ಭಾರತ ಪ್ರಕೃತಿಯಲ್ಲಿ ದೇವರನ್ನು ಕಂಡ ದೇಶ. “ಪ್ರಕೃತಿಯಿಂದಲೇ ಎಲ್ಲಾ ಅದಿಲ್ಲದೆ ನಾವಿಲ್ಲ, ಪರಿಸರವೇ ತಾಯಿ ” ಎಂಬ ಸತ್ಯವನ್ನು ನಮ್ಮ ಪೂರ್ವಜರು ಅದೆಷ್ಟೋ ಸಾವಿರ ವರ್ಷಗಳ ಹಿಂದೆಯೇ ಅರಿತಿದ್ದರು. ಇದಕ್ಕೆ ಪೂರಕವಾಗಿ ನಮ್ಮ ಪ್ರಾಚೀನ ವೇದ, ಪುರಾಣಗಳಲ್ಲಿ ಪ್ರಕೃತಿಯ ಮಹತ್ವವನ್ನು ಸಾರುವ ಅನೇಕ ಶ್ಲೋಕಗಳಿವೆ.
ಇಂತಹ ಪೂಜನೀಯ ಸ್ಥಾನವನ್ನು ಹೊಂದಿದ್ದ ಪ್ರಕೃತಿಯನ್ನು ಮನುಷ್ಯರು ಇಂದು ಭೋಗಿಸಿ ಅವಳ ಒಡಲನ್ನು ಬರಿದಾಗಿಸುತ್ತಿರುವುದು ನಿಜಕ್ಕೂ ಖೇದಕರ. ಈ ಸಂದರ್ಭದಕ್ಕೆ ಸೂಕ್ತವಾಗಿ ಮಹಾತ್ಮ ಗಾಂಧೀಜಿಯವರ ಮಾತನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬಹುದು. ” ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ಆತನ ದುರಾಸೆಗಳನ್ನಲ್ಲ. “
ಮನುಷ್ಯ ಇಂದು ಪರಿಸರವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಈ ಬದಲಾದ ದೃಷ್ಟಿಕೋನವೇ ಪರಿಸರದ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಮುಖ್ಯ ಕಾರಣ.
ಹಿಂದೆ ಜನರು ತಮ್ಮ ಗೆಳೆಯರೊಂದಿಗೆ / ಕುಟುಂಬದೊಂದಿಗೆ ವಿವಿಧ ಸ್ಥಳಗಳಿಗೆ ಪ್ರವಾಸ ಹೋಗಿ ಅಲ್ಲಿನ ಪರಿಸರ ಸೌಂದರ್ಯವನ್ನು ಆಸ್ವಾದಿಸಿ, ಅನುಭವಿಸಿ, ಉತ್ತಮ ಸಿಹಿ ನೆನಪುಗಳೊಂದಿಗೆ ಬರುತ್ತಿದ್ದರು. ಅದಲ್ಲದೆ ಆ ಹೋದ ಸ್ಥಳದ ಬಗ್ಗೆ ಮಾಹಿತಿಗಳನ್ನು ಕೇಳಿ ತಿಳಿಯುತ್ತಿದ್ದರು. ಆದರೆ ಈಗಿನ ಜನರು ಪ್ರವಾಸ ಎಂಬ ನೆಪದಲ್ಲಿ ಹೋಗಿ ನಿಸರ್ಗದ ಸೌಂದರ್ಯವನ್ನು ಸವಿಯುವ ಬದಲು ಅಲ್ಲಿ ಬರೀ ಮೋಜು ಮಸ್ತಿಗಳನ್ನು ಮಾಡಿ ತ್ಯಾಜ್ಯಗಳನ್ನು ಸುರಿದು ಬರುತ್ತಿದ್ದಾರೆ. ಇಂದಿನ ಪೀಳಿಗೆಯ ಹೆಚ್ಚಿನ ಜನಗಳಿಗೆ ಪರಿಸರವನ್ನು ಆಸ್ವಾದಿಸುವ, ಅನುಭವಿಸುವ ಬಗೆ ಮತ್ತು ಅದರಲ್ಲಿ ಸಿಗುವ ಸಂತೋಷದ ಬಗ್ಗೆ ತಿಳಿದಿಲ್ಲ. ಅದು ಅನುಭವಿಸಿದವರಿಗಷ್ಟೇ ಗೊತ್ತು. ನಮ್ಮ ಸಮಸ್ಯೆಗಳಿಗೆ ಪರಿಸರದಲ್ಲೇ ಉತ್ತರವಿದೆ ಹಾಗೂ ಅದರಲ್ಲೇ ಜೀವನ ಪಾಠವೂ ಇದೆ. ಅದನ್ನು ಕಂಡುಕೊಳ್ಳುವ ಜಾಣ್ಮೆ ನಮಗೆ ಬೇಕು ಅಷ್ಟೇ.
ಪ್ರಕೃತಿ ನಮ್ಮ ಸದುದ್ದೇಶವನ್ನು ಈಡೇರಿಸುವ ಕಾಮಧೇನು. ಆದರೆ ಪ್ರಸ್ತುತ ಮನುಷ್ಯ ಪರಿಸರವನ್ನು ತನ್ನ ಎಲ್ಲಾ ಬೇಡಿಕೆಯನ್ನು ಈಡೇರಿಸುವ ಸಾಧನವನ್ನಾಗಿ ನೋಡುತ್ತಿದ್ದಾನೆ
ಅದನ್ನು ಹಿತಮಿತವಾಗಿ ಬಳಸಿ ಮುಂದಿನ ಪೀಳಿಗೆಗಾಗಿಯೂ ಉಳಿಸಬೇಕಾದ ಮುಖ್ಯ ಜವಾಬ್ದಾರಿಯನ್ನು ಮರೆತಂತಿದೆ. ಇದಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಮರಗಳ ಮಾರಣಹೋಮ, ಕೆರೆಗಳ ಒತ್ತುವರಿ, ಗಣಿಗಾರಿಕೆ ಮುಂತಾದವುಗಳೇ ಸಾಕ್ಷಿ.
ಆದ್ದರಿಂದ ಕೇವಲ ಅಭಿವೃದ್ಧಿಯ ಹಿಂದೆ ಹೋಗದೆ ಅದರಿಂದ ಪರಿಸರಕ್ಕಾಗುವ ಹಾನಿಯ ಕುರಿತೂ ಗಂಭೀರವಾಗಿ ಯೋಚಿಸಬೇಕಾಗಿದೆ. ಈ ಕುರಿತು ಸಂಘ – ಸಂಸ್ಥೆ, ಸರ್ಕಾರ ಮಾತ್ರವಲ್ಲದೆ ಪ್ರತಿಯೊಬ್ಬ ಮನುಷ್ಯರು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಆಕ್ಸಿಜನ್ ಸಿಲಿಂಡರ್ ನ ಮೂಲಕ ಉಸಿರಾಡುವ ಕಾಲ ಬಹಳ ದೂರವಿಲ್ಲ.
ವರುಣ ಕೃಷ್ಣ. ಬಿ
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿ, ವಿವೇಕಾನಂದ ಮಹಾವಿದ್ಯಾಲಯ ( ಸ್ವಾಯತ್ತ ) ಪುತ್ತೂರು.