ರಕ್ಷಾ ಬಂಧನ ಭಾವನೆಯನ್ನು ಬೆಸೆಯುವ ಹಬ್ಬ : ಗಣರಾಜ್ ಭಟ್ ಕೆದಿಲ
ಪುತ್ತೂರು : ನಮ್ಮದು ಸನಾತನ ಹಿಂದೂ ಧರ್ಮ. ಭಾರತೀಯರಾದ ನಾವು ಪ್ರತಿಯೊಂದರಲ್ಲಿಯೂ ದೇವರಿದ್ದಾರೆ ಎಂಬ ನಂಬಿಕೆಯುಳ್ಳವರು. ಆಚಾರ, ವಿಚಾರ ಸಂಸ್ಕೃತಿ, ಸಂಸ್ಕಾರದ ಮೇಲೆ ನಂಬಿಕೆಯಿರಿಸಿ ಆರಾಧಿಸುತ್ತಾ ಬಂದವರು. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಹಿನ್ನೆಲೆಯಿದೆ. ರಕ್ಷಾ ಬಂಧನ ಎನ್ನುವುದು ಪವಿತ್ರವಾದ ಅಣ್ಣ ತಂಗಿಯರ ಸಂಬಂಧದ ಭಾವನೆಯನ್ನು ಬೆಸೆಯುತ್ತದೆ ಎಂದು ವಾಗ್ಮಿ ಗಣರಾಜ ಭಟ್ ಕೆದಿಲ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಲಾದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಣ್ಣ ತಂಗಿ ಸಂಬಂಧ ಭಾವನೆಗಳನ್ನು ಬೆಸೆಯುತ್ತದೆ. ಸಮಾಜದಲ್ಲಿ ಜಾತಿ ಪದ್ಧತಿ ಅನ್ನುವುದು ರೂಢಿಯಲ್ಲಿದೆ. ಅದು ಪುರಾತನ ಕಾಲದಿಂದಲೇ ಬಂದಿದೆ. ಅದನ್ನು ಮೆಟ್ಟಿ ನಿಂತು ರಕ್ಷೆಯ ಕಟ್ಟುವೆವು ಬಲಿಷ್ಠ ರಾಷ್ಟ್ರವ ಕಟ್ಟುವೆವು ಎಂಬ ಸಂಕಲ್ಪವನ್ನು ಮಾಡಬೇಕಿದೆ. ರಾಷ್ಟ್ರ ರಕ್ಷಣೆಯ ಜೊತೆಯಲ್ಲಿ ರಾಷ್ಟ್ರಭಾಷೆ, ಮಾತೃಭಾಷೆಯನ್ನೂ ಉಳಿಸುವ ಪ್ರಯತ್ನ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ಸನಾತನ ಧರ್ಮವನ್ನು ಉಳಿಸುವವರು ನಾವಾಗಬೇಕು. ಎಲ್ಲ ಆಚರಣೆಗಳನ್ನು ಕಾಯಾ ವಾಚಾ ಮನಸಾ ಸನಾತನ ಧರ್ಮದ ಆಧಾರದಲ್ಲಿ ಆಚರಿಸಿದಾಗ ಪರಿಪೂರ್ಣ ಬದುಕು ನಮ್ಮದಾಗಿ ಜೀವನದಲ್ಲಿ ಸಫಲಯತೆಯನ್ನು ಪಡೆಯಲು ಸಾಧ್ಯ. ಸನಾತನ ಧರ್ಮವು ವೇದಗಳ ತಳಹದಿಯಲ್ಲಿದೆ. ಪ್ರತಿಯೊಬ್ಬರೂ ವೇದಗಳ ಅಧ್ಯಯನ ಮಾಡಬೇಕು. ಮಧ್ವಾಚಾರ್ಯರ ತತ್ವದಂತೆ ಎಲ್ಲರೂ ಸಮಾನರು ಎಂಬ ಭಾವವನ್ನು ಅರಿತು ಜೀವನ ನಡೆಸಬೇಕು ಎಂದು ನುಡಿದರು.
ವೇದಿಕೆಯಲ್ಲಿ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ.ಎಸ್., ಉಪ ಪ್ರಾಂಶುಪಾಲ ಪ್ರದೀಪ್ ಕೆ.ವೈ. ಉಪಸ್ಥಿತರಿದ್ದರು. ವಿದ್ಯಾರ್ಥಿ ಸಾತ್ವಿಕ್ ಅತಿಥಿಗಳನ್ನು ಪರಿಚಯಿಸಿದರು. ಹಂಸಿನಿ, ಈಶಿತಾ, ದೀಪ್ತಿ ಪ್ರಾರ್ಥಿಸಿ, ಗುಣನಿಧಿ ಸ್ವಾಗಸಿದರು. ಜ್ವಲನ್ ಜೋಶಿ ಕಾರ್ಯಕ್ರಮ ನಿರೂಪಿಸಿದರು.