ಪುತ್ತೂರು: ನೀವು ಮಂಗಳೂರಿನ ಮೀನು ಮಾತ್ರ ತಿಂದಿದ್ದೀರಾ.ಬೇರೆ ದೇಶದ ಮೀನು ತಿನ್ನಬೇಕೆಂದಿದ್ದೀರಾ? ಪುತ್ತೂರಿನ ಮಾರುಕಟ್ಟೆಯಲ್ಲಿಯೂ ದೊರೆಯುತ್ತಿದೆ ದೂರದ ಓಮನ್ ದೇಶದ ಮೀನು.ಕರಾವಳಿಯಲ್ಲಿ ಮೀನು ಬಲು ದುಬಾರಿಯಾದ್ರೆ, ಇನ್ನೊಂದೆಡೆ ಓಮನ್ ದೇಶದ ಬಂಗುಡೆ, ಬೂತಾಯಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.ಈ ಬಾರಿ ನಮ್ಮಲ್ಲಿ ಮೀನಿನ ಉತ್ಪತ್ತಿ ಕಡಿಮೆಯಾಗಿದ್ದು, ಮಾರುಕಟ್ಟೆಗೆ ದೊಡ್ಡ ದೊಡ್ಡ ಗಾತ್ರದ ಓಮನ್ ಮೀನುಗಳು ಲಗ್ಗೆ ಇಟ್ಟಿದೆ.
ದೇಶದ ಪಶ್ಚಿಮ ಕರಾವಳಿಯಲ್ಲಿ ಈ ಬಾರಿ ಬೂತಾಯಿ ಮೀನು ವಿಪರೀತ ಕಡಿಮೆಯಾಗಿದ್ದು, ಇದನ್ನು ಸರಿದೂಗಿಸಲು ಓಮನ್‌ನಿಂದ ಬೂತಾಯಿ ಬಂದಿದೆ.ಅದಕ್ಕೂ ಸಾಕಷ್ಟು ಬೇಡಿಕೆ ಬಂದಿದೆ. ಗಾತ್ರದಲ್ಲಿ ಮಂಗಳೂರಿನ ಬೂತಾಯಿಗಿಂತ ದೊಡ್ಡದಾಗಿರುವ, ಸಾಧಾರಣ ಬಂಗುಡೆಯಷ್ಟು ಈ ಒಮಾನ್ ಬೂತಾಯಿ ತೂಗುತ್ತಿದೆ.ಸಣ್ಣ ಬಂಗುಡೆ ಮತ್ತು ದೊಡ್ಡ ಬೂತಾಯಿ ರುಚಿ ಕಡಿಮೆ. ದೊಡ್ಡ ಬಂಗುಡೆ, ಸಣ್ಣ ಬೂತಾಯಿ ರುಚಿ ಜಾಸ್ತಿ ಎಂಬ ಮಾತಿಗೆ ವ್ಯತಿರಿಕ್ತವಾಗಿ ಓಮನ್‌ನ ಬೂತಾಯಿ ಇದೆ.ಬೂತಾಯಿ ದೊಡ್ಡದಿದ್ದರೂ ರುಚಿಯಲ್ಲಿ ಮಂಗಳೂರಿನ ಬೂತಾಯಿಯಷ್ಟೆ ಇರುವುದರಿಂದ ಬೇಡಿಕೆಯೂ ಬಹಳಷ್ಟು ಹೆಚ್ಚಿದೆ.
ಓಮನ್ ದೇಶದಿಂದ ಬರುವ ಬೂತಾಯಿ, ಬಂಗುಡೆ ಮೀನುಗಳು ಗುಜರಾತ್‌ನಿಂದ ಸರಬರಾಜು ಆಗುತ್ತಿದೆ.ಈ ಮೀನುಗಳು ಬಣ್ಣ ಹಾಗೂ ಗಾತ್ರದಲ್ಲಿ ಮಂಗಳೂರು ಮೀನಿಗಿಂತ ಭಿನ್ನವಾಗಿದೆ. ಆದರೆ ರುಚಿಯಲ್ಲಿ ವ್ಯತ್ಯಾಸವಿಲ್ಲ.ಬಂಗುಡೆ ಹಾಗೂ ಬೂತಾಯಿ ಮೀನುಗಳು ಮಾರುಕಟ್ಟೆಯಲ್ಲಿದ್ದು ಈ ಮೀನುಗಳು ಮಂಗಳೂರಿನ ಮೀನಿಗಿಂತ ಗಾತ್ರದಲ್ಲಿ ದೊಡ್ಡದಾಗಿದೆ.ಬಹಳಷ್ಟು ರಚಿಕರವಾಗಿರುವ ಓಮನ್ ಮೀನುಗಳಿಗೆ ಹೊಟೇಲ್‌ಗಳಿಗೆ ಬಹಳಷ್ಟು ಬೇಡಿಕೆಯಿದೆ.ರುಚಿಯಲ್ಲಿ ಬದಲಾವಣೆಯಿಲ್ಲದ ಓಮನ್ ಮೀನುಗಳು ಮನೆ ಬಳಕೆಗೂ ಉತ್ತಮವಾಗಿದೆ ಎನ್ನುತ್ತಾರೆ ಮೀನು ವ್ಯಾಪಾರಿ ಅಬ್ದುಲ್ ಖಾದರ್.
ಓಮನ್‌ನ ಮೀನು ದೊಡ್ಡ ಗಾತ್ರ, ರುಚಿಕರವಾಗಿದ್ದು ಹೊಟೇಲ್‌ಗಳಿಗೆ ಬಹಳಷ್ಟು ಬೇಡಿಕೆಯಿದೆ.ಅದಕ್ಕಾಗಿ ಓಮನ್ ಮೀನುಗಳನ್ನು ಆಮದು ಮಾಡಲಾಗುತ್ತಿದೆ. ಇಲ್ಲಿನ ಬಂಗುಡೆ ಮೀನು ಕಿಲೋ ಒಂದರಲ್ಲಿ 8-9 ಮೀನುಗಳನ್ನು ತೂಗಿದರೆ ಓಮನ್ ಬಂಗುಡೆ ದೊಡ್ಡ ಗಾತ್ರದಿಂದ ಕೂಡಿದ್ದು ಒಂದು ಕಿಲೋದಲ್ಲಿ 3 ಮೀನುಗಳಿವೆ.ಬೂತಾಯಿ 10-15 ಕಿಲೋ ಒಂದರಲ್ಲಿರುತ್ತದೆ. ಗ್ರಾಹಕರಿಗೆ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಹೊಟೇಲ್‌ನವರು ಓಮನ್ ಮೀನುಗಳನ್ನೇ ಖರೀದಿಸುತ್ತಾರೆ.ಓಮನ್ ಬಂಗುಡೆಗೆ ಕೆ.ಜಿ ಒಂದಕ್ಕೆ 400 ಹಾಗೂ ಬೂತಾಯಿಗೆ ರೂ.250 ಇದೆ. ಮಂಗಳೂರಿನ ಬಂಗುಡೆಗೆ ರೂ.160 ಆಗಿದ್ದರೆ ಬೂತಾಯಿಗೆ ರೂ.400 ಬೆಲೆಯಿದೆ.
-ಅಬ್ದುಲ್ ಖಾದರ್, ಮೀನು ವ್ಯಾಪಾರಿ