ನೆಲ್ಯಾಡಿ: ವಿಶ್ವ ವಿದ್ಯಾಲಯ ಕಾಲೇಜು ನೆಲ್ಯಾಡಿ, ಗ್ರಾಮ ಪಂಚಾಯತ್ ನೆಲ್ಯಾಡಿ, ವರ್ತಕರ ಸಂಘ ನೆಲ್ಯಾಡಿ ಹಾಗೂ ಜೆಸಿಐ ನೆಲ್ಯಾಡಿ ಇದರ ನೆಲ್ಯಾಡಿ ಗಾಂಧಿಮೈದಾನದಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಹೋರಾಟದ ಇತಿಹಾಸ ಕಥನವನ್ನು ಮೆಲುಕು ಹಾಕುತ್ತಾ, ದೇಶದ ಅಭಿವೃದ್ಧಿಯಲ್ಲಿ ತಮ್ಮ ಜವಾಬ್ದಾರಿಗಳ ಕುರಿತು ಹೇಳಿದರು.ವಿವಿ ಕಾಲೇಜು ಉಪನ್ಯಾಸಕ ಡಾ.ಸೀತಾರಾಮ ಪಿ, ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ದುರ್ಗಾಶ್ರೀರವರು ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಮಾಹಿತಿಯೊಂದಿಗೆ ದೇಶದ ಐಕ್ಯತೆ ಮತ್ತು ಅಭಿವೃದ್ಧಿಯ ನೆಲೆಯಲ್ಲಿ ಪ್ರಸ್ತುತ ಜವಾಬ್ದಾರಿಗಳ ಕುರಿತು ಮಾತನಾಡಿ ಶುಭಾಶಯ ಸಲ್ಲಿಸಿದರು.
ವಿವಿ ಕಾಲೇಜು ಅನುಷ್ಠಾನ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳೊಂದಿಗೆ ಧ್ವಜಗೀತೆ, ವಂದೇ ಮಾತರಂ, ಜನ ಗಣ ಮನ ಹಾಡಲಾಯಿತು. ನೆಲ್ಯಾಡಿ ಗ್ರಾ.ಪಂ.ಕಾರ್ಯದರ್ಶಿ ಅಂಗು ವಂದಿಸಿದರು. ಗ್ರಾಮ ಪಂಚಾಯತ್ ವತಿಯಿಂದ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರು, ಜೆಸಿಐ ಸದಸ್ಯರು, ವಿವಿ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.