ಪುತ್ತೂರು:ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಹತ್ತನೇ ವಾರ್ಷಿಕ ಮಹಾ ಸಮ್ಮೇಳನದ ಅಂಗವಾಗಿ ಮಿಲಾದ್ ಸೌಹಾರ್ದ ನಡಿಗೆ ಸೆ.3ರಂದು ದರ್ಬೆ ಜಂಕ್ಷನ್ನಿಂದ ಕಿಲ್ಲೆ ಮೈದಾನದ ತನಕ ನಡೆಯಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಎಲ್.ಟಿ ಅಬ್ದುಲ್ ರಜಾಕ್ ಹಾಜಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಡನ್ನೂರಿನಲ್ಲಿ ಸ್ಥಾಪನೆಗೊಂಡಿರುವ ನೂರುಲ್ ಹುದಾ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 350 ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಸಾಮಾಜಿಕ ಪ್ರಗತಿ ಮತ್ತು ಸಮುದಾಯದ ಉನ್ನತಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಪ್ರವಾದಿಯ ಮಾರ್ಗದರ್ಶನದಲ್ಲಿ ಶಾಂತಿ, ಸೌಹಾರ್ದ, ಸಹೋದರತ್ವ ಮತ್ತು ಮಾನವೀಯತೆಯನ್ನು ಬೆಳಗಿಸೋಣ ಎಂಬ ಘೋಷಣೆಯೊಂದಿಗೆ ನಡಿಗೆಯು ಸಾಗಿ ಬರಲಿದೆ. ಪ್ರವಾದಿ ಜನ್ಮದಿನಾಚರಣೆಯ ಭಾಗವಾಗಿ ಯುವ ಪೀಳಿಗೆಯ ಹೃದಯಗಳಲ್ಲಿ ಸೌಹಾರ್ದ, ಶಾಂತಿ, ಸಹೋದರತ್ವ, ಏಕತೆ ಮತ್ತು ಮಾನವೀಯತೆ ಬೆಳಕು ನೀಡುವುದು, ದೇಶದಲ್ಲಿ ಶೈಕ್ಷಣಿಕ ಪ್ರಗತಿ, ಮಾನವೀತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುವುದೇ ಸಮ್ಮೇಳದ ಉದ್ದೇಶವಾಗಿದೆ. ಮಿಲಾದ್ ಸೌಹಾರ್ದ ನಡಿಗೆ ಅಪರಾಹ್ನ ೩ ಗಂಟೆಗೆ ದರ್ಬೆ ವೃತ್ತದ ಬಳಿಯಿಂದ ಪ್ರಾರಂಭಗೊಂಡು ಕಿಲ್ಲೆ ಮೈದಾನದ ತನಕ ಸಾಗಿ ಬರಲಿ ಎಂದು ಅವರು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಉಪ್ಪಿನಂಗಡಿ ವಲಯದ ಕಾರ್ಯಾಧ್ಯಕ್ಷ ಯೂನಿಕ್ ಅಬ್ದುಲ್ ರಹಿಮಾನ್, ಪುತ್ತೂರು ವಲಯಾಧ್ಯಕ್ಷ ಅಬ್ದುಲ್ ಹಮೀದ್ ಸಾರಿಮಿ ಸಂಪ್ಯ ಹಾಗೂ ಶಫಿಕ್ ಮದನಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.