ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇದರ ಆಶ್ರಯದಲ್ಲಿ ೪೩ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.೨೭ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಶಬರೀಶ ಕಲಾಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ ೬ಕ್ಕೆ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ ನೂಜಿನ್ನಾಯ ಇವರ ಪೌರೋಹಿತ್ಯದಲ್ಲಿ ಗಣಪತಿ ದೇವರ ಪ್ರತಿಷ್ಠೆ ನಡೆಯಲಿದೆ. ಬಳಿಕ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ, ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ೮.೧೫ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಸೀಯಾಳಾಭಿಷೇಕ, ೮.೩೦ಕ್ಕೆ ಗಣಹೋಮ ನಡೆಯಲಿದೆ. ೮.೩೦ರಿಂದ ೧೦.೧೫ರ ತನಕ ಶ್ರೀ ಶಬರೀಶ ಕಲಾಮಂದಿರದಲ್ಲಿ ಛದ್ಮವೇಷ ಸ್ಪರ್ಧೆ, ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ.
೧೦.೪೫ಕ್ಕೆ ಧರ್ಮಜಾಗೃತಿ ಸಭೆ ನಡೆಯಲಿದ್ದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ.ಸುಬ್ಬಪ್ಪ ಕೈಕಂಬ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಸೇವಾ ಭಾರತಿ ಮಂಗಳೂರು ಮಹಾದ ಚೀಪ್ ಎಕ್ಸಿಕ್ಯೂಟಿವ್ ಆಫೀಸರ್ ಪೃಥ್ವಿಪಾಲ್ ಕೆ.ಉದ್ಘಾಟಿಸಲಿದ್ದಾರೆ. ಗಣೇಶೋತ್ಸವ ಸಮಿತಿ ಅಧ್ಯಕ್ಷ ಮೋಹನ್ ಗೌಡ ಕಟ್ಟೆಮಜಲು ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಮುಖಂಡರಾದ ಕಿರಣ್ಚಂದ್ರ ಡಿ.ಪುಷ್ಪಗಿರಿ ಉರುವಾಲು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ನಿರ್ದೇಶಕ ಬಾಬು ನಾಯ್ಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಶ್ರೀ ಗಣಪತಿ ದೇವರಿಗೆ ಮಹಾರಂಗಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ೧.೧೫ರಿಂದ ಸುರೇಖಾ ಮತ್ತು ಶಿಷ್ಯವೃಂದದವರಿಂದ ಭರತನಾಟ್ಯ ನಡೆಯಲಿದೆ. ಅಪರಾಹ್ನ ೩ರಿಂದ ಶ್ರೀ ಗಣಪತಿ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.