ರಾಮಕುಂಜ: ಕುಲಾಲ ಸಮಾಜ ಸೇವಾ ಸಂಘದಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

0

ರಾಮಕುಂಜ: ಕುಲಾಲ ಸಮಾಜ ಸೇವಾ ಸಂಘ ರಾಮಕುಂಜ ಇದರ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಭಾ ಕಾರ್ಯಕ್ರಮ ಆ.24ರಂದು ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಂಡು ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ ನಡೆಯಿತು. ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತ ಉಡುಪ ಪೂಜಾ ವಿಧಿವಿಧಾನ ನೆರವೇರಿಸಿದರು. ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ಹೊಸಮಣ್ಣು ಮಾತನಾಡಿ, ಸಂಘದ ಏಳಿಗೆಗಾಗಿ ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.


ಅತಿಥಿಯಾಗಿ ಆಗಮಿಸಿದ್ದ ವಿಟ್ಲ ಜೇಸಿಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಹಾಗೂ ಉಪನ್ಯಾಸಕರೂ, ವಿಟ್ಲ ಕುಲಾಲ ಸಮಾಜ ಸೇವಾ ಸಂಘದ ಉಪಾಧ್ಯಕ್ಷರೂ ಆದ ರಾಧಾಕೃಷ್ಣ ಕುಲಾಲ್ ಎರುಂಬು ಮಾತನಾಡಿ, ನಾವು ಸಂಘಟಿತರಾದರೆ ಮಾತ್ರ ನಾಯಕತ್ವ ವಹಿಸಲು ಸಾಧ್ಯ, ಕುಲಾಲ ಸಮುದಾಯದಲ್ಲಿ ಒಗ್ಗಟ್ಟಿನ ಅಗತ್ಯವಿದೆ ಮತ್ತು ಸಮಾಜ ಬಾಂಧವರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕೆಂದು ಹೇಳಿದರು. ಇನ್ನೋರ್ವ ಅತಿಥಿ ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಎಂ.ಶೇಷಪ್ಪ ಕುಲಾಲ್ ಮಾತನಾಡಿ, ಕುಲಾಲ ಸಂಘ ಹೇಗೆ ಮುಂದುವರಿಯಬೇಕು ಎನ್ನುವುದರ ಬಗ್ಗೆ ಅರಿವು ಮೂಡಿಸಿದರು.


ಉಪನ್ಯಾಸಕ ಜಯೇಂದ್ರ, ವಕೀಲ ಮಹೇಶ್ ಸವಣೂರು ಶುಭ ಹಾರೈಸಿದರು. ಕಾವ್ಯ ಜನಾರ್ದನ ವರ್ಣಡ್ಕ, ಕುಲಾಲ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೇಷ್ಠ ಮತ್ತು ಬ್ರಿಜೇಶ್ ಪ್ರಾರ್ಥಿಸಿದರು. ಚಿತ್ರಾಹರೀಶ್ ಹೊಸಮಣ್ಣು ಸ್ವಾಗತಿಸಿದರು. ಯೋಗೀಶ್ ಟೈಲರ್ ವಂದಿಸಿದರು. ರಮೇಶ್ ಕುಂಡಡ್ಕ, ಶಶಿಕಲಾ ನಯನ್ ಕಜೆ ನಿರೂಪಿಸಿದರು. ಇತ್ತೀಚೆಗೆ ನಿಧನರಾದ ಧರ್ಣಪ್ಪ ಕುಲಾಲ್ ಕಂಪ ಹಾಗೂ ದಯಾನಂದ ಹೊಸಮಣ್ಣು ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಸಭೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಮಧ್ಯಾಹ್ನ ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here