ಉಪ್ಪಿನಂಗಡಿ: ಇಲ್ಲಿನ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇದ್ದೂ, ಇಲ್ಲದಂತಿದ್ದಾರೆ. ಔಷಧಿ ಕೊಡುವ ಬದಲು ಹೊರಗಡೆಯಿಂದ ತೆಗೆದುಕೊಳ್ಳುವಂತೆ ಚೀಟಿ ಕೊಡುತ್ತಾರೆ. ಆರೋಗ್ಯ ರಕ್ಷಾ ಸಮಿತಿಯವರಿಗೆ ಆಸ್ಪತ್ರೆಯಲ್ಲಿ ಬೆಲೆನೇ ಕೊಡುತ್ತಿಲ್ಲ. ಇಲ್ಲಿನ ವೈದ್ಯಾಧಿಕಾರಿ ಹೆಚ್ಚಿನ ಹೊತ್ತು ತಮ್ಮ ಖಾಸಗಿ ಕ್ಲಿನಿಕ್ನಲ್ಲಿರುತ್ತಾರೆ. ಗರ್ಭೀಣಿಯರು ಬಂದರೆ ಇಲ್ಲಿ ಕೇಳುವವರೇ ಇಲ್ಲವಾಗಿದ್ದಾರೆ. ಒಟ್ಟಿನಲ್ಲಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತಾಗಿದೆ ಎಂಬ ಆರೋಪವು ಉಪ್ಪಿನಂಗಡಿ ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ವ್ಯಕ್ತವಾಯಿತ್ತಲ್ಲದೆ, ಅವ್ಯವಸ್ಥೆ ಇದೇ ರೀತಿ ಮುಂದುವರಿದರೆ ಸಾರ್ವಜನಿಕರು ಸಂಘಟಿತರಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯೂ ವ್ಯಕ್ತವಾಯಿತು.
ಗ್ರಾ.ಪಂ. ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಿರಿಯ ಆರೋಗ್ಯ ಸಹಾಯಕಿ ಮರಿಯಮ್ಮ ಇಲಾಖಾ ಮಾಹಿತಿ ನೀಡುತ್ತಿದ್ದಂತೆ ಆಕ್ರೋಶಿತರಾದ ಗ್ರಾಮಸ್ಥರು, ಇಲ್ಲಿ ಎಲ್ಲವನ್ನೂ ಹೇಳುತ್ತೀರಿ. ಬಡವರು ಆಸ್ಪತ್ರೆಗೆ ಬಂದರೆ ಅಲ್ಲಿ ಕೇಳುವವರೇ ಇಲ್ಲ. ಕೆಲವು ಕಲಿಕೆಯ ವಿದ್ಯಾರ್ಥಿಗಳು ಪರೀಕ್ಷೆ ಮಾಡಿ ಚೀಟಿ ಕೊಡುತ್ತಾರೆ. ಔಷಧಿ ವಿಭಾಗಕ್ಕೆ ಹೋದರೆ. ಇಲ್ಲಿ ಇಲ್ಲ ಹೊರಗಡೆಯಿಂದ ತೆಗೆದುಕೊಳ್ಳಿ ಎನ್ನುತ್ತೀರಿ. ಹೀಗಾಗಿ ಆಸ್ಪತ್ರೆ ನಾಮಕಾವಸ್ಥೆಗೆ ಇರುವಂತಿದೆ ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು.
ವೈದ್ಯಾಧಿಕಾರಿ ಖಾಸಗಿ ಕ್ಲಿನಿಕ್ನಲ್ಲಿ
ಇಲ್ಲಿನ ವೈದ್ಯಾಧಿಕಾರಿಗೆ ಖಾಸಗಿ ಕ್ಲಿನಿಕ್ ಇದ್ದು, ಹೆಚ್ಚಿನ ಹೊತ್ತು ಅವರು ಅಲ್ಲಿ ಇರುತ್ತಾರೆ, ಅಲ್ಲಿಗೆ ಬರುವ ರೋಗಿಗಳಿಗೆ ಅವರು ಔಷಧಿ ಕೊಟ್ಟು, ಅವರನ್ನು ವಿಶ್ರಾಂತಿ ಮಾಡಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸುತ್ತಾರೆ. ಇನ್ನು ಅವರು ಆಸ್ಪತ್ರೆಯಲ್ಲಿ ಇದ್ದ ವೇಳೆ ಇಲ್ಲಿಗೆ ಬರುವ ಬಹಳಷ್ಟು ರೋಗಿಗಳಿಗೆ ಒಂದೋ ಎರಡು ದಿನದ ಔಷಧಿ ಕೊಟ್ಟು ಮುಂದೆ ತನ್ನ ಕ್ಲಿನಿಕ್ಗೆ ಬರಹೇಳುತ್ತಾರೆ. ಅದೇ ರೀತಿ ಇವರು ಇಲ್ಲದ ವೇಳೆ ಯಾರಾದರು ರೋಗಿಗಳು ಬಂದರೆ ಅವರು ಕ್ಲಿನಿಕ್ನಲ್ಲಿ ಇರುತ್ತಾರೆ ಅಲ್ಲಿಗೆ ಹೋಗಿ ಎಂದು ಹೇಳಿ ಕಳುಹಿಸುವ ವ್ಯವಸ್ಥೆ ಇಲ್ಲಿಯ ಸಿಬ್ಬಂದಿಯಿಂದ ನಡೆಯುತ್ತಿದೆ ಎಂಬ ಗಂಭೀರ ಆರೋಪ ಸಭೆಯಲ್ಲಿ ವ್ಯಕ್ತವಾಯಿತು.
ಸಭೆಯಲ್ಲಿ ಸಮುದಾಯ ಆಸ್ಪತ್ರೆಯ ಬಗ್ಗೆ ಮತ್ತು ವೈದ್ಯಾಧಿಕಾರಿ ವಿರುದ್ಧ ದೂರುಗಳು ತಾರಕಕ್ಕೇರತೊಡಗಿ ಹಲವು ಮಹಿಳೆಯರು ಅಲ್ಲಿನ ಅವ್ಯವಸ್ಥೆ ಬಗ್ಗೆ ಮಾತನಾಡಲಾರಂಭಿಸಿದರು. ಗರ್ಭೀಣಿಯರು ಹೋದರೆ ತೀರಾ ಲಘುವಾಗಿ ನೋಡುತ್ತಾರೆ. ಗಂಟೆಗಟ್ಟಲೆ ಕೂರಿಸುತ್ತಾರೆ ಎಂದು ಮಹಿಳೆಯೋರ್ವರು ತನ್ನ ಸಂಬಂಧಿಯೋರ್ವರಿಗೆ ಆದ ತೊಂದರೆಯನ್ನು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ವಾರ್ಡು ಸಭೆಯಲ್ಲಿಯೂ ತಿಳಿಸಿರುವುದಾಗಿ ಹೇಳಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು ಅವರು ಮಾತನಾಡಿ, ತನ್ನ ಸಂಬಂಧಿಯೋರ್ವರು ಅವರ ಮಗುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿನ ಕಲಿಕಾ ವೈದ್ಯ ವಿದ್ಯಾರ್ಥಿಗಳು ನೀಡಿದ ಮಾತ್ರೆಯನ್ನು ಸಂಶಯ ಬಂದು ಪರಿಶೀಲಿಸಿದಾಗ ಅದು ಅಧಿಕ ಡೋಸ್ನ ಮಾತ್ರೆಯಾಗಿತ್ತು. ಬಳಿಕ ಆ ಮಗುವಿಗೆ ಬೇರೆ ಖಾಸಗಿ ವೈದ್ಯರುಗಳಿಂದ ಚಿಕಿತ್ಸೆ ಕೊಡಿಸಲಾಯಿತು ಎಂದರು. ಗ್ರಾ.ಪಂ. ಸದಸ್ಯ ಧನಂಜಯ್ ನಟ್ಟಿಬೈಲು ಮಾತನಾಡಿ, ಆಸ್ಪತ್ರೆಯ ಆಂಬುಲೆನ್ಸ್ ಇದ್ದರೂ ಅಲ್ಲಿ ಉಪ್ಪಿನಂಗಡಿಯವರಲ್ಲದ ಖಾಸಗಿ ಆಂಬುಲೆನ್ಸ್ವೊಂದಕ್ಕೆ ನಿಲ್ಲಲು ಅವಕಾಶ ಮಾಡಿಕೊಡಲಾಗುತ್ತಿದೆ. ರೋಗಿಗಳನ್ನು ಈ ಆಂಬುಲೆನ್ಸ್ನ ಮೂಲಕ ಕೂಡಾ ಆಸ್ಪತ್ರೆಯವರೇ ಇತರೇ ಆಸ್ಪತ್ರೆಗಳಿಗೆ ಕಳುಹಿಸುತ್ತಾರೆ. ಒಟ್ಟಿನಲ್ಲಿ ಇದೊಂದು ವ್ಯವಹಾರ ಕೇಂದ್ರ ಆಗಿದೆ ಎಂದು ಆರೋಪಿಸಿದರು.
ಆಗ ಚರ್ಚಾ ನಿಯಂತ್ರಣಾಧಿಕಾರಿ ಲೋಕೇಶ್ರವರು ಮಾತನಾಡಿ, ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿಯೂ ಚರ್ಚೆಯಾಗಿದೆ. ಇದೀಗ ಇಲ್ಲಿಯೂ ಮತ್ತೆ ದೂರುಗಳು ಬಂದಿದೆ. ಈ ವಿಚಾರವನ್ನು ಆಸ್ಪತ್ರೆಯಿಂದ ಸಭೆಗೆ ಬಂದಿರುವ ತಾವು ಅವರ ಗಮನಕ್ಕೆ ತರಬೇಕು. ಇಲ್ಲಿ ಕೂಡಾ ಈ ಬಗ್ಗೆ ನಿರ್ಣಯ ಬರೆದುಕೊಳ್ಳಲಾಗುವುದು ಎಂದರು. ಬಳಿಕ ಇಲ್ಲಿನ ಅವ್ಯವಸ್ಥೆ ವಿರುದ್ಧ ಮೇಲಾಧಿಕಾರಿಗಳಿಗೆ ತಿಳಿಸಿ, ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ಕೊಯಿಲ ವಿದ್ಯುತ್ ಉಪಕೇಂದ್ರದಿಂದ ಉಪ್ಪಿನಂಗಡಿ ಭಾಗಕ್ಕೆ ವಿದ್ಯುತ್ ಸಂಪರ್ಕಕ್ಕೆ ಕಂಬಗಳನ್ನು ಅಳವಡಿಸುತ್ತಿರುವ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೆಸ್ಕಾಂ ಎಇ ನಿತಿನ್ ಕುಮಾರ್, ಇಲ್ಲಿನ ವಿದ್ಯುತ್ ಉಪಕೇಂದ್ರ ಮುಂಬರುವ ಡಿಸೆಂಬರ್ವೊಳಗೆ ಪೂರ್ತಿಗೊಳ್ಳಬಹುದೆಂಬ ಭರವಸೆಯಿದೆ. ಆ ಬಳಿಕ ಲೋ ವೋಲ್ಟೇಜ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಆದರೆ ಈಗ ಕಂಬ ಅಳವಡಿಸಲು ಪಿಡಬ್ಲ್ಯೂಡಿ ಇಲಾಖೆ ಹಾಗೂ ಅರಣ್ಯ ಇಲಾಖೆಯು ತಡೆ ನೀಡುತ್ತಿದ್ದು, ನಮ್ಮ ಜಾಗದಲ್ಲಿ ವಿದ್ಯುತ್ ಕಂಬಗಳನ್ನು ಹಾಕಬಾರದು ಎಂದು ಹೇಳಿದ್ದಾರೆ. ಪಿಡಬ್ಲ್ಯೂಡಿ ಇಲಾಖೆಯವರು ರಸ್ತೆ ಮಾರ್ಜಿನ್ನಲ್ಲಿ ವಿದ್ಯುತ್ ಕಂಬ ಅಳವಡಿಸಿದರೆ ಎಫ್ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ. ಆದ್ದರಿಂದ ಮುಂದಕ್ಕೆ ಕಾನೂನಾತ್ಮಕವಾಗಿ ನಾವು ಹೋಗಬೇಕಿದೆ. ನ್ಯಾಯಾಲಯದ ಆದೇಶದಂತೆ ಮುನ್ನಡೆಯಬೇಕಿದೆ ಎಂದರು. ಆಗ ಗ್ರಾಮಸ್ಥ ಸುನೀಲ್ ಕುಮಾರ್ ದಡ್ಡು ಮಾತನಾಡಿ, ಈ ರೀತಿಯಾದರೆ ಕಾಮಗಾರಿ ವಿಳಂಬವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಮೂರು ಇಲಾಖೆಗಳು ಹೊಂದಾಣಿಕೆಯಿಂದ ಸಾಗಬೇಕು. ಈ ಬಗ್ಗೆ ಈ ಗ್ರಾಮ ಸಭೆಯಲ್ಲಿ ನಿರ್ಣಯ ಅಂಗೀಕರಿಸಬೇಕೆಂದರು. ಈ ಬಗ್ಗೆ ಚರ್ಚೆಯಾಗಿ ವಿದ್ಯುತ್ ಜನರ ಮೂಲಭೂತ ಸೌಕರ್ಯವಾಗಿದ್ದು, ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಪಿಡಬ್ಲ್ಯೂಡಿ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ನಮ್ಮ ವ್ಯಾಪ್ತಿಯ ಜಾಗ ಎಂದು ಅಡ್ಡಿಪಡಿಸಿದರೆ ಅದಕ್ಕೆ ಗ್ರಾಮಸ್ಥರ ವಿರೋಧವಿದೆ ಎಂಬ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ಪಶು ಸಂಗೋಪನಾ ಇಲಾಖೆಯ ವೈದ್ಯರಾದ ಡಾ. ಉಷಾ ಇಲಾಖಾ ಮಾಹಿತಿ ನೀಡಿ, ಜಾನುವಾರುಗಳನ್ನು ಸಾಗಾಟ ಮಾಡುವಾಗ ಇನ್ನು ಮುಂದಕ್ಕೆ ಸಾರಿಗೆ ಇಲಾಖೆಯಲ್ಲಿ ನೋಂದಾಯಿಸಿದ ವಾಹನಗಳನ್ನೇ ಬಳಸಬೇಕೆಂಬ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪೊಲೀಸ್ ಇಲಾಖೆ ಹೇಳಿದೆ ಎಂದರು. ಪುತ್ತೂರಿನಲ್ಲಿ ಇಂತಹ ಮೂರು ವಾಹನಗಳು ಮಾತ್ರ ಇವೆ ಎಂದರು. ಆಗ ಗ್ರಾಮಸ್ಥರು ಮಾತನಾಡಿ, ಇದು ಸರಿಯಲ್ಲ. ಇದರಿಂದ ಸ್ವಂತ ಪಿಕಾಪ್ ಇದ್ದವನು ಕೂಡಾ ಅವನ ಮನೆಗೆ ಜಾನುವಾರುಗಳನ್ನು ತರಲು ಇನ್ನೊಂದು ವಾಹನವನ್ನು ಅವಲಂಬಿಸುವ ಸ್ಥಿತಿ ಎದುರಾಗುತ್ತದೆ. ಅಲ್ಲದೇ, ಇಂತಹ ವಾಹನಗಳ ಸಂಖ್ಯೆ ಕಡಿಮೆ ಇರುವಾಗ ಬಾಡಿಗೆಯ ಡಿಮ್ಯಾಂಡ್ ಕೂಡಾ ಜಾಸ್ತಿಯಾಗುವ ಸಾಧ್ಯತೆಯಿದ್ದು, ದನದ ಮೌಲ್ಯಕ್ಕಿಂತ ಹೆಚ್ಚು ಮೊತ್ತ ವಾಹನ ಬಾಡಿಗೆಗೆ ನೀಡಬೇಕಾದ ಸ್ಥಿತಿ ಬರಬಹುದು. ಆಗ ಡಾ. ಉಷಾ ಅವರು ಅಕ್ರಮ ತಡೆಗಟ್ಟಲು ಈ ರೀತಿ ಮಾಡಲಾಗಿದೆ ಎಂದಾಗ, ಇದರಿಂದ ಅಕ್ರಮ ನಿಲ್ಲಲು ಸಾಧ್ಯವಿಲ್ಲ. ಅವರೇ ಅಕ್ರಮ ಮಾಡಿದರೆ ಏನು ಮಾಡೋದು ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಈ ಬಗ್ಗೆ ಚರ್ಚೆಯಾಗಿ ಜಾನುವಾರು ಸಾಗಾಟ ಮಾಡಲು ಸಾರಿಗೆ ಇಲಾಖೆಯಲ್ಲಿ ನೋಂದಾಯಿಸಿದ ವಾಹನಗಳೇ ಆಗಬೇಕೆಂಬ ನಿಯಮ ಬೇಡ. ಬೇರೆ ವಾಹನಗಳಲ್ಲಿ ಜಾನುವಾರುಗಳನು ಸಾಗಿಸಲಿ. ಆದರೆ ಅಕ್ರಮ ಜಾನುವಾರು ಸಾಗಾಟ ಮಾಡಿದ ವಾಹನಗಳ ನೋಂದಣಿಯನ್ನು ಸಾರಿಗೆ ಇಲಾಖೆ ರದ್ದು ಪಡಿಸಲಿ ಎಂಬ ನಿಯಮ ತರಲು ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು.
ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಯು ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿ ಶಿಕ್ಷಕರಿಗೂ ಶಾಲೆಯ ಅಭಿವೃದ್ಧಿಯ ಬಗ್ಗೆ ಕಾಳಜಿಯಿಲ್ಲದಂತಾಗಿದೆ. ಇದು ವಿದ್ಯಾರ್ಥಿಗಳ ಕಲಿಕೆಗೆ ಹೊಡೆತ ನೀಡುವ ಸಾಧ್ಯತೆ ಇದೆ ಎಂಬ ಆರೋಪವೂ ಗ್ರಾಮ ಸಭೆಯಲ್ಲಿ ಕೇಳಿ ಬಂತು. ಸಭೆಯಲ್ಲಿ ಗ್ರಾಮಸ್ಥರಾದ ಲಕ್ಷ್ಮಣ ಗೌಡ ನೆಡ್ಚಿಲ್, ಹರಿಪ್ರಸಾದ್ ಶೆಟ್ಟಿ, ವೆಂಕಪ್ಪ ಪೂಜಾರಿ, ಆದಂ ಕೊಪ್ಪಳ, ಮಜೀದ್, ಯು.ಟಿ. ಇರ್ಷಾದ್, ಮಹಮ್ಮದ್ ಕೆಂಪಿ, ಲತೀಫ್ ರಾಮನಗರ, ವಸಂತ ಕುಕ್ಕುಜೆ, ಧರ್ನಪ್ಪ ನಾಯ್ಕ್ ಮಾತನಾಡಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಸದಸ್ಯರಾದ ಕೆ. ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು.ಟಿ. ತೌಸೀಫ್, ಲೋಕೇಶ್ ಬೆತ್ತೋಡಿ, ಸಣ್ಣಣ್ಣ ಯಾನೆ ಸಂಜೀವ ಮಡಿವಾಳ, ಧನಂಜಯ ಕುಮಾರ್, ಯು.ಕೆ. ಇಬ್ರಾಹಿಂ, ಮೈಸಿದಿ ಇಬ್ರಾಹಿಂ, ಅಬ್ದುಲ್ ರಶೀದ್, ಉಷಾಚಂದ್ರ ಮುಳಿಯ, ಉಷಾ ನಾಯ್ಕ್, ರುಕ್ಮಿಣಿ, ಶೋಭಾ, ಜಯಂತಿ, ವನಿತಾ, ನೆಬಿಸ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿದರು. ಕಾರ್ಯದರ್ಶಿ ಗೀತಾ ಶೇಖರ್ ವಂದಿಸಿದರು.
5 ವಾರ್ಡ್ನಲ್ಲಿ ತ್ಯಾಜ್ಯ ಘಟಕಕ್ಕೆ ವಿರೋಧ
ಗ್ರಾ.ಪಂ.ನ 5ನೇ ವಾರ್ಡ್ನಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡುವ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ ಬಗ್ಗೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಪ್ರಶ್ನಿಸಿದಾಗ, ಪಿಡಿಒ ಅವರು ಸ್ಥಳ ಪರಿಶೀಲನೆ ನಡೆಸಿರುವುದು ಹೌದು ಎಂದು ಒಪ್ಪಿಕೊಂಡರು. ಆಗ ಆಕ್ರೋಶಗೊಂಡ ಆ ವಾರ್ಡ್ನ ಗ್ರಾಮಸ್ಥರು, ಯಾವುದೇ ಕಾರಣಕ್ಕೂ 5ನೇ ವಾರ್ಡುನಲ್ಲಿ ತ್ಯಾಜ್ಯ ಘಟಕ ನಿರ್ಮಿಸಬಾರದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಂತ ಸ್ವಚ್ಛವಾಗಿರುವ, ಕಾಡು ಪ್ರದೇಶಗಳನ್ನೊಳಗೊಂಡ ಪ್ರದೇಶ 5ನೇ ವಾರ್ಡು. ಇಲ್ಲಿ ಕೃಷಿಕರೇ ಇದ್ದು, ಕೃಷಿ ಮಾಡಿಕೊಂಡು ಬದುಕುತ್ತಿದ್ದೇವೆ. ವಾರ್ಡಿಗೆ ತಾಗಿಕೊಂಡು ಕಾಡು ಪ್ರದೇಶ ಇದೆ. ತ್ಯಾಜ್ಯ ಘಟಕ ಮಾಡಿದರೆ ಕಾಡು ಹಂದಿಗಳು ಸೇರಿದಂತೆ ಅಲ್ಲಿನ ಪ್ರಾಣಿಗಳು ಬಂದು ಊರ ಒಳಗಡೆ ಸೇರತೊಡಗುತ್ತದೆ. ಅದು ಊರು ಮಲೀನತೆಗೆ ಕಾರಣವಾಗುತ್ತದೆ. ಆದ ಕಾರಣ ಯಾವುದೇ ಕಾರಣಕ್ಕೂ 5ನೇ ವಾರ್ಡುನಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಬಾರದು ಎಂದು ಆಗ್ರಹಿಸಿದರಲ್ಲದೆ, ಅಜಿರಾಳದಲ್ಲಿ ತ್ಯಾಜ್ಯ ಘಟಕಕ್ಕೆ ಜಾಗ ಮೀಸಲಿರಿಸಿದೆ. ಆ ಜಾಗಕ್ಕಾಗಿ ಗ್ರಾ.ಪಂ. ಹಣ ಕೂಡಾ ವ್ಯಯ ಮಾಡಿದೆ. ಆದರೆ ಅದನ್ನು ಬಿಟ್ಟು ಬೇರೆ ಜಾಗ ಯಾಕೆ ಹುಡುಕುವುದು. ಅಲ್ಲಿಯೇ ತ್ಯಾಜ್ಯ ಘಟಕ ಮಾಡಿ ಎಂದರು. ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು ಕೂಡಾ 5ನೇ ವಾರ್ಡ್ನಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಬಲವಾದ ವಿರೋಧ ವ್ಯಕ್ತಪಡಿಸಲಾಯಿತು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.