ಎನ್ಎಸ್ಎಸ್ ನಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ : ಮಹೇಶ್ ಏತಡ್ಕ
ಬೆಟ್ಟಂಪಾಡಿ: ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025- 26 ಸಾಲಿನ ಶೈಕ್ಷಣಿಕ ವರ್ಷದ ಎನ್ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಆ.29ರಂದು ನಡೆಯಿತು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಎಸ್ಎಸ್ಎಚ್ಎಸ್ಎಸ್ ಕಾಟುಕುಕ್ಕೆ ಇಲ್ಲಿನ ಉಪನ್ಯಾಸಕ ಮಹೇಶ್ ಏತಡ್ಕ ಅವರು ಎನ್ಎಸ್ಎಸ್ ನಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುವುದಲ್ಲದೆ ಒಬ್ಬ ವಿದ್ಯಾರ್ಥಿಯಲ್ಲಿ ಉತ್ತಮ ನಾಯಕತ್ವ ಗುಣ ಹಾಗೂ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ರಾಷ್ಟ್ರೀಯ ಸೇವಾ ಯೋಜನೆಯು ಸಹಾಯಕಾರಿಯಾಗಿದೆ ಎಂದು ಹೇಳಿದರು.
ಕಾಲೇಜಿನ ಎನ್ಎಸ್ಎಸ್ ಘಟಕದ ನಿಕಟಪೂರ್ವ ನಾಯಕ ಸಾರ್ಥಕ್. ಟಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಡಾ.ಲಾಯ್ಡ್ ವಿಕ್ಕಿ ಡಿಸೋಜಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಎನ್ಎಸ್ಎಸ್ ವತಿಯಿಂದ ನಿವೃತ್ತಿ ಹೊಂದಲಿರುವ ನಮ್ಮ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಮಾತನಾಡಿ, ನಮ್ಮ ಕಾಲೇಜಿನ ಎನ್ಎಸ್ಎಸ್ ಘಟಕದ ಸ್ವಯಂಸೇವಕರು ಮಾಡುವ ಕಾರ್ಯ ಪ್ರಶಂಸಣೀಯವಾಗಿದೆ ಎಂದು ಹೇಳಿದರು.
ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಪ್ರೊ.ರಾಮಚಂದ್ರ, ಕಲಾ ವಿಭಾಗದ ಉಪನ್ಯಾಸಕ ದಾಮೋದರ,ಎನ್ಎಸ್ಎಸ್ ಘಟಕದ ಇನ್ನೋರ್ವ ಯೋಜನಾಧಿಕಾರಿ ಉದಯಶಂಕರ್, ಕನ್ನಡ ವಿಭಾಗದ ಉಪನ್ಯಾಸಕ ಡಾ.ಸುಬ್ರಹ್ಮಣ್ಯ,ಹಾಗೂ ನಿರ್ವಹಣಾಶಾಸ್ತ್ರ ವಿಭಾಗದ ಉಪನ್ಯಾಸಕಿ ಮಂಜುಳಾದೇವಿ , ಘಟಕ ನಾಯಕರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.
ಘಟಕ ನಾಯಕ ತನುಷ್ ಸ್ವಾಗತಿಸಿದರು ಹಾಗೂ ಸಂದೇಶ್ ಅತಿಥಿಗಳನ್ನು ಪರಿಚಯಿಸಿದರು. ಘಟಕ ನಾಯಕಿ ವೀಕ್ಷಿತಾ ವಂದಿಸಿದರು ಹಾಗೂ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.