ಪುತ್ತೂರು: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ರಸ್ತೆಯ ಶ್ರೀ ಗುರುಕೃಪಾದಲ್ಲಿ ಆಡಳಿತ ಕಭೇರಿ ಹೊಂದಿದ್ದು, ಪುತ್ತೂರಿನಲ್ಲಿ ಬೊಳ್ವಾರು ಶ್ರೀ ಕೃಷ್ಣಾ ಆರ್ಕೇಡ್ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದೀಗ ಬ್ಯಾಂಕ್ ನೂರನೇ ವರ್ಷದ ಇತಿಹಾಸದ ಮೈಲಿಗಲ್ಲನ್ನು ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ಗ್ರಾಹಕರ ಹೆಚ್ಚಿನ ಅನುಕೂಲತೆಗೋಸ್ಕರ ಎಪಿಎಂಸಿ ಆದರ್ಶ ಆಸ್ಪತ್ರೆ ಎದುರಿನ ತ್ರಿನೇತ್ರ ಕಾಂಪ್ಲೆಕ್ಸ್ನ ಒಂದನೇ ಮಹಡಿಗೆ ಸ್ಥಳಾಂತರಗೊಂಡು ಆ.17 ರಂದು ಶುಭಾರಂಭಗೊಂಡಿತು.

125 ವರ್ಷಗಳಲ್ಲಿ ಬ್ಯಾಂಕ್ 125 ಶಾಖೆಗಳು ಹೊಂದಲಿ-ಅಶೋಕ್ ರೈ:
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈರವರು ಬ್ಯಾಂಕ್ನ ಭದ್ರತಾ ಕೊಠಡಿಯ ಲಾಕರ್ ಉದ್ಘಾಟಿಸಿ ಮಾತನಾಡಿ, ಯಾವುದೇ ಸಂಸ್ಥೆ ಮೇಲ್ದರ್ಜೆಗೇರಿದಾಗ ನಾವೂ ಕೂಡ ಅದಕ್ಕೆ ಅಪ್ಡೇಟ್ ಆಗಬೇಕು. ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ ನೂರು ವರ್ಷದ ನಡೆಯನ್ನು ಕಂಡುಕೊಳ್ಳುತ್ತಿರುವುದು ಶ್ಲಾಘನೀಯ. ಪುತ್ತೂರಿಗೆ ಇಂಡಸ್ಟ್ರಿಗಳು, ಟೂರಿಸಂ ಕೇಂದ್ರ, ಸರಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಇತರ ಕಡೆಯಿಂದ ಜನರು ಪುತ್ತೂರಿನತ್ತ ಆಕರ್ಷಿತರಾಗುತ್ತಿರುವುದು ವಿಶೇಷ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕನ್ನಡ, ತುಳು ಭಾಷೆಯಲ್ಲಿ ಸಂವಹನ ಮಾಡದೆ ಬರೇ ಸಿಗ್ನಲ್ನಲ್ಲಿ ಗ್ರಾಹಕರ ಹತ್ತಿರ ವ್ಯವಹಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕೋ-ಆಪರೇಟಿವ್ ಬ್ಯಾಂಕ್ಗಳು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಬಲ್ಲವು. ಮುಂದಿನ 125 ವರ್ಷಗಳಲ್ಲಿ ಈ ಬ್ಯಾಂಕ್ 125 ಶಾಖೆಗಳು ಹೊಂದಲಿ ಎಂದರು.
ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಅರ್ಹತೆಯ ಬ್ಯಾಂಕ್-ಪದ್ಮರಾಜ್ ಆರ್.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿರವರು ರಿಬ್ಬನ್ ಕತ್ತರಿಸಿ ಮಾತನಾಡಿ, ನೂರನೇ ಇತಿಹಾಸ ಕಾಣುತ್ತಿರುವ ಈ ಬ್ಯಾಂಕ್ ಸಾಧ್ಯವಾದಷ್ಟು ಅಭಿವೃದ್ಧಿ ಕಂಡಿದೆ. ಜನರು ಈ ಬ್ಯಾಂಕ್ ಬಗ್ಗೆ ಬಹಳಷ್ಟು ನಿರೀಕ್ಷೆಯನ್ನು ಹೊಂದಿದ್ದಾರೆ ಮಾತ್ರವಲ್ಲ ಆ ನಿರೀಕ್ಷೆಗೆ ತಕ್ಕಂತೆ ಅರ್ಹತೆಯನ್ನು ಕೂಡ ಹೊಂದಿದೆ. ಯಾವುದೇ ಬ್ಯಾಂಕ್ ಉನ್ನತಿ ಹೊಂದಬೇಕಾದರೆ ಅಲ್ಲಿ ಪಾಸಿಟಿವ್ ಎನರ್ಜಿ ಜೊತೆಗೆ ವ್ಯವಹಾರಕ್ಕೆ ಪೂರಕವಾದ ವಾತಾವರಣ, ಪರಸ್ಪರ ವಿಶ್ವಾಸ ಮುಖ್ಯವಾಗುತ್ತದೆ. ಈಗಾಗಲೇ ೧೭ ಶಾಖೆಗಳನ್ನು ಹೊಂದಿರುವ ಈ ಬ್ಯಾಂಕ್ ಗ್ರಾಹಕರ ಪ್ರೋತ್ಸಾಹದಂತೆ ವ್ಯವಹಾರ ದ್ವಿಗುಣಗೊಳ್ಳಲಿ ಎಂದರು.
ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮಾನವಾಗಿ ಹೊರ ಹೊಮ್ಮಿದೆ-ಸಂಜೀವ ಪೂಜಾರಿ:
ಪರ್ಪುಂಜ ರಾಮಜಾಲು ಗರಡಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನವನ್ನು ಮಾಜಿ ಮಂತ್ರಿ ಜನಾರ್ದನ ಪೂಜಾರಿರವರ ನೇತೃತ್ವದಲ್ಲಿ ಮುಂದುವರೆಯುತ್ತಿದ್ದು ಇದೀಗ ಅದೇ ಹೆಸರಿನಲ್ಲಿ ಬ್ಯಾಂಕ್ ಕೂಡ ಸ್ಥಾಪನೆಗೊಂಡು ನೂರು ವರ್ಷವನ್ನು ಕಾಣುತ್ತಿರುವುದು ಖುಶಿಯ ಸಂಗತಿ. ಇತ್ತೀಚಿನ ದಿನಗಳಲ್ಲಿ ಸಹಕಾರಿ ಬ್ಯಾಂಕುಗಳು ಅಲ್ಲಲ್ಲಿ ತಲೆ ಎತ್ತುತ್ತಿವೆ. ಬೆಳ್ತಂಗಡಿಯ ಗುರುದೇವ ಬ್ಯಾಂಕ್ ಕುಂಬ್ರದಲ್ಲಿನ ಅಕ್ಷಯ ಆರ್ಕೇಡ್ ನಲ್ಲಿ ಆರಂಭಗೊಂಡಿರುವುದು ಇದೀಗ ಗೋಕರ್ಣನಾಥ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮಾನವಾಗಿ ಹೊರ ಹೊಮ್ಮಿದೆ ಎಂದರು.
ಆರ್ಥಿಕವಾಗಿ ಬೆಳೆಯುವಲ್ಲಿ ಬ್ಯಾಂಕ್ಗಳ ಸ್ಥಾಪನೆ ಅತ್ಯಗತ್ಯ-ರವಿ ಪೂಜಾರಿ:
ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ನಗದು ಪಾವತಿಕೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿನಲ್ಲಿ ಈ ಬ್ಯಾಂಕ್ ಮೇಲ್ದರ್ಜೆಗೇರಿದ್ದು ಪುತ್ತೂರಿನ ಮುಕುಟಕ್ಕೆ ಮತ್ತೊಂದು ಕಿರೀಟವೆನಿಸಿದೆ. ದಕ್ಷಿಣ ಕನ್ನಡದಲ್ಲಿ ಹಲವಾರು ರಾಷ್ಟ್ರೀಕೃತ ಬ್ಯಾಂಕ್ಗಳು ಹುಟ್ಟಿಕೊಂಡಿರುವುದು ಹೆಮ್ಮೆಯಾಗಿದ್ದು ಈ ಗೋಕರ್ಣನಾಥ ಬ್ಯಾಂಕ್ ಕೂಡ ರಾಷ್ಟ್ರೀಕೃತ ಬ್ಯಾಂಕ್ನಂತೆ ಕಾರ್ಯನಿರ್ವಹಿಸುತ್ತಿದೆ. ನಾವು ಆರ್ಥಿಕವಾಗಿ ಬೆಳೆಯಬೇಕಾದರೆ ಬ್ಯಾಂಕ್ಗಳ ಸ್ಥಾಪನೆ ಅತ್ಯಗತ್ಯವಾಗಿದೆ ಎಂದರು.
ಬ್ಯಾಂಕ್ ರಾಜ್ಯವ್ಯಾಪಿ ಶಾಖೆಗಳು ಹೊಂದಲಿ-ಸತೀಶ್ ಕುಮಾರ್ ಕೆಡೆಂಜಿ:
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಗಣಕಯಂತ್ರವನ್ನು ಉದ್ಘಾಟಿಸಿ ಮಾತನಾಡಿ, ಹಿಂದೆ ಬೊಳ್ವಾರಿನಲ್ಲಿ ವ್ಯವಹರಿಸುತ್ತಿದ್ದ ಈ ಬ್ಯಾಂಕಿಗೆ ಪಾರ್ಕಿಂಗ್ ವ್ಯವಸ್ಥೆ ಇರಲಿಲ್ಲ. ಇಂದಿನ ಪೈಪೋಟಿಯ ಯುಗದಲ್ಲಿ ಗ್ರಾಹಕರಿಗೆ ಆಕರ್ಷಣೀಯ ಸೇವೆ ನೀಡಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಈ ಗೋಕರ್ಣನಾಥ ಬ್ಯಾಂಕ್ನಲ್ಲಿ ಠೇವಣಿ ಹಾಗೂ ಬಡ್ಡಿಸಾಲ ತ್ವರಿತಗತಿಯಲ್ಲಿ ಸಾಗುತ್ತಿದ್ದು ಈ ಬ್ಯಾಂಕ್ ರಾಜ್ಯವ್ಯಾಪಿ ಶಾಖೆಗಳು ಹೊಂದಲಿ ಎಂದರು.
ಬ್ಯಾಂಕ್ ಪುತ್ತೂರಿಗೆ ಮುಕುಟಪ್ರಾಯವಾಗಿ ಮೂಡಿ ಬರಲಿ-ಡಾ.ರಾಜಾರಾಮ್ ಕೆ.ಬಿ:
ಉಪ್ಪಿನಂಗಡಿ ಗಿರಿಜಾ ದಂತ ಚಿಕಿತ್ಸಾಲಯದ ವೈದ್ಯ ಡಾ.ರಾಜಾರಾಮ್ ಕೆ.ಬಿರವರು ಸೇಫ್ ಲಾಕರ್ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಬೆಳವಣಿಗೆಯ ಹಿಂದೆ ಅನ್ನ, ಅಕ್ಷರ, ಆಸರೆ, ಆರ್ಥಿಕ ಸ್ವಾವಲಂಬನೆ ಅಗತ್ಯವಾಗಿ ಬೇಕು. ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ಹೊಂದಿದಲ್ಲಿ ತನ್ನ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿ ಕೂಡ ಆಗುವುದು. ಸಮಾಜವು ಆರ್ಥಿಕವಾಗಿ ಸದೃಢವಾಗಬೇಕಾದರೆ ಬ್ಯಾಂಕ್ಗಳ ಪಾತ್ರ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಈ ಗೋಕರ್ಣನಾಥ ಬ್ಯಾಂಕ್ ಪುತ್ತೂರಿಗೆ ಮುಕುಟಪ್ರಾಯವಾಗಿ ಮೂಡಿ ಬರಲಿ ಎಂದರು.
ವ್ಯವಹಾರಕ್ಕೆ ಪೂರಕವಾದ ಸ್ಥಳದಲ್ಲಿ ಸ್ಥಳಾಂತರ-ವಿಜಯಕುಮಾರ್ ಸೊರಕೆ:
ದ.ಕ ಜಿಲ್ಲಾ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ ಲಿ.ನ ಮಾಜಿ ನಿರ್ದೇಶಕ ವಿಜಯಕುಮಾರ್ ಸೊರಕೆ ಮಾತನಾಡಿ, ನಾನೂ ಕೂಡ ಹದಿನೈದು ವರ್ಷ ಈ ಗೋಕರ್ಣನಾಥ ಬ್ಯಾಂಕಿನಲ್ಲಿ ನಿರ್ದೇಶಕನಾಗಿ ದುಡಿದಿದ್ದೆ. ಪುತ್ತೂರು ಬೆಳೆಯುತ್ತಿರುವ ನಗರವಾಗಿದ್ದು ವ್ಯವಹಾರಕ್ಕೆ ಪೂರಕವಾಗಿ ಪರಿಣಮಿಸಿರುವ ಎಪಿಎಂಸಿ ರಸ್ತೆಯಲ್ಲಿ ಈ ಗೋಕರ್ಣನಾಥ ಬ್ಯಾಂಕ್ ಸ್ಥಳಾಂತರಗೊಂಡಿರುವುದು ವ್ಯವಹಾರದ ಹಿನ್ನೆಲೆಯಲ್ಲಿ ಉತ್ತಮ ಹೆಜ್ಜೆಯಾಗಿದೆ. ರಾಷ್ಟ್ರೀಕೃತ ಬ್ಯಾಂಕಿಗೆ ಸರಿಸಮಾನವಾಗಿ ಈ ಗೋಕರ್ಣನಾಥ ಬ್ಯಾಂಕ್ ಕಾರ್ಯನಿರ್ವಹಿಸಿದ್ದು ಗ್ರಾಹಕರ ಪ್ರಶಂಸೆಗೆ ಪಾತ್ರವಾಗಿದೆ. ರಾಷ್ಟ್ರೀಕೃತ ಬ್ಯಾಂಕಿನ ಸಿಬ್ಬಂದಿಗಳಂತೆ ನಮ್ಮ ಸಿಬ್ಬಂದಿಗಳು ಹೆಚ್ಚಿನ ಸಮಯದ ಕಾರ್ಯಭಾರವನ್ನು ನಿರ್ವಹಿಸುವತ್ತ ಕೈಜೋಡಿಸಿ ಎಂದರು.
ಗೌರವ:
ಅದೇ ರೀತಿ ಬ್ಯಾಂಕ್ ಬೆಳವಣಿಗೆಯಲ್ಲಿ ಸಹಕರಿಸಿದ ಗ್ರಾಹಕರಾದ ಅನಿತಾ ಗೊನ್ಸಾಲ್ವಿಸ್, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವರದರಾಜ್ ಎಂ, ಆಟೋ ಚಾಲಕ ಎಂ.ಶ್ರೀಧರ್, ಪ್ರವೀಣ್ ಜೈನ್, ಶಿವಾನಂದ ನಾಯ್ಕ್, ಜಲೀಲ್(ಅಮರ್) ಪಡೀಲ್, ಶೀನಪ್ಪ ಪೂಜಾರಿ ಬೇರಿಕೆ, ಎಸ್.ಕೃಷ್ಣಪ್ಪ ಶೇವಿರೆ, ಜಯರಾಮ ಪೂಜಾರಿ ಕರ್ಮಲ, ವಾಸು ಪೂಜಾರಿ ದರ್ಬೆ, ಪುಷ್ಪಲತಾ ಶಾಂತಿಗೋಡು, ಎಂ.ಪುರುಷೋತ್ತಮ ಅನಂತಿಮಾರು, ನೂತನ ಪಿಗ್ಮಿ ಸಂಗ್ರಾಹಕ ಯಶೋಧರ್ ಜೈನ್ ಸಹಿತ ಹಲವರನ್ನು ಗೌರವಿಸಲಾಯಿತು.
ಕು|ನವನಿ ಪ್ರಾರ್ಥಿಸಿದರು. ಬ್ಯಾಂಕ್ ಆಫ್ ಬರೋಡಾದ ಚೀಫ್ ಮ್ಯಾನೇಜರ್ ಅನುಭವ್ ಶ್ರೀವಾಸ್ತವ್ ಹಾಗೂ ಅವರ ಪತ್ನಿ ಬ್ಯಾಂಕ್ ಆಫ್ ಬರೋಡದ ಸೀನಿಯರ್ ಮ್ಯಾನೇಜರ್ ಮಮತಾ, ಅಕ್ಷಯ ಕಾಲೇಜ್ ಚೇರ್ಮನ್ ಜಯಂತ್ ನಡುಬೈಲು, ಬ್ಯಾಂಕ್ ಉಪಾಧ್ಯಕ್ಷ ಜಯರಾಮ ಪೂಜಾರಿ, ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ವಿಜಯಾ ಎಂ.ಕೋಟ್ಯಾನ್ (ಪ್ರಭಾರ), ಶಾಖಾಧಿಕಾರಿ ಆನಂದ ಪಿ(ಪ್ರಭಾರ), ನಿರ್ದೇಶಕರುಗಳಾದ ಯೋಗೀಶ್ ಕೋಟ್ಯಾನ್, ರಾಜೇಶ್ ಕುಮಾರ್ ಜೆ.ಸುವರ್ಣ, ಕೆ.ರಮೇಶ್ ಬಂಗೇರ, ಕೇಶವ ಪೂಜಾರಿ ಬೆದ್ರಾಳ, ಜಗದೀಶ್ ಎಸ್, ಹರೀಶ್ ಪೂಜಾರಿ ಕೆ, ನಾಗರಾಜ, ಜಯರಾಮ್ ಕಾರಂದೂರು, ಶ್ರವಣ್ ಕುಮಾರ್, ವರದರಾಜ್ ಎ, ಜಯಾನಂದ ಎಂ., ಉಪಸ್ಥಿತರಿದ್ದರು. ಸಿಬ್ಬಂದಿ ಯತೀಶ್ ಎಸ್.ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕೋರ್ ಬ್ಯಾಂಕಿಂಗ್ ವ್ಯವಸ್ಥೆ..
ಅವಿಭಜಿತ ದ.ಕ ಜಿಲ್ಲೆಯ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ 1925ರಲ್ಲಿ ಆರಂಭಗೊಂಡು ಭಾರತೀಯ ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣೆಗೆ ಒಳಪಟ್ಟು ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ ಇದೀಗ ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದೆ. ಬ್ಯಾಂಕ್ 17 ಶಾಖೆಗಳನ್ನು ಹೊಂದಿದ್ದು ಎಲ್ಲಾ ಶಾಖೆಗಳು ಸಂಪೂರ್ಣ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾರ್ಯಾಚರಿಸುತ್ತಿದೆ. ಸಿ.ಟಿ.ಎಸ್, ಕ್ಲಿಯರಿಂಗ್ ವ್ಯವಸ್ಥೆ, ಅಂತರ್ ಶಾಖಾ ನಗದು ವರ್ಗಾವಣೆ, ನೆಫ್ಟ್/ಆರ್.ಟಿ.ಜಿ.ಎಸ್/ಎಸ್.ಎಂ.ಎಸ್ ಸೌಲಭ್ಯ, ಸೇಫ್ ಡೆಪಾಸಿಟ್ ಲಾಕರ್, ಮೊಬೈಲ್ ಬ್ಯಾಂಕಿಂಗ್, ರೂಪೇ ಡೆಬಿಟ್ ಕಾರ್ಡ್, ಪಿಒಎಸ್/ಇ.ಕಾಮ್/ಐಎಂಪಿಎಸ್/ಯುಪಿಐ ಇತ್ಯಾದಿ ಸೌಲಭ್ಯ ನೀಡುತ್ತಿದೆ. ಬ್ಯಾಂಕ್ ಈಗಾಗಲೇ ರೂ.೩೦ಕೋಟಿ ವ್ಯವಹಾರ ಹೊಂದಿದ್ದು ಹಲವಾರು ವರ್ಷಗಳಿಂದ ನಿರಂತರ ಲಾಭ ಗಳಿಸುತ್ತಾ ಬಂದಿದ್ದು, ಲಾಭಾಂಶವನ್ನು ಪಾವತಿಸುತ್ತಿದೆ.
-ಚಂದ್ರಶೇಖರ ಕುಮಾರ್, ಅಧ್ಯಕ್ಷರು, ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್
ಸನ್ಮಾನ..
ಬೊಳ್ವಾರಿನಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ ಇದೀಗ ಎಪಿಎಂಸಿ ರಸ್ತೆಯ ತ್ರಿನೇತ್ರ ಕಾಂಪ್ಲೆಕ್ಸ್ಗೆ ಸುಸಜ್ಜಿತ ವಾತಾವರಣದೊಂದಿಗೆ ಸ್ಥಳಾಂತರಗೊಳ್ಳುವಲ್ಲಿ ಸಹಕರಿಸಿದ ಬ್ಯಾಂಕ್ನ ಸ್ಥಳೀಯ ನಿರ್ದೇಶಕ ಕೇಶವ ಪೂಜಾರಿ ಬೆದ್ರಾಳರವರನ್ನು ಬ್ಯಾಂಕಿನ ಆಡಳಿತ ಮಂಡಳಿ ಗುರುತಿಸಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ..
*ಗೃಹ ಸಾಲಗಳು
ಗೃಹ ನಿರ್ಮಾಣ, ಫ್ಲ್ಯಾಟ್ ಖರೀದಿ, ಗೃಹ ರಿಪೇರಿ/ನವೀಕರಣ ಮತ್ತು ವಿಸ್ತರಣೆ ಸಾಲಗಳು
*ವಾಹನ ಖರೀದಿ ಸಾಲ
*ಸ್ಥಿರಾಸ್ತಿ ಆಧಾರದ ಮೇಲಿನ ವ್ಯಾಪ/ಕ್ಯಾಶ್ ಕ್ರೆಡಿಟ್ ಸಾಲಗಳು
*ಪಿಗ್ಮಿ ಖಾತೆ ಹೊಂದಿರುವ ಸಣ್ಣ ವ್ಯಾಪಾರಸ್ಥರಿಗೆ ಜಮೀನು ಸಾಲ
*ಜಮೀನು ಸಾಲ:ವೇತನ ಆಧಾರಿತ/ವೃತ್ತಿಪರರಿಗೆ/ಉದ್ದಿಮೆದಾರರಿಗೆ
*ಜೀವ ವಿಮಾ ಪಾಲಿಸಿ/ರಾಷ್ಟ್ರೀಯ ಉಳಿತಾಯ ಪತ್ರ ಆಧಾರಿತ ಸಾಲ ಹಾಗೂ ಇನ್ನಿತರ