ಆಲಂಕಾರು: ಜ್ಞಾನಸುಧಾ ವಿದ್ಯಾಲಯ, ಆಲಂಕಾರು ಇದರ ವತಿಯಿಂದ ಗ್ರಾಮೀಣ ಕಂಪ್ಯೂಟರ್ ತರಬೇತಿ ಅಕಾಡೆಮಿಯ ಸಹಯೋಗದೊಂದಿಗೆ ಆರಂಭಗೊಂಡಿರುವ ಕಂಪ್ಯೂಟರ್ ತರಬೇತಿ ಕೇಂದ್ರ, ಟ್ಯೂಷನ್ ಸೆಂಟರ್ ಹಾಗೂ ಶ್ರೀ ದುರ್ಗಾ ರಿಯಲ್ ಎಸ್ಟೇಟ್ ಆಲಂಕಾರು ಸಿ.ಎ.ಬ್ಯಾಂಕ್ ಸಮೀಪವಿರುವ ಲಕ್ಷ್ಮಿರಾಮ ಕಾಂಪ್ಲೆಕ್ಸ್ನ ನೆಲಮಹಡಿಯಲ್ಲಿ ಸೆ.5ರಂದು ಶುಭಾರಂಭಗೊಂಡಿತು.
ನೂತನ ಕೊಠಡಿಯನ್ನು ವಿಶ್ರಾಂತ ಪ್ರಾಂಶುಪಾಲ ಕೆ.ವಿಠಲ ರೈ ಕೊಣಾಲುಗುತ್ತು, ಕಂಪ್ಯೂಟರ್ ಕೇಂದ್ರವನ್ನು ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಕೆ.ಚಂದ್ರಶೇಖರ ಹಾಗೂ ಟ್ಯೂಷನ್ ಸೆಂಟರನ್ನು ಪುತ್ತೂರು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲ ಕೆ.ವಿಠಲ ರೈ ಕೊಣಾಲುಗುತ್ತು ಅವರು, 5 ವರ್ಷದ ಹಿಂದೆ ಆಲಂಕಾರು ದುರ್ಗಾ ಟವರ್ಸ್ನಲ್ಲಿ ಆರಂಭಗೊಂಡಿದ್ದ ಜ್ಞಾನಸುಧಾ ವಿದ್ಯಾಲಯ ಈಗ ಲಕ್ಷ್ಮಿರಾಮ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡಿದೆ. ಈ ಸಂಸ್ಥೆಯ ಕಡಬ ಶಾಖೆಯಲ್ಲಿ ಸ್ಮಾರ್ಟ್ಕ್ಲಾಸ್ ತರಗತಿ ಆರಂಭವಾಗಿದೆ. ಸಂಸ್ಥೆಯ ಸಂಚಾಲಕ ಬಿ.ಎಲ್.ಜನಾರ್ದನ್ರವರು ಜೇಸಿಯಲ್ಲೂ ಗುರುತಿಸಿಕೊಂಡು ಅದರ ಬೆನ್ನೆಲುಬು ಆಗಿದ್ದಾರೆ. ಗ್ರಾಮೀಣ ಪ್ರದೇಶದ ಹೆಚ್ಚಿನ ಮಕ್ಕಳು ಬಡವರು. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಂಪ್ಯೂಟರ್ ಶಿಕ್ಷಣ, ಟ್ಯೂಷನ್ ಸೆಂಟರ್ ಆರಂಭಿಸಿದ್ದಾರೆ. ಈ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಕೆ.ಚಂದ್ರಶೇಖರ ಅವರು ಮಾತನಾಡಿ, ಬಿ.ಎಲ್.ಜನಾರ್ದನ ಅವರಲ್ಲಿರುವ ಛಲ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವವರಿಗೆ ಯಾವ ರೀತಿಯಲ್ಲಾದರೂ ಲಾಭ ಸಿಗುತ್ತದೆ. ಆರ್ಥಿಕವಾಗಿ ಅಲ್ಲದಿದ್ದರೂ ಜನ ಬೆಂಬಲ ಸಿಗಲಿದೆ. ಜನರ್ದಾನ ಬಿ.ಎಲ್.ಅವರು ಶಿಕ್ಷಣದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ಅವರ ಪತ್ನಿ ಸರಿತಾ ಅವರು ಅತ್ಯುತ್ತಮ ಶಿಕ್ಷಕಿ. ಸರಕಾರಿ ಸೇವೆಯಲ್ಲಿರುತ್ತಿದ್ದರೆ ಅವರಿಗೆ ಜಿಲ್ಲಾ, ರಾಜ್ಯ ಪ್ರಶಸ್ತಿಯೂ ಬರುತ್ತಿತ್ತು. ಇವರಿಬ್ಬರ ನೇತೃತ್ವದಲ್ಲಿ ನಡೆಯುವ ಈ ವಿದ್ಯಾಸಂಸ್ಥೆ ಹಾಗೂ ಇಲ್ಲಿ ಕಲಿತ ವಿದ್ಯಾರ್ಥಿಗಳು ಅತ್ಯುನ್ನತ ಮಟ್ಟಕ್ಕೆ ಹೋಗಲಿ ಎಂದು ಹಾರೈಸಿದರು.
ಪುತ್ತೂರು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಮಾತನಾಡಿ, ದೇವರ ಮೇಲೆ ನಂಬಿಕೆಯಿಟ್ಟು ಜನಾರ್ದನ ಬಿ.ಎಲ್.ಅವರು ಜ್ಞಾನಸುಧಾ ವಿದ್ಯಾಕೇಂದ್ರ ಆರಂಭಿಸಿದ್ದೇರೆ. ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ನೀಡುವ ಮೂಲಕ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.
ಅತಿಥಿಯಾಗಿದ್ದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ಮಾತನಾಡಿ, ವ್ಯವಹಾರದಲ್ಲಿ ಪ್ರಾಮಾಣಿಕತೆ ಹಾಗೂ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ಜನಾರ್ದನ ಅವರು ಆರಂಭಿಸಿರುವ ತರಬೇತಿ ಕೇಂದ್ರ ಹಾಗೂ ರಿಯಲ್ ಎಸ್ಟೇಟ್ ಉದ್ಯಮ ಯಶಸ್ವಿಯಾಗಿ ಮುನ್ನಡೆಯಲಿ ಎಂದರು. ಇನ್ನೋರ್ವ ಅತಿಥಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಮಾತನಾಡಿ, ಜನಾರ್ದನ ಅವರು ಛಲವಾದಿ. ಸ್ವಂತ ಸಾಧನೆ ಮಾಡಬೇಕೆಂಬ ನಿಟ್ಟಿನಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ, ಕೋಚಿಂಗ್ ಸೆಂಟರ್ ಆರಂಭಿಸಿದ್ದಾರೆ. ಅವರಿಗೆ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವರು ಯಶಸ್ಸು ಕರುಣಿಸಲಿ ಎಂದರು. ಪೂವಪ್ಪ ನಾಯ್ಕ್ ಶಾಂತಿಗುರಿ ಮಾತನಾಡಿ, ದೀಪ ಪ್ರಜ್ವಲಿಸಿದಂತೆ ಜ್ಞಾನಸುಧಾ ವಿದ್ಯಾಸಂಸ್ಥೆ ಉತ್ತರೋತ್ತರ ಬೆಳಗಲಿ ಎಂದು ಹಾರೈಸಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಚಾಲಕ ಬಿ.ಎಲ್.ಜನಾರ್ದನ ಅವರು, ಆಲಂಕಾರು ಶ್ರೀದುರ್ಗಾ ಟವರ್ಸ್ನಲ್ಲಿದ್ದ ಜ್ಞಾನಸುಧಾನ ವಿದ್ಯಾಲಯ ಲಕ್ಷ್ಮಿರಾಮ ಕಾಂಪ್ಲೆಕ್ಸ್ಗೆ ಸ್ಥಳಾಂತರಿಸಿದ್ದೇವೆ. ಇಲ್ಲಿ ಗ್ರಾಮೀಣ ಕಂಪ್ಯೂಟರ್ ತರಬೇತಿ ಅಕಾಡೆಮಿಯ ಸಹಯೋಗದೊಂದಿಗೆ ಕಂಪ್ಯೂಟರ್ ತರಬೇತಿ ಕೇಂದ್ರ, ಸರಕಾರದ ನೋಂದಾಯಿತ ಟ್ಯೂಷನ್ ಸೆಂಟರ್ ಕಾರ್ಯಾರಂಭಿಸಲಿದೆ. ಜೊತೆಗೆ ಶ್ರೀ ದುರ್ಗಾ ರಿಯಲ್ ಎಸ್ಟೇಟ್ ಆರಂಭಿಸಲಾಗಿದೆ. ಈ ಹಿಂದಿನಂತೆ ಆಲಂಕಾರಿನ ಜನತೆ ಸಹಕಾರ ನೀಡುವಂತೆ ಕೋರಿದರು.
ನಿವೃತ್ತ ಮುಖ್ಯಶಿಕ್ಷಕ ನಾಗಪ್ಪ ಗೌಡ ಮರುವಂತಿಲ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ, ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ನಿರ್ದೇಶಕ ಉದಯ ಸಾಲ್ಯಾನ್ ಮಾಯಿಲ್ಗ, ಮಾಜಿ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆಗುತ್ತು, ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈ ಮನವಳಿಕೆಗುತ್ತು, ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಾಧವ ಪೂಜಾರಿ, ನಿರ್ದೇಶಕ ಮುರಳಿ ಬಲೆಂಪೋಡಿ, ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಜನಾರ್ದನ ಕದ್ರ, ಮುಖ್ಯಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್ ಕುಮಾರ್ ಅಗತ್ತಾಡಿ, ಆಲಂಕಾರು ಜೆಸಿಐ ಅಧ್ಯಕ್ಷ ಗುರುರಾಜ್ ರೈ ಕೇವಳ, ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕ ಶಿವಪ್ರಸಾದ್ ನೂಚಿಲ, ಪೆರಾಬೆ ಗ್ರಾ.ಪಂ.ಸದಸ್ಯೆ ಮಮತಾ ಅಂಬರಾಜೆ, ಆಲಂಕಾರು ಶ್ರೀದುರ್ಗಾಂಬಾ ಪ.ಪೂ.ಕಾಲೇಜು ಆಡಳಿತಾಧಿಕಾರಿ ಶ್ರೀಪತಿ ರಾವ್, ಆಲಂಕಾರು ಶ್ರೀದುರ್ಗಾಟವರ್ಸ್ ಮಾಲಕ ರಾಧಾಕೃಷ್ಣ ರೈ ಪರಾರಿಗುತ್ತು, ಲಕ್ಷ್ಮಿರಾಮ ಕಾಂಪ್ಲೆಕ್ಸ್ ಮಾಲಕರಾದ ರಾಮಣ್ಣ ಗೌಡ, ಗೋಪಾಲ ಗೌಡ, ಶಿಕ್ಷಕ ಮಹೇಶ್ ಪಾಟಾಳಿ, ಹೇಮಾ ವಿಠಲ ರೈ, ಗುರುಕಿರಣ್ ಶೆಟ್ಟಿ ಬಾಲಾಜೆ, ರವಿ ಮಾಯಿಲ್ಗ ಮತ್ತಿತರರು ಆಗಮಿಸಿ ಶುಭಹಾರೈಸಿದರು. ಸರಿತಾಜನಾರ್ದನ ವಂದಿಸಿದರು. ಸಿಬ್ಬಂದಿ ವೀಕ್ಷಿತಾ ಸಹಕರಿಸಿದರು.