವುಗಳು ಉತ್ತಮ ಭವಿಷ್ಯವನ್ಙು ರೂಪಿಸಲಿದ್ದೀರಿ’ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ನ ಮೆಡಿಕಲ್ ಆಫೀಸರ್ ಡಾ. ಕೆ. ಸೀತಾರಾಮ ಭಟ್ ರವರು ಮಾತನಾಡಿ ‘ರಕ್ತದ ಅವಶ್ಯಕತೆ ತುಂಬಾ ಇದೆ. ರಕ್ತದಾನ ಮಾಡುವವರು ಕಡಿಮೆಯಾಗಿದ್ದಾರೆ. ಒಂದು ಬಿಂದು ರಕ್ತವೂ ಒಬ್ಬ ವ್ಯಕ್ತಿಗೆ ಜೀವದಾನ ಮಾಡಬಲ್ಲುದು. ರಕ್ತದಾನ ಮಾಡುವವರನ್ನು ಆದರ್ಶ ವ್ಯಕ್ತಿ ಎಂದು ಗುರುತಿಸಬೇಕು. ರೋಟರಿ ಸಂಸ್ಥೆ ಪುತ್ತೂರಿನ ಸುತ್ತಮುತ್ತಲಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಪುತ್ತೂರಿನ ಬ್ಲಡ್ ಬ್ಯಾಂಕ್ ನಿಂದ ಸುತ್ತಲಿನ ಊರುಗಳಿಗೂ ರಕ್ತ ಪೂರೈಕೆ ಮಾಡಲಾಗುತ್ತಿದೆ’ ಎಂದು ಹೇಳಿ ರಕ್ತದ ವರ್ಗೀಕರಣ, ವಿಧಗಳು ಹಾಗೂ ರಕ್ತದಾನದ ಮಹತ್ವವನ್ನು ತಿಳಿಸಿದರು.
ಬೆಳ್ಳಿ ಹಬ್ಬ ಸಮಿತಿಯ ಗೌರವಾಧ್ಯಕ್ಷ ಚಿದಾನಂದ ಬೈಲಾಡಿಯವರು ಮಾತನಾಡಿ ‘ಬೆಳ್ಳಿಹಬ್ಬದ ಶಾಶ್ವತ ಯೋಜನೆಗಳು ಸಾಕಾರಗೊಳ್ಳಲಿವೆ. ತಮ್ಮೆಲ್ಲರ ಸಹಕಾರವಿರಲಿ’ ಎಂದು ಆಶಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪ್ರಕಾಶ್ ಮಾತನಾಡಿ ‘ರೋಟರಿ ಕ್ಲಬ್ ಮುಖಾಂತರ ಅನೇಕ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆ. ಪೋಷಕರು ಮಕ್ಕಳಿಗೆ ದುಡ್ಡು ಸಂಪತ್ತು ಸಂಪಾದಿಸುವುದನ್ನು ಪ್ರೇರೇಪಿಸುವುದಕ್ಕಿಂತ ಸಾಮಾಜಿಕ ಸೇವಾ ಕಾರ್ಯಗಳಿಗೆ ಪ್ರೇರೇಪಣೆ ನೀಡಿ’ ಎಂದು ಕರೆ ನೀಡಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಸುದ್ದಿ ಬಿಡುಗಡೆ ಪುತ್ತೂರು ಪತ್ರಕರ್ತರಾದ ಉಮೇಶ್ ಮಿತ್ತಡ್ಕ ಇವರು ಮಾತನಾಡಿ ‘ಸಮುದಾಯದತ್ತ ಶಾಲೆ ಎಂಬ ಪರಿಕಲ್ಪನೆಗೆ ಪೂರಕವಾದ ಚಟುವಟಿಕೆ ಬೆಳ್ಳಿಹಬ್ಬದ ಸಲುವಾಗಿ ನಡೆದಿರುವುದು ಶ್ಲಾಘನೀಯ ಎಂದು ಹೇಳಿ ತನ್ನ 50 ಕ್ಕಿಂತಲೂ ಅಧಿಕ ಬಾರಿ ರಕ್ತದಾನ ಮಾಡಿದ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು ಮಾತನಾಡಿ ‘ಬೈಲಾಡಿ ಬಾಬು ಗೌಡರ ದೂರದೃಷ್ಟಿತ್ವದಿಂದ ಕನಸಿನ ಕೂಸಾಗಿ ಬೆಟ್ಟಂಪಾಡಿಯಂತಹ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಹುಟ್ಟಿ ಬೆಳೆಯಲು ಕಾರಣವಾಯಿತು’ ಎಂದು ಹೇಳಿ ಶಿಬಿರ ಯಶಸ್ಸಿಗೆ ಶುಭ ಹಾರೈಸಿದರು.
ಸುಮಾರು ನೂರಕ್ಕೂ ಮಿಕ್ಕಿ ಫಲಾನುಭವಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ 50 ಯೂನಿಟ್ ಗೂ ಮಿಕ್ಕಿ ರಕ್ತ ಸಂಗ್ರಹವಾಗಿತ್ತು.
ಬಿಪಿಎಲ್ ಕಾರ್ಡುದಾರರಿಗೆ ರಿಯಾಯಿತಿ ದರದಲ್ಲಿ ರಕ್ತಪೂರೈಕೆ
ರಕ್ತ ಪೂರೈಕೆ ಮಾಡುವುದು ಉದ್ಯಮವಲ್ಲ. ಹಾಗಾಗಿ ರಕ್ತ ದಾನ ಮಾಡಿದವರಿಗೆ ಅವಶ್ಯವಿರುವಾಗ ಕಡಿಮೆ ದರದಲ್ಲಿ ರಕ್ತ ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ. ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ನಲ್ಲಿ ಬಿಪಿಎಲ್ ಕಾರ್ಡುದಾರ ರೋಗಿಗಳಿಗೆ ರಿಯಾಯಿತಿ ದರದಲ್ಲಿ ರಕ್ತ ಪೂರೈಕೆ ಮಾಡಲಾಗುತ್ತಿದೆ’ ಎಂದು ಡಾ. ಸೀತಾರಾಮ ಭಟ್ ಹೇಳಿದರು.
ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಸಿಇಒ ಜಯಪ್ರಕಾಶ್ ರೈ ಚೆಲ್ಯಡ್ಕ, ಪತ್ರಕರ್ತ ಮಾಧವ ನಾಯಕ್ ಇಂದಾಜೆ, ಪ್ರಗತಿ ಪಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಪ್ರೀತಾ ಹೆಗ್ಡೆ , ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ರೈ ಬೈಲಾಡಿ, ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ಸಂಧ್ಯಾ ಪಕ್ಕಳ ಸ್ವಾಗತಿಸಿ, ಚಿತ್ರಕಲಾ ಶಿಕ್ಷಕ ರಂಜಿತ್ ಕೆ.ಎಂ. ವಂದಿಸಿದರು. ವಿದ್ಯಾರ್ಥಿಗಳಾದ ವೃಷ್ಟಿ, ಅನನ್ಯ ಹಾಗೂ ವೃದ್ಧಿ ಸಿ. ಪ್ರಾರ್ಥಿಸಿದರು. ಸಹ ಶಿಕ್ಷಕಿ ಕುಮಾರಿ ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.