ಪುತ್ತೂರು: ಕಬಕ ಗ್ರಾಮದ ನೆಹರುನಗರದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಓರ್ವ ಆರೋಪಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರ್ನಾಜೆಯ ಆಶ್ಲೇಷ ಭಟ್, ರಿಕ್ಷಾ ಚಾಲಕರಾದ ನಾರಾಯಣ್ ಶೆಟ್ಟಿಗಾರ್, ಮಿಥುನ್ ಕುಮಾರ್, ಬನ್ನೂರಿನ ವಿಜಯ ಶೆಟ್ಟಿ ಮತ್ತು ಸಹಾಯಕ ಸುಳ್ಯದ ಆಶ್ರಫ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು,ಕಳವು ಮಾಡಲಾಗಿದ್ದ ತಲಾ 60 ಕೆಜಿ ತೂಕದ ಕಾಫಿ ಬೀಜ ತುಂಬಿದ್ದ 80 ಚೀಲ ಕಾಫಿ ಬೀಜ,ಕೃತ್ಯಕ್ಕೆ ಬಳಸಿದ ಗೂಡ್ಸ್ ಟೆಂಪೊ ಮತ್ತು ಎರಡು ಆಟೋ ರಿಕ್ಷಾಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಬಳಿಕ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿ ಬಿಡುಗಡೆಗೊಳಿಸಲಾಗಿದೆ. ಈ ಪ್ರಕರಣದ ಆರೋಪಿ ಆಶ್ರಫ್ ಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪರ ವಕೀಲರಾದ ಉದಯಶಂಕರ ಶೆಟ್ಟಿ ಅರಿಯಡ್ಕ, ಶ್ರೀಮತಿ ಕೃಷ್ಣವೇಣಿ ಎಂ., ರಾಕೇಶ್ ಮಸ್ಕರೇನ್ಹಸ್ ವಾದಿಸಿದ್ದರು. ಈ ಪ್ರಕರಣದಲ್ಲಿ ಆಶ್ಲೇಷ ಭಟ್, ರಿಕ್ಷಾ ಚಾಲಕರಾದ ನಾರಾಯಣ್ ಶೆಟ್ಟಿಗಾರ್, ಮಿಥುನ್ ಕುಮಾರ್, ಬನ್ನೂರಿನ ವಿಜಯ ಶೆಟ್ಟಿ ಆರೋಪಿಗಳಿಗೆ ಹರೀಶ್ ಕುಮಾರ್ ಬಳಕ್ಕ ಮತ್ತು ದೀಪಕ್ ಬೊಲ್ವಾರ್ ವಾದಿಸಿದರು.
ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಲಂ 303(2)ಬಿಎನ್ ಎಸ್ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಬಿಎನ್ಎಸ್ ಕಾಯ್ದೆಯಲ್ಲಿ, 7 ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾದ ಪ್ರಕರಣದಲ್ಲಿ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗುತ್ತದೆ. ಒಂದು ವೇಳೆ ಅವರು ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡರೆ ಬಂಧಿಸಲಾಗುತ್ತದೆ.
