ಪ್ರತಿಯೊಂದು ತಿಳುವಳಿಕೆ ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ-ವಿವೇಕ್ ಭಂಡಾರಿ
ಪುತ್ತೂರು: ಸುದಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ “ಪಿಯುಸಿ ನಂತರದ ವೃತ್ತಿ ಮತ್ತು ಕೋರ್ಸ್ಗಳು” ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉಪನ್ಯಾಸವನ್ನು ಕಾಲೇಜಿನ ಎಡ್ವರ್ಡ್ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿಟ್ಟೆ ಡೀಮ್ಡ್ ಟು. ಬಿ ವಿಶ್ವವಿದ್ಯಾಲಯದ ಸಹ ನಿರ್ದೇಶಕ (ಔಟ್ರೀಚ್) ವಿವೇಕ್ ಭಂಡಾರಿರವರು ಮಾತನಾಡಿ, ಪಿಯುಸಿ ನಂತರ ವಿದ್ಯಾರ್ಥಿಗಳು ಆರಿಸಬಹುದಾದ ವಿವಿಧ ವೃತ್ತಿ ಮಾರ್ಗಗಳು ಮತ್ತು ಉನ್ನತ ಶಿಕ್ಷಣ ಕೋರ್ಸ್ಗಳ ಬಗ್ಗೆ ವಿಸ್ತೃತ ಮಾಹಿತಿಗಳನ್ನು ನೀಡಿದರು. ಅವರು ವೈದ್ಯಕೀಯ, ಇಂಜಿನಿಯರಿಂಗ್, ವಾಣಿಜ್ಯ, ಕಲೆ, ಕೃಷಿ, ವಿನ್ಯಾಸ, ಹೋಟೆಲ್ ಮ್ಯಾನೇಜ್ಮೆಂಟ್ ಮುಂತಾದ ಹಲವು ಕ್ಷೇತ್ರಗಳ ಕುರಿತು ಉದಾಹರಣೆಗಳೊಂದಿಗೆ ವಿವರಿಸಿದರು. ತಾಂತ್ರಿಕ ಮತ್ತು ವೃತ್ತಿ ತರಬೇತಿ ಕೋರ್ಸ್ಗಳ ಮಹತ್ವವನ್ನು ತಿಳಿಸಿಕೊಟ್ಟು, ಸ್ವಯಂ ಅಧ್ಯಯನ ಮತ್ತು ನಿರಂತರ ಕಲಿಕೆಯ ಅವಶ್ಯಕತೆಯನ್ನು ವಿದ್ಯಾರ್ಥಿಗಳಿಗೆ ನೆನಪಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ನಾವು ವಿಷಯಗಳನ್ನು ಹುಡುಕುವ ರೀತಿಯಂತೆಯೇ, ನಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಾಗೂ ನಿರ್ಧಾರ ತೆಗೆದುಕೊಳ್ಳಲು ಕುತೂಹಲವನ್ನು ಬೆಳೆಸಬೇಕು. ನಮಗೆ ಸಿಗುವ ಪ್ರತಿಯೊಂದು ತಿಳುವಳಿಕೆಯೂ ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ” ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಕೋರ್ಸ್ ಗಳ ಉದ್ಭವದ ಜೊತೆಗೆ ಅವುಗಳಿಂದ ವಿಶಿಷ್ಟವಾದ ಉದ್ಯೋಗಗಳು ಸೃಷ್ಟಿಗೊಳ್ಳಲಿದೆ. ಬೇರೆ ಬೇರೆ ವಿಷಯಗಳಲ್ಲಿ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕವೂ ಶೈಕ್ಷಣಿಕವಾಗಿ ಮುಂದುವರಿಯಬಹುದು. ಯಾವುದೇ ವಿಷಯಕ್ಕೆ ಆದ್ಯತೆ ಇಲ್ಲ ಎಂಬ ವಿಚಾರವೇ ಇಲ್ಲ. ಅದು ನಮ್ಮ ನಮ್ಮ ಮಾನಸಿಕ ಸ್ಥಿತಿಗತಿಗೆ ಅನುಸಾರವಾಗಿ ಇರುತ್ತದೆ. ಪ್ರತಿಯೊಂದಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ NMAMIT ಯ ಜೈವ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಸ್ನೇಹ ನಾಯಕ್ ಅವರು ಉಪಸ್ಥಿತರಿದ್ದು, ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಸುಪ್ರೀತ್ ಕೆ.ಸಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಿಯರ್ ಗೈಡೆನ್ಸ್ ಸೆಲ್ನ ಸಂಯೋಜಕಿ ರಮ್ಯಶ್ರೀ ಸಿ. ಕಾರ್ಯಕ್ರಮವನ್ನು ಸಂಯೋಜಿಸಿ, ವಿದ್ಯಾರ್ಥಿನಿ ಸ್ವಸ್ತಿ ಶೆಟ್ಟಿ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿಕೊಟ್ಟರು. ಇಂಗ್ಲಿಷ್ ಉಪನ್ಯಾಸಕಿ ಮೆಲಿಷಾ ಪ್ರಿಯಾ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ನವ್ಯಾ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದು, ಮಾರ್ಗದರ್ಶನದಿಂದ ಪ್ರಯೋಜನ ಪಡೆದುಕೊಂಡರು.