ಪುತ್ತೂರು: ಸಹಕಾರಿ ಸಂಘವೊಂದರ ನೆಲ್ಯಾಡಿ ಶಾಖೆಯಿಂದ ಪಡೆದ ಸಾಲದ ಮರುಪಾವತಿಗೆ ನೀಡಿದ ಚೆಕ್ ಅಮಾನ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಪುತ್ತೂರು ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆಯಲ್ಲಿ ರಾಮಕುಂಜ ಗ್ರಾಮದ, ಕುಂಡಡ್ಕ, ರಮೇಶ ಎಂಬವರು ಸಾಲ ಪಡೆದುಕೊಂಡಿದ್ದು, ಸದ್ರಿ ಸಾಲದ ಮರುಪಾವತಿಗಾಗಿ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಆಫ್ ಮಂಗಳೂರು ಶಾಖೆಯ ಚೆಕ್ ನೀಡಿದ್ದು, ಸದ್ರಿ ಚೆಕ್ನ್ನು ಸಂಗ್ರಹಕ್ಕೆ ಹಾಕಿದಾಗ ಸದ್ರಿ ರಮೇಶ ರವರ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂದು ಚೆಕ್ ವಾಪಾಸು ಬಂದಿತ್ತು. ಈ ಕುರಿತು ಸಂಘದಿಂದ ಚೆಕ್ ಬಗ್ಗೆ ಪುತ್ತೂರು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಲಾಗಿತ್ತು. ತನಿಖೆ ನಡೆಸಿದ ನ್ಯಾಯಾಲಯ ವಿಚಾರಣೆಯ ವೇಳೆ ಆರೋಪಿಯ ಆರೋಪವು ಸಾಬೀತಾಗಿದ್ದು, ಆರೋಪಿಗೆ ಬಡ್ಡಿ ಮತ್ತು ಖರ್ಚು ಸಹಿತ 2 ತಿಂಗಳ ಒಳಗೆ ಆರೋಪಿಯು ಹಣ ಮರುಪಾವತಿಸಬೇಕು ಮತ್ತು ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಈ ಪ್ರಕರಣದಲ್ಲಿ ದೂರುದಾರರ ಪರ ವಕೀಲರಾದ ಸಂಜಯ್ ಡಿ, ಜಯಪ್ರಕಾಶ್ ಬನ್ನೂರು, ಚಂದ್ರಾವತಿ ಟಿ, ಪ್ರಮೀಳಾ ಎಸ್, ಮತ್ತು ಸುರೇಂದ್ರ ಡಿ ವಾದಿಸಿದರು.