ಜನರ ಆಶೋತ್ತರಗಳನ್ನು ಈಡೇರಿಸುತ್ತಿರುವ ಗ್ರಾಮ ಒನ್ ಕೇಂದ್ರಗಳು ಆರ್ಥಿಕ ಸಂಕಷ್ಟದಲ್ಲಿ ಸರಕಾರದಿಂದ ರೂಪಿಸಲ್ಪಟ್ಟ ಹೆಚ್ಚಿನ ಎಲ್ಲಾ ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಜನರಿಗೆ ತಲುಪಿಸುತ್ತಿರುವ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಹಿಂದಿನ ಸರಕಾರದ ಆಡಳಿತದ ಅವಧಿಯಲ್ಲಿ ರೂಪುಗೊಂಡ ಗ್ರಾಮ ಒನ್ ನಾಗರಿಕ ಸೇವಾಕೇಂದ್ರಗಳು ಜನರ ಆಶೋತ್ತರಗಳನ್ನು ಈಡೇರಿಸುವತ್ತ ಸ್ಪಷ್ಟ ಹೆಜ್ಜೆ ಇಟ್ಟಿದೆ. ಆದರೆ ಗ್ರಾಮ ಒನ್ ಸ್ಥಾಪನೆಯಾದ ನಂತರ ಗ್ರಾಮ ಮಟ್ಟದಲ್ಲಿಯೇ ಸೇವೆಗಳು ಲಭ್ಯವಾಗುತ್ತಿರುವುದರಿಂದ ಜನರಿಗೆ ತುಂಬಾ ಪ್ರಯೋಜನವಾಗಿದೆ. ಮೊದಲು ಜನರು ಜಾತಿ ಮತ್ತು ಆದಾಯ, ಆರ್ ಟಿ ಸಿ, ಸಣ್ಣ ರೈತ ಪ್ರಮಾಣ ಪತ್ರ ಇಂತಹ ಕೆಲಸಗಳಿಗೂ ದೂರವಿರುವ ನಾಡಕಛೇರಿಗೆ ಎರಡು ಮೂರು ಸಾರಿ ಅಲೆದಾಟ ಮಾಡಬೇಕಾಗಿತ್ತು. ಆದರೆ ಈಗ ಗ್ರಾಮ ಒನ್ ಕೇಂದ್ರದಲ್ಲಿಯೇ ಈ ಎಲ್ಲಾ ಸೇವೆಗಳು ಸಿಗುತ್ತಿರುವುದರಿಂದ ಜನರ ಅಲೆದಾಟ ತಪ್ಪಿಸಿದಂತಾಗಿದೆ.
ಪ್ರಸಕ್ತ ಸರಕಾರದ ಜನಪ್ರಿಯ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಯುವ ನಿಧಿಗಳಿಗೆ ಗ್ರಾಮ ಒನ್ ನಾಗರಿಕ ಸೇವಾಕೇಂದ್ರದಲ್ಲಿ ಅರ್ಜಿಸಲ್ಲಿಸಿದ್ದು, ಯಾವುದೇ ಮಧ್ಯವರ್ತಿಗಳ ಮತ್ತು ಲಂಚದ ಹಾವಳಿಗಳು ಇಲ್ಲದೆ ನೇರ ಲಾಭ ಪಡೆದ ಫಲಾನುಭವಿಗಳು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಕ್ಕೆ ಮತ್ತು ಸರಕಾರಕ್ಕೆ, ಅಧಿಕಾರಿ ವರ್ಗದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿವಿಧ ನಿಗಮ ಮಂಡಳಿಗಳಲ್ಲಿನ ಸೌಲಭ್ಯಗಳನ್ನು ಪಡೆಯಲು, ರೇಷನ್ ಕಾರ್ಡ್ ತಿದ್ದುಪಡಿ, ಪ್ರಧಾನ ಮಂತ್ರಿ ಹವಾಮಾನ ಆಧಾರಿತ ಬೆಳೆವಿಮೆ ಸೇರಿದಂತೆ ಹಲವು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಗ್ರಾಮ ಮಟ್ಟದಲ್ಲೇ ಅವಕಾಶ ಕಲ್ಪಿಸಿರುವಂತದ್ದು ಸರಕಾರದ ಮೆಚ್ಚುಗೆಯ ಕಾರ್ಯವಾಗಿದೆ.
ಆದರೆ ಸರಕಾರದಿಂದ ಮತ್ತು ಗ್ರಾಮ ಪಂಚಾಯತ್ಗಳಿಂದ ಯಾವುದೇ ರೀತಿಯ ಗೌರವ ಧನ, ಬಾಡಿಗೆ ಸೇರಿದಂತೆ ಹಲವು ಸವಲತ್ತುಗಳು ಸಿಗದೇ ಇರುವುದರಿಂದ ಗ್ರಾಮ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದ ಕೆಲವು ಗ್ರಾಮ ಒನ್ ನಾಗರಿಕ ಸೇವಾಕೇಂದ್ರಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಈ ಬಗ್ಗೆ ಸರಕಾರ ಗಮನ ಹರಿಸಿ ಗ್ರಾಮ ಒನ್ ನಾಗರಿಕ ಸೇವಾಕೇಂದ್ರಗಳನ್ನು ನಡೆಸುತ್ತಿರುವವರ ಬಾಳಿಗೆ ಬೆಳಕಾಗಬೇಕಾಗಿದೆ.