60 ಕೋಟಿ ರೂ. ವೆಚ್ಚದಲ್ಲಿ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರಗೊಳಿಸಿ ಬ್ರಹ್ಮಕಲಶೋತ್ಸವ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ 24 ಮಂದಿಯ ಜೀರ್ಣೋದ್ಧಾರ ಸಮಿತಿ ರಚನೆ ಮಾಡಿದ್ದೇವೆ. ಮಾಸ್ಟರ್ ಪ್ಲಾನ್ ಮೂಲಕ 60 ಕೋಟಿ ರೂ.ವೆಚ್ಚದಲ್ಲಿ ಮುಂದಿನ 2 ವರ್ಷದೊಳಗೆ ದೇವಸ್ಥಾನದ ಜೀರ್ಣೋದ್ದಾರ ಮಾಡಿ ದೇವರಿಗೆ ಬ್ರಹ್ಮಕಲಶೋತ್ಸವ ಮಾಡುತ್ತೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ದೇವಾಲಯದ ಆಡಳಿತ ಕಛೇರಿಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಶಾಸಕರು, ದೇವಾಲಯದ ಪಕ್ಕದ ರಸ್ತೆಗೆ 3 ಕೋಟಿ ರೂ.ಅನುದಾನ ಇಟ್ಟಿದ್ದೇವೆ. ನಗರಸಭೆಯ 3 ಕೋಟಿ 20 ಲಕ್ಷ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿ ಮಾಡಲು ಡಿಪಿಆರ್ ಮಾಡುತ್ತೇವೆ. ಕೆರೆಯ ಸುತ್ತಮುತ್ತ ಅಭಿವೃದ್ಧಿಗಾಗಿ ಪುಡಾದಿಂದ 2 ಕೋಟಿ ರೂ. ಅನುದಾನ ಇಟ್ಟಿದ್ದೇವೆ. ಒಟ್ಟು 5 ಕೋಟಿ 20 ಲಕ್ಷ ರೂ. ಅನುದಾನದಲ್ಲಿ ಕೆರೆ, ಕೆರೆಯ ಸುತ್ತಮುತ್ತ ಅಭಿವೃದ್ಧಿ ಹಾಗೂ ದೇವಸ್ಥಾನದ ಹೊರಾಂಗಣದ ಅಭಿವೃದ್ಧಿ ಮಾಡುತ್ತೇವೆ. ದೇವಸ್ಥಾನದ ಸಮೀಪದ ರಾಜಕಾಲುವೆಯ ತಡೆಗೋಡೆಗೆ 2 ಕೋಟಿ ರೂ.ಅನುದಾನ ಈಗಾಗಲೇ ಬಂದಿದೆ. ಇನ್ನೂ 2 ಕೋಟಿ ರೂ. ಅನುದಾನ ಹೆಚ್ಚಳಗೊಳಿಸಿ ಆಗಿದೆ. 3 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದಿಂದ ಸ್ಮಶಾನದವರೆಗೆ 30 ಅಡಿ ಅಗಲದ ರಸ್ತೆ ನಿರ್ಮಾಣವಾಗಲಿದೆ. ನಗರಸಭೆಯ 20 ಕೋಟಿ ರೂ. ಅನುದಾನದಲ್ಲಿ ರಸ್ತೆಯೊಂದಿಗೆ ಒಳಚರಂಡಿ ವ್ಯವಸ್ಥೆಗೆ ಕಾಮಗಾರಿ ಮಾಡಿ ದೇವಸ್ಥಾನದ ತ್ಯಾಜ್ಯಗಳನ್ನು ಇದಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.


ಪಕ್ಷಾತೀತವಾಗಿ ಜೀರ್ಣೋದ್ಧಾರ ಸಮಿತಿ
ದೇವಸ್ಥಾನದ ಜೀರ್ಣೋದ್ಧಾರ ಕೆಲಸಕ್ಕಾಗಿ ಉದ್ಯಮಿಗಳನ್ನು ಹಾಗೂ ಪುತ್ತೂರಿನಲ್ಲಿರುವ ದೊಡ್ಡ ಉದ್ಯಮಿಗಳನ್ನು ಜೀರ್ಣೋದ್ಧಾರ ಸಮಿತಿಯಲ್ಲಿ ಸೇರಿಸಿದ್ದೇವೆ. ಪಕ್ಷಾತೀತವಾಗಿ ಒಟ್ಟು 24 ಮಂದಿಯನ್ನು ಸೇರಿಸಿ ಸಮಿತಿ ರಚಿಸಲಾಗಿದೆ. ಜೀರ್ಣೋದ್ಧಾರ ಸಮಿತಿಗೆ ಮಾಸ್ಟರ್ ಪ್ಲಾನ್ ತೋರಿಸಿ ಸಮಿತಿಯ ಮುಖಾಂತರ 60 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕೆಲಸಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಅವರ ಸಲಹೆ, ಸಹಕಾರ ತೆಗೆದುಕೊಳ್ಳಲಾಗುತ್ತದೆ. ಜೀರ್ಣೋದ್ಧಾರ ಸಮಿತಿಯಿಂದ ಫಂಡ್‌ರೈಸ್ ಮಾಡಲಾಗುವುದು ಹಾಗೂ ಸರಕಾರದ ಅನುದಾನ ಪಡೆದುಕೊಂಡು ಜೀರ್ಣೋದ್ದಾರ ಮಾಡುತ್ತೇವೆ ಎಂದರು.


ಒಂದೂವರೆ ತಿಂಗಳಿನಲ್ಲಿ ಜೀರ್ಣೋದ್ಧಾರಕ್ಕೆ ಚಾಲನೆ
ಮಾಸ್ಟರ್ ಪ್ಲಾನ್ ಅನುಮೋದನೆ ಬಳಿಕ ಜೀರ್ಣೋದ್ಧಾರ ಸಮಿತಿ ಸಭೆ ನಡೆಯಲಿದೆ. ಬಳಿಕ 10 ದಿವಸದ ಒಳಗೆ ಸಾರ್ವಜನಿಕ ಭಕ್ತರ ಸಭೆ ಕರೆಯುತ್ತೇವೆ. ಈ ಸಭೆಯ ಮೂಲಕ ರಥ ಮಂದಿರ,ನಾಗನಕಟ್ಟೆ, ಅಯ್ಯಪ್ಪ ಮಂದಿರ, ಕಂಬಳದ ಕೆರೆ ಸ್ಥಳಾಂತರಿಸುವ ಕೆಲಸ ಮಾಡುತ್ತೇವೆ. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದೇವರಿಗೆ ತೊಂದರೆಯಾಗುತ್ತಿರುವ ಸಭಾಭವನವನ್ನು ತೆಗೆಯಲು ಸಾರ್ವಜನಿಕರ ಸಭೆಯಲ್ಲಿ ಚರ್ಚೆ ನಡೆಸಿ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಸಭಾಭವನ ತೆಗೆಯುವ ಕೆಲಸ ಮಾಡುತ್ತೇವೆ. ಮುಂದಿನ ಒಂದೂವರೆ ತಿಂಗಳಿನಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆಗೆ ಚಾಲನೆ ನೀಡುವ ಕೆಲಸ ಮಾಡುತ್ತೇವೆ ಎಂದರು.


ವೀರಮಂಗಲದಲ್ಲಿ ದೇವರ ಅವಭೃತ ಸ್ಥಳದ ಅಭಿವೃದ್ಧಿ
ವೀರಮಂಗಲದಲ್ಲಿ ದೇವರು ಸ್ನಾನಕ್ಕೆ ಹೋಗುವಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು. ದೇವರ ಸ್ನಾನದ ಜೊತೆಗೆ ಸುಮಾರು ೩೦ ಸಾವಿರ ಜನ ಸ್ನಾನಕ್ಕೆ ಸೇರುವ ಹಾಗೆ ಆಗಬೇಕು ಎಂಬ ಚಿಂತನೆ ಇದೆ.ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈ ಕೆಲಸ ಮಾಡುತ್ತೇವೆ. ಇದಕ್ಕೆಲ್ಲಾ ಸಾರ್ವಜನಿಕರ ಸಹಕಾರ ಬೇಕಾಗುತ್ತದೆ.ಸರಕಾರದಿಂದ ಕೂಡ ಅನುದಾನ ತರಲು ಪ್ರಯತ್ನ ಮಾಡುತ್ತೇನೆ. ಒಟ್ಟಿನಲ್ಲಿ ದೇವರ ಜೀರ್ಣೋದ್ಧಾರ ಕೆಲಸವನ್ನು ೨ ವರ್ಷದೊಳಗೆ ಪೂರ್ತಿ ಮಾಡಿ ಬ್ರಹ್ಮಕಲಶ ಮಾಡುತ್ತೇವೆ ಎಂದು ಶಾಸಕರು ಹೇಳಿದರು.


ಪ್ರಸಾದಂ ಯೋಜನೆ ಇಲ್ಲ
ಕೇಂದ್ರ ಸರಕಾರ ಪ್ರಸಾದಂ ಯೋಜನೆಯಲ್ಲಿ ದೇವಸ್ಥಾನಗಳಿಗೆ 100 ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೂ ಈ ಯೋಜನೆಯಲ್ಲಿ 80 ಕೋಟಿ ರೂ. ಅನುದಾನಕ್ಕೆ ಡಿಪಿಆರ್ ಮಾಡಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಕೇಂದ್ರ ಸರಕಾರದ ಅಧಿಕಾರಿಗಳು ಪ್ರಸಾದಂ ಸ್ಕೀಂ ಇಲ್ಲ. ಅದು ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ನಮ್ಮ ಸಂಸದರೊಂದಿಗೆ ಚರ್ಚೆ ಮಾಡಿದ್ದೇವೆ,ಅವರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.ಮುಂದಿನ ದಿನಗಳಲ್ಲಿ ಪ್ರಸಾದಂ ಸ್ಕೀಂ ಬಂದರೆ ನಮಗೆ ಅನುಕೂಲವಾಗುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ದೇವಾಲಯದ ಜೀರ್ಣೋದ್ಧಾರ ಮಾಡಲು ಮಾಸ್ಟರ್ ಪ್ಲಾನ್ ಅನುಮೋದನೆ ಸಿಗಬೇಕು. ಬಳಿಕ ಜೀರ್ಣೋದ್ಧಾರ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಎಲ್ಲಾ ಕೆಲಸಗಳು ಮಾಸ್ಟರ್ ಪ್ಲಾನ್ ಮುಖಾಂತರ ಮಾಡಲಾಗುವುದು. ಸಭಾಭವನವನ್ನು ಸಾರ್ವಜನಿಕರ ಅಭಿಪ್ರಾಯ ಪಡೆದು ತೆಗೆಯಲಾಗುವುದು. ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ದೇವಸ್ಥಾನದ ಅಕೌಂಟ್ ಮುಖಾಂತರವೇ ನಡೆಯಬೇಕು. ದೇವಸ್ಥಾನಕ್ಕೆ ಪಡೆದುಕೊಂಡ ನೆಲ್ಲಿಕಟ್ಟೆಯಲ್ಲಿರುವ 1 ಎಕರೆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿ ಅದರಲ್ಲಿ ದೂರದೂರಿಂದ ಆಗಮಿಸುವ ಭಕ್ತರಿಗೆ ಕನಿಷ್ಠ ದರದಲ್ಲಿ ರೂಮ್ ದೊರೆಯುವ ವ್ಯವಸ್ಥೆ ಮಾಡುತ್ತೇವೆ. ದೇವಾಲಯದ ಗದ್ದೆಯ ಹೊರಗೆ 280 ಅಡಿ ಎತ್ತರದಲ್ಲಿ ಹಾರುವ ರಾಷ್ಟ್ರಧ್ವಜ ಹಾಗೂ ಧ್ವಜಸ್ಥಂಭ ನಿರ್ಮಾಣ ಆಗುತ್ತದೆ. ದೇವಸ್ಥಾನಕ್ಕೆ ಪರಿಧಿ ಮಾಡಿ ದೇವಸ್ಥಾನಕ್ಕೆ ಭದ್ರತೆ ಮಾಡಲಾಗುತ್ತದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.


ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪುಡಾ ಅಧ್ಯಕ್ಷ ಅಮಲ ರಾಮಚಂದ್ರ ಭಟ್, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಈಶ್ವರ್ ಬೇಡೆಕರ್, ದಿನೇಶ್ ಪಿ.ವಿ., ವಿನಯ ಸುವರ್ಣ, ಸುಭಾಷ್ ರೈ ಬೆಳ್ಳಿಪ್ಪಾಡಿ, ನಳಿನಿ ಪಿ.ಶೆಟ್ಟಿ, ಕೃಷ್ಣವೇಣಿ, ಮೆನೇಜರ್ ಹರೀಶ್ ಶೆಟ್ಟಿ, ಅರ್ಚಕರುಗಳಾದ ವಸಂತ್ ಕೆದಿಲಾಯ, ವಿ.ಎಸ್.ಭಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕನಿಷ್ಕ ಮುಂತಾದವರು ಉಪಸ್ಥಿತರಿದ್ದರು.

ಅಧಿಕಾರಿಯಲ್ಲಿ ಕೇಳಿ ಠಾಣೆ ಸ್ಥಳಾಂತರಿಸುವುದಲ್ಲ
ಇಲ್ಲಿನ ಮಹಿಳಾ ಪೊಲೀಸ್ ಠಾಣೆ ಕಟ್ಟಡಕ್ಕೆ ಲೈಸನ್ಸ್ ಇಲ್ಲ. ಸೆಟ್ ಬ್ಯಾಕ್ ಇಲ್ಲ, ಇವತ್ತಿನವರೆಗೆ ಸರಕಾರಕ್ಕೆ ತೆರಿಗೆ ಕಟ್ಟಿಲ್ಲ. ಪೊಲೀಸ್ ಠಾಣೆ ಕಟ್ಟಡವೇ ಅಕ್ರಮವಾಗಿದೆ. ಠಾಣೆಯಲ್ಲಿ 3 ಸೆಂಟ್ಸ್ ಜಾಗ ಮಾತ್ರ ಇರುವುದು. ಉಳಿದೆಲ್ಲವೂ ದೇವಸ್ಥಾನದ ಜಾಗವಾಗಿದೆ. ಗೃಹಮಂತ್ರಿಯವರ ಜತೆಗೆ ಚರ್ಚೆ ಮಾಡಿ ಠಾಣೆಗೆ 9 ಸೆಂಟ್ಸ್ ಜಾಗ ಬೇರೆ ಕಡೆ ನೀಡಲಾಗಿದೆ. ಯಾವನೋ ಒಬ್ಬ ಅಧಿಕಾರಿ ವರದಿ ಹಾಕಿದ್ದಾನೆ ಎಂದ ಮಾತ್ರಕ್ಕೆ ಠಾಣೆ ಸ್ಥಳಾಂತರಿಸದೇ ಇರಲು ಸಾಧ್ಯವಿಲ್ಲ. ಕೋಳಿಯಲ್ಲಿ ಕೇಳಿ ಸಾಂಬಾರು ಕಡೆಯವುದಲ್ಲ. ಅಧಿಕಾರಿಯಲ್ಲಿ ಕೇಳಿ ಠಾಣೆ ಸ್ಥಳಾಂತರಿಸುವುದಲ್ಲ. ಸ್ಥಳಾಂತರಿಸಲು ನಾವು ತೀರ್ಮಾನ ಮಾಡುವುದು ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ಪಡೆಯೋದು ಯಾವಾಗ?
ಮಾಸ್ಟರ್ ಪ್ಲಾನ್ ಬದಲಾವಣೆ ಮಾಡಿ ಅನುಮೋದನೆ ತರಲು ಹೇಳಿದ್ದೆ. 2 ವರ್ಷದೊಳಗೆ ದೇವಸ್ಥಾನದ ಜೀರ್ಣೋದ್ಧಾರ ಆಗಬೇಕು ಎಂದು ಹೇಳಿದ ಶಾಸಕರು, ಮಾಸ್ಟರ್ ಪ್ಲಾನ್ ಅನುಮೋದನೆ ವಿಚಾರ ಏನಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನು ಹಾಗೂ ದೇವಾಲಯದ ಆಡಳಿತಾಧಿಕಾರಿಯನ್ನು ಕೇಳಿದರು. ಜೀರ್ಣೋದ್ಧಾರ ಸಮಿತಿ ಲಿಸ್ಟ್ ಮಾಡಿ ಒಂದೂವರೆ ತಿಂಗಳಾಗಿದೆ. ಏನು ಮಾಡಿದ್ದೀರಿ? ಜೀರ್ಣೋದ್ಧಾರ ಸಮಿತಿಯ ಸಭೆ ಯಾಕೆ ಮಾಡಲಿಲ್ಲ? ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ತರುವುದು ಯಾವಾಗ? ಡಿಸಿಯಲ್ಲಿ ಹೋಗಿ ಸರಕಾರಕ್ಕೆ ಹೋಗಿ ಬರುವುದು ಯಾವಾಗ? ಗ್ರಾಮ ಗ್ರಾಮದಲ್ಲೇ ಮೀಟಿಂಗ್ ಮಾಡಿದರೆ ಸಾಲದು. ಮಾಸ್ಟರ್ ಪ್ಲಾನ್ ಅನುಮೋದನೆಯೂ ಆಗಬೇಕಾಗಿದೆ ಎಂದು ಅಧ್ಯಕ್ಷರಿಗೆ ಹಾಗೂ ಅಧಿಕಾರಿಗೆ ಸೂಚಿಸಿದರು. ನಿಮ್ಮ ಸಮಿತಿ ಬಂದು 6 ತಿಂಗಳು ಕಳೆದಿದೆ. ಇನ್ನೂ ಎರಡೂವರೆ ವರ್ಷ ಇದೆ. ನೀವು ದೇವಾಲಯದ ಬ್ರಹ್ಮಕಲಶ ಮಾಡುವುದು ಯಾವಾಗ? ನೀವು ಮುಂದೆ ಹೋಗಬೇಕಾದರೆ ಮಾಸ್ಟರ್ ಪ್ಲಾನ್ ಅನುಮೋದನೆಯಾಗಬೇಕು. 2 ವರ್ಷದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಆಗಬೇಕು. ಈ ನಿಟ್ಟಿನಲ್ಲಿ ಒಂದು ತಿಂಗಳಿನೊಳಗೆ ಮಾಸ್ಟರ್ ಪ್ಲ್ಯಾನ್‌ಗೆ ಅನುಮೋದನೆ ಪಡೆದು ತರಬೇಕು ಎಂದು ಅಂತಿಮ ಗಡುವು ನೀಡಿದರು.


ಮಂಗಳೂರು ವಿಮಾನ ನಿಲ್ದಾಣದ ರನ್ ವೇ| ವಿಸ್ತರಣೆಗೆ ಅಧಿವೇಶನದಲ್ಲಿ ಗಮನ ಸೆಳೆದಿದ್ದೆ
ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2.6 ಕಿ.ಮೀ.ರನ್ ವೇ ಇದೆ. ಯಾವುದೇ ಬೋಯಿಂಗ್ ದೊಡ್ಡ ವಿಮಾನಗಳು ಲ್ಯಾಂಡಿಂಗ್ ಆಗಬೇಕಾದರೆ 3.2 ಕಿ.ಮೀ.ರನ್ ವೇ ಬೇಕಾಗುತ್ತದೆ. ಈ ಬಗ್ಗೆ ನಾನು ಅಧಿವೇಶನದಲ್ಲಿ ಮಾತನಾಡಿದ್ದೆ. ಸುರಕ್ಷತೆ ದೃಷ್ಟಿಯಿಂದ ರನ್‌ವೇ ವಿಸ್ತರಣೆ ಮಾಡಬೇಕು ಎಂದಿದ್ದೆ. ಇದೀಗ ರಾಜ್ಯ ಸರಕಾರ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ಈ ಕುರಿತು ಪತ್ರ ಬರೆದಿದೆ. ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಇದಕ್ಕೆ ಬೇಕಾದ 50 ಕೋಟಿ ರೂ. ಅನುದಾನಕ್ಕಾಗಿ ಅದಾನಿ ಕಂಪೆನಿಗೆ ಮನವಿ ಮಾಡಿತ್ತು. ಅದಾನಿ ಕಂಪೆನಿ 32 ಎಕರೆ ಜಾಗ ಪಡೆದುಕೊಳ್ಳಲು 50 ಕೋಟಿ ರೂ. ಅನುದಾನ ನೀಡುತ್ತೇವೆ ಎಂದು ಒಪ್ಪಿಗೆ ನೀಡಿದೆ ಎಂದು ಈ ಸಂದರ್ಭದಲ್ಲಿ ಶಾಸಕರು ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರಕಾರ ಎಚ್ಚೆತ್ತುಕೊಂಡು ದ.ಕ.ಜಿಲ್ಲಾಽಕಾರಿ ಮುಖಾಂತರ ಕೊಡುವಂತಹ ಕೆಲಸ ಮಾಡುತ್ತದೆ ರನ್ ವೇ ವಿಸ್ತರಣೆಯಾಗಿ ದೊಡ್ಡ ದೊಡ್ಡ ವಿಮಾನ ಲ್ಯಾಂಡ್ ಆಗಲು ಸಹಕಾರಿಯಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.


ತಹಶೀಲ್ದಾರ್ ಜ್ವರದ ಕಾರಣ ರಜೆಯಲ್ಲಿದ್ದಾರೆ
ಪುತ್ತೂರು ತಹಶೀಲ್ದಾರ್ ಹುಷಾರಿಲ್ಲದ ಕಾರಣ 3 ದಿನ ರಜೆ ಹಾಕಿದ್ದಾರೆ. ನನಗೆ ಕರೆ ಮಾಡಿ ಈ ಕುರಿತು ಮಾಹಿತಿ ನೀಡಿದ್ದಾರೆ. ಸೋಮವಾರ ಕಚೇರಿಗೆ ಬರುತ್ತಾರೆ. ಲೋಕಾಯುಕ್ತ ಪ್ರಕರಣದಲ್ಲಿ ಅವರ ಮೇಲೆ ಎಫ್.ಐ.ಆರ್ ಆಗಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಶಾಸಕರು ಮಾಹಿತಿ ನೀಡಿದರು. ತಹಶೀಲ್ದಾರ್ ಅವರು ಕಛೇರಿಗೆ ಆಗಮಿಸಿಲ್ಲ. ಲೋಕಾಯುಕ್ತ ತನಿಖೆಗೂ ಹಾಜರಾಗಿಲ್ಲ ಎಂದು ಮಾಧ್ಯಮದವರು ಶಾಸಕರ ಗಮನ ಸೆಳೆದರು. ಭ್ರಷ್ಟರಿಗೆ ಇದು ಎಚ್ಚರಿಕೆಯಾಗಿದೆ. ಲೂಟಿ ಮಾಡುವ ಅಧಿಕಾರಿಗಳಿಗೆ ಕರೆಗಂಟೆಯಾಗಿದೆ ಎಂದು ಶಾಸಕರು ಹೇಳಿದರು.

LEAVE A REPLY

Please enter your comment!
Please enter your name here