ಪುತ್ತೂರು: ಕರ್ನಾಟಕ ಯಕ್ಷಗಾನ ನಾಟಕ ಅಕಾಡೆಮಿ ಬೆಂಗಳೂರು ಇದರ ಸಹಯೋಗದಲ್ಲಿ ಕೀರ್ತಿಶೇಷ ಡಾ| ಶ್ರೀಧರ ಭಂಡಾರಿ ಸಂಸ್ಮರಣಾ ವೇದಿಕೆ ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ಟರವರಿಗೆ ಸಂಸ್ಮರಣಾ ಪ್ರಶಸ್ತಿ, ಹಿರಿಯರ ನೆನೆಪು ಹಾಗೂ ಪುತ್ತೂರು ಶ್ರೀಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ ಕಾರ್ತಿಕೇಯ ಕಲ್ಯಾಣ ಯಕ್ಷಗಾನ ಕಾರ್ಯಕ್ರಮ ಆ.13ರಂದು ಸಂಜೆ 6ರಿಂದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು.
ಡಾ|ಶ್ರೀಧರ ಭಂಡಾರಿಯವರ ಸಂಸ್ಮರಣಾ ಭಾಷಣ ಮಾಡಿದ ಬೆಂಗಳೂರಿನ ಉದ್ಯಮಿ ಆರ್.ಕೆ.ಭಟ್ರವರು ಸುಮಾರು 35 ವರ್ಷಗಳಿಂದ ಡಾ|ಶ್ರಿಧರ ಭಂಡಾರಿಯವರು ಪ್ರವಾಸಿ ಯಕ್ಷಗಾನ ಮಂಡಳಿ ನಡೆಸುತ್ತಿದ್ದವರು. ಅಲ್ಲದೆ ಹಲವು ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯಾಭ್ಯಾಸ ಕೂಡ ನೀಡಿದ್ದಾರೆ. ಬೆಂಗಳೂರಿನಲ್ಲಿ ಹಲವು ದಿನಗಳ ಕಾಲ ಕಾರ್ಯಕ್ರಮ ಮಾಡುತ್ತಿದ್ದರು. ಕಲಾವಿದರಿಗೆ ಗೌರವ ಕೊಡುತ್ತಿದ್ದ ಇವರು ಯಕ್ಷಗಾನ ಲೋಕಕ್ಕೆ ಅನನ್ಯ ಸೇವೆ ಸಲ್ಲಿಸಿದವಾರಿದ್ದಾರೆ ಎಂದ ಅವರು ಪ್ರತೀ ವರ್ಷವೂ ಸಂಸ್ಮರಣಾ ಕಾರ್ಯಕ್ರಮ ಮಾಡಲು ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದರು.

ಹಿರಿಯ ಯಕ್ಷಗಾನ ಅರ್ಥಧಾರಿ ಉಜಿರೆ ಅಶೋಕ್ ಭಟ್ ಮಾತನಾಡಿ ಡಾ|ಶ್ರೀಧರ ಭಂಡಾರಿ ಮತ್ತು ಸೂರಿಕುಮೇರು ಗೋವಿಂದ ಭಟ್ರವರು ಯಕ್ಷಗಾನದ ಎರಡು ಐಕಾನ್ ಫಿಗರ್ಗಳು. ಕಲಾ ದೇಗುಲದ ಹೃದಯ ಕಲಶಗಳು ಹಾಗೂ ಕಲಾಲೋಕದ ಎರಡು ಪರಂಪರೆಗಳು. ಗೋವಿಂದ ಭಟ್ ಯಕ್ಷಗಾನದಲ್ಲಿ ನಿರಂತರ 70 ವರ್ಷದ ತಿರುಗಾಟ ಮಾಡಿದವರು. ಇದು ಯಕ್ಷಗಾನದ ದಾಖಲೆಯಾಗಿದೆ. ಒಂದೇ ಮೇಳದ ಯಜಮಾನಿಕೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಓರ್ವ ಕಲಾವಿದ ಎಂದರು. ಯಕ್ಷಗಾನದಲ್ಲಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ದುಡಿಮೆ ಇಬ್ಬರಲ್ಲಿ ಸಮಾನವಾಗಿದೆ. ಕಲಾಧೋರಣೆ ಇಬ್ಬರ ಮನೋಧರ್ಮವಾಗಿದೆ. ಬಹಳ ಹೊಂದಾಣಿಕೆಯಲ್ಲಿ ಒಟ್ಟಿಗೆ ವೇಷ ಮಾಡಿದವರು. ಅಲ್ಲದೆ ಇತರ ಕಲಾವಿದರೊಂದಿಗೂ ಹೊಂದಿಕೊಂಡು ಹೋಗುವ ಕಲಾ ತಪಸ್ವಿಗಳಾಗಿದ್ದಾರೆ ಎಂದರು. ಶ್ರೀಧರ ಭಂಡಾರಿಯವರು ಯಕ್ಷಗಾನದ ತೆಂಡೂಲ್ಕರ್ ಆಗಿದ್ದಾರೆ. ಮಳೆಗಾಲದಲ್ಲಿ ಪ್ರವಾಸಿ ಯಕ್ಷಗಾನ ಕಲಾ ಮಂಡಳಿಯ ಮೂಲಕ ಕಲಾವಿದರಿಗೂ ಉದ್ಯೋಗ ನೀಡಿದ್ದಾರೆ ಎಂದ ಅವರು ಇಬ್ಬರೂ ಕಲಾವಿದರೂ ಕಲಾಲೋಕದ ಕಲ್ಪವೃಕ್ಷಗಳು. ಬದುಕಿರುವಾಗಲೇ ಇತಿಹಾಸವಾದ ದಂತಕತೆಗಳು ಎಂದರು.
ಧರ್ಮಸ್ಥಳ ಮೇಳದ ಪ್ರಬಂಧಕ ಗಿರೀಶ್ ಹೆಗ್ಡೆ ಮಾತನಾಡಿ ಡಾ|ಶ್ರಿಧರ ಭಂಡಾರಿಯವರ ಮನೆಯವರು ಮತ್ತು ನಾವು ನಮ್ಮ ತಂದೆಯವರ ಕಾಲದಿಂದಲೂ ತುಂಬಾ ಆತ್ಮೀಯರಾಗಿದ್ದೇವೆ. ಗೋವಿಂದ ಭಟ್ರವರಿಗೆ ಸಿಗುವ ಗೌರವವನ್ನು ನನ್ನ ಕೈಯಲ್ಲಿ ಕೊಟ್ಟಿದ್ದಾರೆ. ಇದಕ್ಕಿಂತ ದೊಡ್ಡ ಗೌರವ ನನಗೆ ಬೇರೆ ಇಲ್ಲ. ಶ್ರೀಧರ ಭಂಡಾರಿಯವರು ಚುರುಕಿನ ನಾಟ್ಯಗಾರರು. ಇವರ ಕುಣಿತ ನನ್ನ ಕಣ್ಣಿನಿಂದ ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದ ಅವರು ಈ ಕಾರ್ಯಕ್ರಮ ಶ್ರೀಧರ ಭಂಡಾರಿಯವರ ನೆನಪಿನಲ್ಲಿ ನಿರಂತರ ನಡೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್ ಮಾತನಾಡಿ ಶ್ರೀಧರ ಭಂಡಾರಿಯವರು ಯಕ್ಷಗಾನವನ್ನು ಉಳಿಸಿ ಬೆಳೆಸುವ ಕೆಲಸ ಮಾಡಿದವರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಯಕ್ಷರಂಗದಲ್ಲಿ ಮಾಡಿದ ಸೇವೆಯಿಂದ ಸಮಾಜ ಅವರನ್ನು ಗುರುತಿಸುವಂತಾಗಿದೆ. ಒಂದು ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡಿದ ಶ್ರೀಧರ ಭಂಡಾರಿಯವರು ಯಕ್ಷಗಾನದ ಮೇರು ಕಲಾವಿದರಾಗಿದ್ದಾರೆ ಎಂದು ಹೇಳಿದ ಅವರು ಯಕ್ಷಗಾನ ಸೇವೆಗೆ ನಮ್ಮ ವ್ಯವಸ್ಥಾಪನಾ ಸಮಿತಿ ಯಾವಾಗಲೂ ಪ್ರೋತ್ಸಾಹ ಕೊಡುತ್ತದೆ ಎಂದರು.
ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ್ ಅಡಪ ಸಂಕಬೈಲು ಮಾತನಾಡಿ ಹಿರಿಯ ಯಕ್ಷಗಾನ ಕಲಾವಿದರನ್ನು ಗುರುತಿಸಿ ಅವರ ಸಾಧನೆಯನ್ನು ಗುರುತಿಸಿ ದಾಖಲೀಕರಣವನ್ನು ಯಕ್ಷಗಾನ ಅಕಾಡೆಮಿ ಮಾಡುತ್ತಿದೆ. ಯಕ್ಷಗಾನದಲ್ಲಿ ಅದ್ವಿತೀಯ ಸಾಧನೆ ಮಾಡಿದ ಡಾ|ಶ್ರೀಧರ ಭಂಡಾರಿಯವರು ನನಗೆ ಸಂಬಂಧಿಕರು ಕೂಡ ಹೌದು. ಇವರ ಯಕ್ಷಗಾನ ರಂಗದ ಸಾಧನೆಗೆ ಹಲವು ಪ್ರಶಸಿಗಳು ಲಭಿಸಿದೆ ಎಂದು ಹೇಳಿ ಅವರ ಮನೆಯವರು, ಅಭಿಮಾನಿಗಳು ಮಾಡುವ ಈ ಕಾರ್ಯಕ್ರಮ ನಿರಂತರ ನಡೆಯಲಿ ಎಂದು ಹಾರೈಸಿದರು.
sಸಹಾಯಧನ ಹಸ್ತಾಂತರ: ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ನಾಗಸ್ವರ ಹಾಗೂ ಬ್ಯಾಂಡ್ಸೆಟ್ ಪರಿಕರಗಳ ವಾದಕರಾದ, ಅನಾರೋಗ್ಯ ಪೀಡಿತ ಸುರೇಂದ್ರ ದೇವಾಡಿಗರ ಪತ್ನಿ ಮೋಹಿನಿಯವರಿಗೆ ಸಂಸ್ಮರಣಾ ವೇದಿಕೆ ವತಿಯಿಂದ ಉಷಾ ಶ್ರೀಧರ ಭಂಡಾರಿಯವರು ಸಹಾಯಧನ ಹಸ್ತಾಂತರಿಸಿದರು.
ದಿ.ಡಾ|ಶ್ರಿಧರ ಭಂಡಾರಿಯವರ ಪತ್ನಿ ಉಷಾ ಶ್ರೀಧರ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿ.ಡಾ|ಶ್ರೀಧರ ಭಂಡಾರಿಯವರ ಪುತ್ರಿ ಅನಿಲಾ ದೀಪಕ್ ರೈ ಸನ್ಮಾನ ಪತ್ರ ವಾಚಿಸಿದರು. ಮೇಳದ ಸಂಚಾಲಕ ಚಂದ್ರಶೇಖರ ಧರ್ಮಸ್ಥಳ ಅತಿಥಿಗಳನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಿ ವಂದಿಸಿದರು. ದಿ.ಡಾ|ಶ್ರೀಧರ ಭಂಡಾರಿಯವರ ಮಕ್ಕಳು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಉಪಸ್ಥಿತರಿದ್ದರು.
ಸೂರಿಕುಮೇರು ಗೋವಿಂದ ಭಟ್ರವರಿಗೆ ಸಂಸ್ಮರಣಾ ಪ್ರಶಸ್ತಿ
ಕೀರ್ತಿಶೇಷ ಡಾ| ಶ್ರೀಧರ ಭಂಡಾರಿ ಸಂಸ್ಮರಣಾ ವೇದಿಕೆ ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ, ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ಟರವರಿಗೆ ಡಾ|ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ನೀಡಲಾಯಿತು. ಗೋವಿಂದ ಭಟ್ರವರು ಅನಾರೋಗ್ಯದಿಂದ ಕಾರ್ಯಕ್ರಮಕ್ಕೆ ಬರಲು ಅನಾನುಕೂಲವಾಗಿದ್ದರಿಂದ ಧರ್ಮಸ್ಥಳ ಮೇಳದ ಪ್ರಬಂಧಕ ಗಿರೀಶ್ ಹೆಗ್ಡೆಯವರು ಪ್ರಶಸ್ತಿ ಸ್ವೀಕರಿಸಿದ್ದರು.