ಪುತ್ತೂರು: ದೇಶಭಕ್ತಿ ಗೀತೆ ಹಾಡುಗಾರಿಕೆಯಲ್ಲಿ ಗಮನ ಸೆಳೆದ ಕಬಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಅಲೀಮತ್ ಶೈಮಾ ಗೆ ಬಗ್ಗುಮೂಲೆ ಲೀಗಲ್ ಅಸೋಸಿಯೇಟ್ಸ್ ಹಾಗೂ ಬಗ್ಗುಮೂಲೆ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಬಕದ ವಿದ್ಯಾರ್ಥಿನಿಯ ನಿವಾಸದಲ್ಲಿ ಆ.16ರಂದು ಸನ್ಮಾನಿಸಲಾಯಿತು.

ಕಬಕ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅಲೀಮತ್ ಶೈಮಾ ದೇಶಭಕ್ತಿ ಗೀತೆ ಹಾಡುವ ಮೂಲಕ ಗಮನ ಸೆಳೆದಿದ್ದರು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು, ಇದಕ್ಕೆ ವ್ಯಾಪಕ ಪ್ರಶಂಸೆ ಹಾಗೂ ಮೆಚ್ಚುಗೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆಕೆಗೆ ಈ ಸನ್ಮಾನ ನಡೆಯಿತು.
ಅಲ್ ಅಮೀನ್ ಚಾರಿಟಿ ಗ್ರೂಪ್ ನ ಮೆನೇಜಿಂಗ್ ಡೈರೆಕ್ಟರ್ ಸಿದ್ದೀಕ್ ಸೂರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಅಲೀಮತ್ ಶೈಮಾರನ್ನು ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು ಸನ್ಮಾನ, ಪ್ರಶಸ್ತಿ ಗಿಟ್ಟಿಸಿಕೊಳ್ಳಲು ನಾನಾ ಕಸರತ್ತು ನಡೆಸುವ ಈ ಕಾಲಘಟ್ಟದಲ್ಲಿ ಎಳೆಯ ಪ್ರತಿಭೆಯನ್ನು ಗುರುತಿಸಿ, ಅವರ ಮನೆಗೆ ತೆರಳಿ ಅವರನ್ನು ಗೌರವಿಸಿ, ನನ್ಮಾನಿಸುವ ಬಗ್ಗುಮೂಲೆ ಲೀಗಲ್ ಅಸೋಸಿಯೇಟ್ಸ್ ಹಾಗೂ ಬಗ್ಗುಮೂಲೆ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಡಾ. ಬದ್ರುದ್ದೀನ್, ಮಧುರಾ ಇಬ್ರಾಹಿಂ ಬಗ್ಗುಮೂಲೆ, ಖಾದರ್ ಕನ್ಝ, ಸಾದಿಕ್ ಅಕ್ಕರೆ, ಸಿದ್ದೀಕ್ ಮಿತ್ತೂರು, ಕೆಜಿಎನ್ ಅಶ್ರಫ್ ಅಳಕೆಮಜಲು, ಖಾದರ್ ಭಾರತ್, ಅಶ್ರಫ್ ಭಾರತ್, ಶರೀಫ್ ಸ್ಟೈಲ್, ಶಬ್ಬೀರ್ ಅಳಕೆಮಜಲು, ಹಂಝತ್ ಸಾಲ್ಮರ, ಹಾರಿಸ್ ಕೋನಿಮಾರ್, ಶೈಮಾಳ ತಂದೆ ಝುಬೈರ್ ಭಾರತ್, ತಾಯಿ ಸಲ್ಮಾ ಝುಬೈರ್ ಮೊದಲಾದವರು ಉಪಸ್ಥಿತರಿದ್ದರು.
ಬಗ್ಗುಮೂಲೆ ಲೀಗಲ್ ಅಸೋಸಿಯೇಟ್ಸ್ ಹಾಗೂ ಬಗ್ಗುಮೂಲೆ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಮೆನೇಜಿಂಗ್ ಡೈರೆಕ್ಟರ್ ಹನೀಫ್ ಬಗ್ಗುಮೂಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.