ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಸರ್ಕಲ್ ವತಿಯಿಂದ ಸ್ವಾತಂತ್ರ್ಯ ಸೌಹಾರ್ದ ಸಂಗಮ

0

ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಸರ್ಕಲ್ ವತಿಯಿಂದ ಸ್ವಾತಂತ್ರ್ಯ ಸೌಹಾರ್ದ ಸಂಗಮ ಕಾರ್ಯಕ್ರಮ ಬನ್ನೂರು ಸುನ್ನೀ ದಅವಾ ಕಛೇರಿಯಲ್ಲಿ ನಡೆಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಸರ್ಕಲ್ ಅಧ್ಯಕ್ಷ ಇಸ್ಮಾಯಿಲ್ ಹಾಜಿರವರ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮ ಉದ್ಘಾಟಿಸಿದ ಯುವ ವಿದ್ವಾಂಸ ಮಹ್‌ರೂಫ್ ಸುಲ್ತಾನಿ ಆತೂರು ಮಾತನಾಡಿ ಪ್ರವಾದಿಯವರ ವಚನವನ್ನು ಉಲ್ಲೇಖಿಸುತ್ತಾ ನೀನು ಮಾನವನಿಗೆ ಕರುಣೆಯಾಗಿ ಬಾಳಿದರೆ ಅಲ್ಲಾಹು ನಿನಗೆ ಕರುಣೆಯನ್ನು ತೋರಿಸುತ್ತಾನೆ, ದ್ವೇಷದ ಜ್ವಾಲೆಯನ್ನು ಹೃದಯದಿಂದ ಹೊರಹಾಕಿ, ಸೌಹಾರ್ದತೆಯ ಸ್ನೇಹ ಪ್ರೀತಿ ಹೃದಯದಲ್ಲಿ ಅಳವಡಿಸಿ ನಡೆದರೆ ಯಾವುದೇ ಅಶಾಂತಿ ಉಂಟಾಗಲು ಸಾಧ್ಯವಿಲ್ಲ ಎಂದು ಹೇಳಿದರು.


ಅತಿಥಿಯಾಗಿದ್ದ ಪುತ್ತೂರು ಚರ್ಚ್‌ನ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್ ಮಾತನಾಡಿ ಭಾರತದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರಲ್ಲಿ ಅತ್ಯಧಿಕ ಮುಸಲ್ಮಾನರು ಎನ್ನುವುದು ಮರೆಯುವಂತಿಲ್ಲ. ಮುಸ್ಲಿಂ ಸಮುದಾಯದ ಯುವಕರು ಉನ್ನತ ವಿದ್ಯಾರ್ಜನೆಗೈದು ಸರಕಾರಿ ಇಲಾಖೆಯಲ್ಲಿ ನೌಕರಿ ಪಡೆಯುವಂತಾಗಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್, ಪುತ್ತೂರು ಝೋನ್ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಉಸ್ತಾದ್ ಬನ್ನೂರು, ಅಬ್ದುಲ್ ರಹಮಾನ್ ಸಖಾಫಿ, ಪ್ರಮುಖರಾದ ಯೂಸುಫ್ ಗೌಸಿಯಾ ಸಾಜ, ಆದಂ ಹಾಜಿ ಪಡೀಲ್, ಅಬ್ದುಲ್ ಮಜೀದ್ ಬನ್ನೂರು, ಅಬ್ಬಾಸ್ ಹಾರಾಡಿ, ಉಮರ್ ಹಾಜಿ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಸರ್ಕಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಂಟ್ಯಾರ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here