ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ
ಪುತ್ತೂರು: ಜಾತಿ ಮತ ಪಕ್ಕಕ್ಕಿಟ್ಟು ಹಿಂದು ಅನ್ನುವ ಏಕ ಭಾವದಿಂದ ದೇಶದ ಜನರೆಲ್ಲ ಒಂದಾಗಬೇಕು.ರಾಷ್ಟ್ರವನ್ನು ಒಗ್ಗೂಡಿಸುವ ಅದ್ಭುತ ಪ್ರಯತ್ನ ಗಣಪತಿಯ ಉತ್ಸವ ಎಂದು ಹಿಂದು ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಹೇಳಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಸಾರ್ವಜನಿಕ ಶ್ರಿ ಗಣೇಶೋತ್ಸವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ಸಮಿತಿಯಿಂದ ನಡೆಯುತ್ತಿರುವ 59ನೇ ವರ್ಷದ ಗಣೇಶೋತ್ಸವದ 3ನೇ ದಿನ ಆ.29ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ನಮ್ಮ ರಾಷ್ಟ್ರೀಯ ಚಿಂತನೆಗೆ ಹೊಸ ಹುರುಪನ್ನು ನೀಡುವ ಕೆಲಸ ಗಣೇಶೋತ್ಸವ ವೇದಿಕೆಗಳು ಮಾಡುತ್ತಿವೆ. ಈ ಚಟುವಟಿಕೆಗಳು ಇದೇ ರೀತಿ ನಿತ್ಯ ನಿರಂತರವಾಗಿ ನಡೆಯುತ್ತಾ ಹೋಗಬೇಕು. ಈ ಗಣೇಶೋತ್ಸವದಿಂದ ನಾವು ಹಿಂದು ಸಮಾಜದ ಐಕ್ಯತೆಯನ್ನು ಕಾಣಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸುವ, ನಮ್ಮ ಸಭ್ಯತೆಯನ್ನು ಜಗತ್ತಿಗೆ ತಿಳಿಸುವ ಕೆಲಸ ಆಗಬೇಕು ಎಂದರು.
ಕ್ಯಾಂಪ್ಕೋ ಚಾಕಲೇಟ್ ಫಾಕ್ಟರಿಯ ಜನರಲ್ ಮ್ಯಾನೇಜರ್ ಶ್ಯಾಮ್‌ಪ್ರಸಾದ್ ಎಚ್ ಅಧ್ಯಕ್ಷತೆ ವಹಿಸಿದ್ದರು. ಉಪತಹಶೀಲ್ದಾರ್ ಸುಲೋಚನಾ ಬಹುಮಾನ ವಿತರಣೆ ಮಾಡಿದರು. ನಿವೃತ್ತ ಸೈನಿಕ ರಾಮಣ್ಣ ಪೂಜಾರಿ ಮತ್ತು ಪ್ರಗತಿಪರ ಕೃಷಿಕ ರಾಮಣ್ಣ ಗೌಡ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಜೊತೆ ಕಾರ್ಯದರ್ಶಿ ನೀಲಂತ್, ಕೋಶಾಧಿಕಾರಿ ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಸುಮಾಧರ ಪ್ರಾರ್ಥಿಸಿದರು. ಜಯಶ್ರೀ ಎಸ್ ಶೆಟ್ಟಿ ಸ್ವಾಗತಿಸಿ, ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
ಬ್ರಿಟಿಷರ ಕಾಲದಲ್ಲೂ ಇಷ್ಟು ಕಂಡಿಷನ್ ಹಾಕಿರಲಿಕ್ಕಿಲ್ಲ
ಇವತ್ತು ಧಾರ್ಮಿಕ ಕಾರ್ಯಕ್ರಮಕ್ಕೆ ಮಿತಿಯನ್ನು ಪಾಲಿಸಿಕೊಂಡು ಗಣೇಶೋತ್ಸವ ಮಾಡುವ ದುಸ್ಥಿತಿಯಲ್ಲಿ ನಾವಿದ್ದೇವೆ. ಬಹುಶಃ ಬಾಲಗಂಗಾಧರ ತಿಲಕ್ ಅವರು ಗಣೇಶೋತ್ಸವ ಆರಂಭ ಮಾಡಿದ ಕಾಲದಲ್ಲಿ ಬ್ರಿಟೀಷರು ಕೂಡಾ ಇಷ್ಟು ಕಂಡೀಷನ್ ಹಾಕಿರಲಿಕ್ಕಿಲ್ಲ. ಆ ಕಾಲದಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿಷೇಧ ಇತ್ತು.ಆದರೆ ಧಾರ್ಮಿಕ ಚಟುವಟಿಕೆಗಳಿಗೆ ನಿಷೇಧ ಇರಲಿಲ್ಲ
-ಶ್ರೀಕಾಂತ್ ಶೆಟ್ಟಿ ಕಾರ್ಕಳ
ಇಂದು ಶೋಭಾಯಾತ್ರೆ
ಆ.30ಕ್ಕೆ ಶ್ರೀ ಗಣೇಶ ವಿಗ್ರಹದ ಜಲಸ್ಥಂಭನ ನಡೆಯಲಿದ್ದು, ಸಂಜೆ ಗಂಟೆ 3ಕ್ಕೆ ಶ್ರೀ ದೇವರ ಶೋಭಾಯಾತ್ರೆ ಆರಂಭಗೊಳ್ಳಲಿದೆ. ವೈವಿಧ್ಯಮಯ ಸ್ತಬ್ದ ಚಿತ್ರಗಳು, ಕುಣಿತ ಭಜನೆಯೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಾಗಿ ರೈಲ್ವೆ ನಿಲ್ದಾಣ ರಸ್ತೆಯಾಗಿ ಹಾರಾಡಿಯಿಂದ ಬೊಳುವಾರು ಓಂ ಶ್ರೀ ಶಕ್ತಿ ಅಂಜನೇಯ ಮಂತ್ರಾಲಯದ ಬಳಿ ಸೇರಿ ಅಲ್ಲಿಂದ ಮುಖ್ಯರಸ್ತೆಯಾಗಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ, ದರ್ಬೆ ವೃತ್ತ, ಪರ್ಲಡ್ಕ, ಭವಾನಿಶಂಕರ ದೇವಸ್ಥಾನದ ಮೂಲಕ ಕೋರ್ಟ್‌ರಸ್ತೆಯಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯಿಂದ ದೇವಸ್ಥಾನದ ರಥಬೀದಿ ಬಳಿಯ ಕೆರೆಯಲ್ಲಿ ಗಣೇಶ ವಿಗ್ರಹದ ವಿಸರ್ಜನೆ ನಡೆಯಲಿದೆ.