ಆಧಾರ್ ಕಾರ್ಡ್ ತಿದ್ದುಪಡಿ ಸ್ಥಳೀಯ ಅಂಚೆ ಕಚೇರಿಯಲ್ಲಿ ಮಾಡಬೇಕು- ನರಿಮೊಗರಿಗೆ ಪೂರ್ಣಕಾಲಿಕ ಗ್ರಾಮ ಆಡಳಿತಾಧಿಕಾರಿ ನೇಮಕ ಮಾಡಿ-ನರಿಮೊಗರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಆಗ್ರಹ

0

ಪುತ್ತೂರು: ಆಧಾರ್ ಕಾರ್ಡ್ ತಿದ್ದುಪಡಿಯನ್ನು ಸ್ಥಳೀಯ ಮಟ್ಟದ ಅಂಚೆ ಕಚೇರಿಯಲ್ಲೇ ಆಗುವಂತೆ ವ್ಯವಸ್ಥೆ ಮಾಡಬೇಕೆನ್ನುವ ಆಗ್ರಹ ನರಿಮೊಗರು ಗ್ರಾ.ಪಂ ಗ್ರಾಮಸಭೆಯಲ್ಲಿ ವ್ಯಕ್ತವಾಗಿದೆ.


ಗ್ರಾಮ ಸಭೆ ಆ.12ರಂದು ಗ್ರಾ.ಪಂ ಅಧ್ಯಕ್ಷೆ ಹರಿಣಿ ಪಂಜಳ ಅಧ್ಯಕ್ಷತೆಯಲ್ಲಿ ನರಿಮೊಗರು ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಿತು.


ಗ್ರಾಮಸ್ಥರು, ಮಾಜಿ ತಾ.ಪಂ ಸದಸ್ಯರೂ ಆದ ಪರಮೇಶ್ವರ ಭಂಡಾರಿ ಮಾತನಾಡಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಬೇಕಾದರೆ ಪುತ್ತೂರಿನಲ್ಲಿರುವ ಅಂಚೆ ಕಚೇರಿಗೆ ಹೋಗಬೇಕಾಗಿದ್ದು ಅಲ್ಲಿಗೆ ಎಲ್ಲ ಕಡೆಯಿಂದಲೂ ಜನರು ಬರುವ ಕಾರಣ ಅಲ್ಲಿ ರಶ್ ಇರುತ್ತದೆ, ಮಾತ್ರವಲ್ಲದೇ ಕ್ಯೂನಲ್ಲಿ ನಿಂತು ಜನರು ಬಹಳ ತೊಂದರೆ ಅನುಭವಿಸುತ್ತಾರೆ, ಇದನ್ನು ಗ್ರಾ.ಪಂ ವ್ಯಾಪ್ತಿಯ ಸ್ಥಳೀಯ ಅಂಚೆ ಕಚೇರಿಯಲ್ಲೇ ಮಾಡಿದರೆ ಜನರಿಗೆ ಬಹಳ ಉಪಯುಕ್ತವಾಗಲಿದೆ ಎಂದು ಹೇಳಿದರು. ಅಂಚೆ ಕಚೇರಿಯ ಅಧಿಕಾರಿ ಉತ್ತರಿಸಿ ಈ ಬಗ್ಗೆ ಮೇಲಧಿಕಾರಿಗಳಿಗೆ ಬರೆಯುವುದಾಗಿ ತಿಳಿಸಿದರು.

ಗ್ರಾಮ ಆಡಳಿತಾಧಿಕಾರಿ ವಿರುದ್ಧ ಅಸಮಾಧಾನ:
ನರಿಮೊಗರು ಗ್ರಾಮ ಆಡಳಿತಾಧಿಕಾರಿಯವರು ಕಂದಾಯ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡುವ ವೇಳೆ ಪರಮೇಶ್ವರ ಭಂಡಾರಿ ಮಾತನಾಡಿ ನೀವು ಇಲ್ಲಿ ಮಾಹಿತಿ ನೀಡ್ತೀರಿ, ಆದರೆ ನಿಮ್ಮ ಕಚೇರಿಗೆ ಬಂದರೆ ಅಲ್ಲಿ ನೀವಿರುವುದಿಲ್ಲ, ಅರ್ಜಿ ಕೊಟ್ರೆ ಸ್ಪಂದನೆಯೂ ಇರುವುದಿಲ್ಲ ಎಂದು ಹೇಳಿದರು. ಗ್ರಾ.ಪಂ ಸದಸ್ಯ ಬಾಬು ಶೆಟ್ಟಿ ಮಾತನಾಡಿ ನಮಗೆ ಬೇರೆ ಗ್ರಾಮ ಆಡಳಿತಾಧಿಕಾರಿಯನ್ನು ಇಲ್ಲಿಗೆ ನೇಮಕ ಮಾಡುವ ಅಗತ್ಯವಿದೆ ಎಂದು ಹೇಳಿದರು. ನಮ್ಮ ಗ್ರಾಮದಲ್ಲಿ ಯಾವಾಗ ನೋಡಿದ್ರೂ ವಿ.ಎ ಇರುವುದಿಲ್ಲ, ಕೇಳಿದರೆ ಅಲ್ಲಿ ಚಾರ್ಜ್, ಇಲ್ಲಿ ಚಾರ್ಜ್ ಎಂದು ಹೇಳ್ತಾರೆ, ಗ್ರಾಮಸ್ಥರಿಗೆ ಸಿಗದ ವಿ.ಎ ನಮಗೆ ಅಗತ್ಯವಿಲ್ಲ, ಇಲ್ಲಿಗೆ ಖಾಯಂ ವಿ.ಎ ನೇಮಕವಾಗಬೇಕು ಎಂದು ಅವರು ಹೇಳಿದರು. ಗ್ರಾಮ ಆಡಳಿತಾಧಿಕಾರಿ ಸುಮನ್ ಉತ್ತರಿಸಿ ನನಗೆ ನರಿಮೊಗರು, ಶಾಂತಿಗೋಡು ಮತ್ತು ಪುತ್ತೂರು ಕಸಬಾ ಚಾರ್ಜ್ ಇರುವ ಕಾರಣ ಎಲ್ಲ ದಿನ ಇಲ್ಲಿರಲು ಆಗುತ್ತಿಲ್ಲ, ಹಾಗಾಗಿ ಕೆಲವೊಮ್ಮೆ ಗ್ರಾಮಸ್ಥರು ಬಂದಾಗ ಕಚೇರಿಯಲ್ಲಿ ಇರುವುದಿಲ್ಲ ಎಂದು ಹೇಳಿದರು.

ಪುಡಾ ಅಧಿಕಾರ ವಾಪಸ್ ಗ್ರಾ.ಪಂಗೆ ನೀಡಿ:
ಗ್ರಾಮಸ್ಥ ದಿನೇಶ್ ಕೈಪಂಗಳ ಮಾತನಾಡಿ ಗ್ರಾ.ಪಂ ಅಧಿಕಾರ ಮೊಟಕುಗೊಳಿಸಿ ಪುಡಾಗೆ ಹೆಚ್ಚಿನ ಅಧಿಕಾರ ನೀಡಲಾಗಿದ್ದು ಅದನ್ನು ರದ್ದುಗೊಳಿಸಿ ಆ ಅಧಿಕಾರವನ್ನು ಗ್ರಾ.ಪಂಗೆ ನೀಡಬೇಕು ಎಂದು . ಈ ಬಗ್ಗೆ ನಿರ್ಣಯ ಮಾಡಿ ಕಳುಹಿಸುವುದಾಗಿ ಪಿಡಿಓ ಹೇಳಿದರು.

ಬೆಕ್ಕು ಕಚ್ಚಿದರೆ ನಿರ್ಲಕ್ಷ್ಯ ಬೇಡ..!
ಆರೋಗ್ಯ ಇಲಾಖೆಯ ಮಾಹಿತಿ ವೇಳೆ ನೋಡೆಲ್ ಅಧಿಕಾರಿ ನಾಗೇಶ್ ಮಾತನಾಡಿ ಬೆಕ್ಕು ಕಚ್ಚಿದರೆ ಯಾರೂ ನಿರ್ಲಕ್ಷ್ಯ ವಹಿಸಬಾರದು ಎಂದು ಹೇಳಿದರು. ಮನೆಯ ಸಾಕು ಬೆಕ್ಕು ಕಚ್ಚಿದರೆ ಕೆಲವರು ಅದಕ್ಕೆ ಬೇಕಾದ ಔಷಧ ಪಡೆಯದೇ ಸುಮ್ಮನಿರುತ್ತಾರೆ, ಕೆಲವು ತಿಂಗಳ ಬಳಿಕ ರೇಬಿಸ್ ಅಟ್ಯಾಕ್ ಆಗುವ ಸಾಧ್ಯತೆಯಿದ್ದು ಈ ಬಗ್ಗೆ ಪ್ರತಿಯೊಬ್ಬರೂ ಅರಿತಿರಬೇಕು, ಉಪ್ಪಿನಂಗಡಿ ಭಾಗದ ಓರ್ವರಿಗೆ ಬೆಕ್ಕು ಕಚ್ಚಿದ ೮ ತಿಂಗಳ ಬಳಿಕ ರೋಗ ಉಲ್ಭನಿಸಿ ಸಾವು ಸಂಭವಿಸಿದೆ ಎಂದು ಅವರು ವಿವರಣೆ ನೀಡಿದರು.

ಆಂಗ್ಲ ಮಾಧ್ಯಮ ಆರಂಭಕ್ಕೆ ಅಭಿನಂದನೆ:
ಗ್ರಾಮಸ್ಥ ಉಸ್ಮಾನ್ ನೆಕ್ಕಿಲು ಮಾತನಾಡಿ ನರಿಮೊಗರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಅನುಮತಿ ಸಿಕ್ಕಿದ್ದು ನಮ್ಮೆಲ್ಲರ ಹೋರಾಟಕ್ಕೆ ಸಿಕ್ಕಿದ ಯಶಸ್ಸು ಇದಾಗಿದೆ, ಇದಕ್ಕೆ ವಿಶೇಷ ಮುತುವರ್ಜಿ ವಹಿಸಿದ ಸಿಆರ್‌ಪಿ ಪರಮೇಶ್ವರಿಯವರಿಗೆ ಅಭಿನಂದನೆ ಸಲ್ಲಿಸಿದರು. ಪ್ರತೀ ಶಾಲೆಯಲ್ಲೂ ಕನ್ನಡದ ಜೊತೆ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಎಲ್ಲ ಇಲಾಖೆಯವರು ಗ್ರಾಮಸಭೆಗೆ ಬರಬೇಕು:
ಗ್ರಾಮಸ್ಥ ಜಯರಾಮ ಪೂಜಾರಿ ಮಾತನಾಡಿ ಮುಂದಿನ ಗ್ರಾಮ ಸಭೆಗೆ ಕೃಷಿ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯವರನ್ನು ಗ್ರಾಮ ಸಭೆಗೆ ಬರುವಂತೆ ಮಾಡಬೇಕು ಎಂದು ಹೇಳಿದರು.

ಮಾದರಿ ಗ್ರಾಮ ಸಭೆ-ಮೆಚ್ಚುಗೆ
ಚರ್ಚಾ ನಿಯಂತ್ರಣಾಧಿಕಾರಿ ನಾಗೇಶ್ ಮಾತನಾಡಿ ನರಿಮೊಗರು ಗ್ರಾಮ ಸಭೆ ಅಚ್ಚುಕಟ್ಟಾಗಿ ಮತ್ತು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಯಾವುದೇ ಗದ್ದಲ, ಗೊಂದಲಗಳಿಲ್ಲದೇ ನಡೆದಿದೆ, ಇಂತಹ ಗ್ರಾಮ ಸಭೆಗಳು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಹೇಳಿದರು. ಅಂಚೆ ಕಚೇರಿ ಅಧಿನದಲ್ಲಿರುವ ಇನ್ಸೂರೆನ್ಸ್ ಪಾಲಿಸಿಯನ್ನು ಪ್ರತಿಯೊಬ್ಬರೂ ಮಾಡಿಸಿಕೊಳ್ಳಬೇಕು, ಅದು ಬಹಳ ಉತ್ತಮ ಯೋಜನೆಯಾಗಿದೆ ಎಂದು ಅವರು ಹೇಳಿದರು.

ನಿವೇಶನ ಕಾಮಗಾರಿ 80.ಶೇ ಪೂರ್ಣ-ಸುಧಾಕರ ಕುಲಾಲ್
ಗ್ರಾ.ಪಂ ಸದಸ್ಯ ಸುಧಾಕರ ಕುಲಾಲ್ ಮಾತನಾಡಿ ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಜಾಗ ಕಾಯ್ದಿರಿಸಿ ಅದರ ಕಾಮಗಾರಿ 80.ಶೇ ಪೂರ್ತಿಯಾಗಿದೆ, ಸ್ವಚ್ಚತೆ, ಅಭಿವೃದ್ಧಿ ವಿಚಾರದಲ್ಲಿ ನಮ್ಮ ಗ್ರಾ.ಪಂ ಉತ್ತಮ ಸಾಧನೆ ಮಾಡಿದೆ ಎಂದು ಅವರು ಹೇಳಿದರು.

ಸಿಕ್ಕಿದ ಅವಕಾಶವನ್ನು ಸದುಪಯೋಪಡಿಸಿಕೊಂಡಿದ್ದೇವೆ-ಉಮೇಶ್
ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಎಂ ಮಾತನಾಡಿ ನಮ್ಮ ಗ್ರಾಮ ಪಂಚಾಯತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಿಕ್ಕಿದ ಅವಕಾಶವನ್ನು ಸದಸ್ಯರೆಲ್ಲರೂ ಸದುಪಯೋಗಪಡಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.

ಗ್ರಾಮಸ್ಥರ ಸಹಕಾರದಿಂದ ಗ್ರಾಮದ ಅಭಿವೃದ್ಧಿ-ಹರಿಣಿ
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ಹರಿಣಿ ಪಂಜಳ ಮಾತನಾಡಿ ಗ್ರಾಮಸ್ಥರ ಸಹಕಾರದಿಂದ ಗ್ರಾಮದ ಅಭಿವೃದ್ಧಿ ಮಾಡಲು ಸಾಧ್ಯವಾಗಿದ್ದು ಗ್ರಾಮದ ಅಭಿವೃದ್ಧಿಗೆ ನಮ್ಮಿಂದಾಗುವ ಎಲ್ಲಾ ಪ್ರಯತ್ನ ಮಾಡಿದ್ದೇವೆ, ಗ್ರಾಮಸ್ಥರು ಸ್ವಚ್ಚತೆ, ತೆರಿಗೆ ಪಾವತಿ ವಿಚಾರದಲ್ಲಿ ಗ್ರಾ.ಪಂಗೆ ಸಹಕಾರ ನೀಡಬೇಕು, ಮಳೆ ನೀರು ಉಳಿಸುವ ಸಲುವಾಗಿ ಇಂಗು ಗುಂಡಿಯನ್ನು ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು.

ಸ್ವಚ್ಛತೆ ಬಗ್ಗೆ ಪ್ರತಿಜ್ಞಾವಿದಿ ಸ್ವೀಕಾರ:
ಸಭೆಯ ಆರಂಭದಲ್ಲಿ ಸ್ವಚ್ಛತೆ ವಿಚಾರದಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ನಡೆಯಿತು. ಪಿಡಿಓ ರವಿಚಂದ್ರ ಯು ಪ್ರತಿಜ್ಞಾ ವಿಧಿ ಬೋಧಿಸಿದರು. ಗ್ರಾ.ಪಂ ಸದಸ್ಯರು ಮತ್ತು ಗ್ರಾಮಸ್ಥರು ಪ್ರತಿಜ್ಞೆ ಸ್ವೀಕರಿಸಿದರು.

ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರಾದ ಪುಷ್ಪಾವತಿ, ಪ್ರತಿಮಾ ರೈ, ಮಲ್ಲಿಕಲತಾ ರೈ, ನವೀನ್ ಕುಮಾರ್ ರೈ, ಪದ್ಮಪ್ಪ ಎ, ಚಿತ್ರಾ, ಬೇಬಿ, ಪುರಂದರ, ಜಯಲಕ್ಷ್ಮೀ ಆರ್, ಕಲಂದರ್ ಶಾಫಿ, ಕೇಶವ ಎಂ, ವಿದ್ಯಾ ಎ, ತಾರನಾಥ, ಎಂ ದಿನೇಶ, ಆಶಾ ಪಿ.ಎಸ್, ಸುಧೀರ್ ಕುಮಾರ್ ಕೆ, ನಾಗಮ್ಮ ಟಿ, ಹೊನ್ನಪ್ಪ ಪೂಜಾರಿ ಕೈಂದಾಡಿ, ಎಂ ಪದ್ಮಾವತಿ, ವಸಂತಿ ಉಪಸ್ಥಿತರಿದ್ದರು.

ಗ್ರಾ.ಪಂ ಪಿಡಿಓ ರವಿಚಂದ್ರ ಯು ಸ್ವಾಗತಿಸಿ ಗ್ರಾಮ ಸಭೆ ನಿರ್ವಹಿಸಿದರು. ಕಾರ್ಯದರ್ಶಿ ಶೇಖ್ ಕಲಂದರ್ ಆಲಿ ವರದಿ ವಾಚಿಸಿದರು. ಸಿಬ್ಬಂದಿ ಮಾಧವ ಎಸ್, ಸನತ್ ಕುಮಾರ್ ಪಿ, ಭವ್ಯ, ಶೋಭಾ, ಅಶ್ವಿನಿ, ಕಾಯಕಮಿತ್ರ ನಮೃತಾ ಸಹಕರಿಸಿದರು.

LEAVE A REPLY

Please enter your comment!
Please enter your name here