ಉಪ್ಪಿನಂಗಡಿ: ದೇವಾಲಯದ ಅಭಿವೃದ್ಧಿಗೆ ಭಕ್ತರ ಸಭೆ

0

ಎಲ್ಲ ಗ್ರಾಮಗಳಲ್ಲಿಯೂ ಭಕ್ತರ ಸಮಿತಿ ರಚನೆ-ರಾಧಾಕೃಷ್ಣ ನಾೖಕ್‌

ಉಪ್ಪಿನಂಗಡಿ: ಶಾಸಕ ಅಶೋಕ್ ಕುಮಾರ್ ರೈ ಮತ್ತು ಸಂಸದ ಕ್ಯಾ. ಬ್ರಿಜೇಶ್ ಚೌಟ ರವರ ಪ್ರಯತ್ನದ ಫಲವಾಗಿ ದಕ್ಷಿಣಕಾಶಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಅನುದಾನವನ್ನು ಒದಗಿಸುವ ಪ್ರಯತ್ನ ನಡೆಯುತ್ತಿದ್ದು, ಈ ಸಂಧರ್ಭದಲ್ಲಿ ಸೀಮೆ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯೂ ಭಕ್ತರನ್ನು ಒಳಗೊಂಡ ಗ್ರಾಮ ಸಮಿತಿಯನ್ನು ರಚಿಸಲಾಗುವುದೆಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾೖಕ್‌ ತಿಳಿಸಿದರು.


ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಉಪ್ಪಿನಂಗಡಿ ಗ್ರಾಮದ ಭಕ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ದೇವಾಲಯಕ್ಕೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಖರೀದಿಸಲಾಗಿದ್ದು, ಶಾಸಕರು ಈ ಕ್ಷೇತ್ರವನ್ನು ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಪರಿವರ್ತಿಸಲು ಈಗಾಗಲೇ ಕಾರ್ಯ ಯೋಜನೆಯನ್ನು ರೂಪಿಸಿದ್ದಾರೆ. ಕಳೆದ ಬಜೆಟ್‌ನಲ್ಲಿ ಈ ಯೋಜನೆಗೆ 350 ಕೋಟಿ ರೂ. ಮೊತ್ತವನ್ನು ಮೀಸಲಿರಿಸಲಾಗಿದೆ. ಯೋಜನೆಯ ಬಗ್ಗೆ ಸಂಬಂಧಿತ ಇಲಾಖಾಧಿಕಾರಿಗಳ ಅಂತಿಮ ವರದಿ ಸಲ್ಲಿಕೆಯಾದ ಬಳಿಕ ಹಣಕಾಸು ಇಲಾಖೆಯಿಂದ ಆರ್ಥಿಕ ಮಂಜೂರಾತಿ ಲಭಿಸಲಿದೆ. ಶಾಸಕರ ಆಶಯದಂತೆ ಎಲ್ಲವೂ ನಡೆದರೆ ಮುಂಬರುವ ಬೇಸಿಗೆಯಲ್ಲಿ ಕಾಮಗಾರಿಗೆ ಚಾಲನೆ ದೊರಕುವ ವಿಶ್ವಾಸವೂ ಇದೆ . ಈ ಮಧ್ಯೆ ಸಂಸದರು ಕೇಂದ್ರ ಸರಕಾರದಿಂದ ಪ್ರಸಾದಮ್ ಯೋಜನೆಯಡಿ 50 ಕೋಟಿ ಹಣವನ್ನು ಮಂಜೂರುಗೊಳಿಸುವ ಯತ್ನದಲ್ಲಿದ್ದಾರೆ. ಈ ಕಾರಣಕ್ಕೆ ದೇವಾಲಯದ ಪರಿಸರದಲ್ಲಿ ಅಮೂಲಾಗ್ರ ಬದಲಾವಣೆ ನಡೆಯಲಿದ್ದು, ಈ ಐತಿಹಾಸಿಕ ಕ್ಷಣದಲ್ಲಿ ಸೀಮೆಯ ಎಲ್ಲಾ ಗ್ರಾಮದ ಗ್ರಾಮಸ್ಥರು ಒಗ್ಗೂಡಿ ಪಾಲ್ಗೊಳ್ಳಬೇಕು. ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿಯ ಭಕ್ತರು ನಾವೆಲ್ಲಾ ಎಂಬ ಭಾವದಡಿ ಭೇದ- ಭಾವ ತೊರೆದು ದೇವಾಲಯದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕೆಂದರು.


ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅರ್ತಿಲ ಕೃಷ್ಣ ರಾವ್, ದೇವಿದಾಸ್ ರೈ ಅಡೆಕ್ಕಲ್, ವೆಂಕಪ್ಪ ಪೂಜಾರಿ ಭಕ್ತಾಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಗ್ರಾಮದ ಮತ್ತು ಮೂರು ವಲಯಗಳಲ್ಲಿ ಸಮಿತಿಯನ್ನು ರಚಿಸುವ ಸಂಬಂಧ ಚರ್ಚೆ ನಡೆಸಲಾಯಿತು.


ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಂತ ಪೊರೋಳಿ, ಉಷಾ ಮುಳಿಯ, ಹರಿರಾಮಚಂದ್ರ, ಪ್ರಮುಖರಾದ ವಿದ್ಯಾಲಕ್ಷ್ಮಿ ಪ್ರಭು, ಸುಜೀರ್ ಗಣಪತಿ ನಾಯಕ್, ರಾಮಚಂದ್ರ ಮಣಿಯಾಣಿ, ಸುಜಾತ ಕೃಷ್ಣ ಆಚಾರ್ಯ, ಸುರೇಶ್ ಅತ್ರೆಮಜಲು, ರವಿ ಕುಂಟಿನಿ, ಅಶೋಕ್ ಕುಮಾರ್ ರೈ ಅರ್ಪಿನಿಗುತ್ತು, ಶರತ್ ಕೋಟೆ, ಯು.ರಾಮ, ಚಂದ್ರಶೇಖರ ಮಡಿವಾಳ, ಕಿಶೋರ್ ಜೋಗಿ, ಗಂಗಾಧರ ಟೈಲರ್, ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here