ಉಪ್ಪಿನಂಗಡಿ: ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ಹಾಲಿನ ವ್ಯಾಪಾರದಿಂದ 12,04,691.32 ರೂ. ಲಾಭ ಗಳಿಸಿದ್ದು, ಪಶು ಆಹಾರ, ಲವಣ ಮಿಶ್ರಣಗಳ ಮಾರಾಟದಿಂದ 49,924.32 ರೂ. ಹಾಗೂ ಇತರೆ ಆದಾಯಗಳಿಂದ 4,13,421.50 ಲಾಭ ಗಳಿಸಿದೆ. ಹೀಗೆ ಎಲ್ಲಾ ವ್ಯವಹಾರಗಳಿಂದ ಸಂಘವು 7,92,063.56 ರೂ. ನಿವ್ವಳ ಲಾಭ ಗಳಿಸಿದೆ. ಬಂದ ಲಾಭಾಂಶದಲ್ಲಿ ಶೇ.23.5 ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಸದಾನಂದ ಶೆಟ್ಟಿ ಕಿಂಡೋವು ತಿಳಿಸಿದರು.
ಇಲ್ಲಿನ ಶ್ರೀ ದುರ್ಗಾ ಸಭಾಭವನದಲ್ಲಿ ನಡೆದ 2024-25ನೇ ಸಾಲಿನ ಸಂಘದ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಂಘವು 32 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, 2024-25ನೇ ಸಾಲಿನಲ್ಲಿ 1,95,19,243,.34 ರೂ. ವ್ಯವಹಾರ ನಡೆಸಿ ಪ್ರಗತಿಯನ್ನು ಸಾಧಿಸಿದೆ. 4,02,620.23 ಲೀ. ಹಾಲನ್ನು ರೈತರಿಂದ ಖರೀದಿ ಮಾಡಿ ಸದಸ್ಯರಿಗೆ ಗುಣಮಟ್ಟದ ಆಧಾರದ ಮೇಲೆ ಪ್ರತಿ ಲೀ.ಗೆ 36.37 ರೂ.ವನ್ನು ಪಾವತಿಸಲಾಗಿದೆ. ಪ್ರಸ್ತುತ ಸಂಘದಲ್ಲಿ ದಿನವಹಿ 1,150 ಲೀ. ಹಾಲಿನ ಸಂಗ್ರಹವಾಗುತ್ತದೆ. ವರ್ಷಾಂತ್ಯಕ್ಕೆ 414 ಸದಸ್ಯರ ಸಂಖ್ಯೆಯಿದ್ದು, 87,300 ರೂ. ಪಾಲು ಬಂಡವಾಳವಿದೆ. ಅಡಿಟ್ ವರ್ಗೀಕರಣದಲ್ಲಿ ಸಂಘವು ‘ಎ’ ಗ್ರೇಡ್ ಪಡೆದಿದೆ. ಸದಸ್ಯರ ರಾಸುಗಳಿಗೆ ಪಶು ವೈದ್ಯಕೀಯ ಸೇವೆಯನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಸಂಘದ ಕೃತಕ ಗರ್ಭಧಾರಕರಿಂದ ಕೃತಕ ಗರ್ಭಧಾರಣೆಯನ್ನು ನಡೆಸಲಾಗಿದೆ ಹಾಗೂ ಒಕ್ಕೂಟದ ಪಶು ವೈದ್ಯರ ಮೂಲಕ ಬಂಜೆತನ ನಿವಾರಣಾ ಶಿಬಿರಗಳಲ್ಲಿ ರಾಸುಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ವರದಿ ವರ್ಷದಲ್ಲಿ ರೈತರ ರಾಸುಗಳಿಗೆ ಉಚಿತವಾಗಿ ಎರಡು ಬಾರಿ ಕಾಲು ಬಾಯಿ ವ್ಯಾಕ್ಸಿನ್, 2 ಬಾರಿ ಜಂತುಹುಳದ ಮಾತ್ರೆಗಳನ್ನು ನೀಡಲಾಗಿದೆ. ರಾಸುಗಳ ವಿಮೆಯನ್ನು ಉಚಿತವಾಗಿ ಮಾಡಲಾಗಿದೆ ಎಂದ ಅವರು, ಉತ್ತಮ ಗುಣಮಟ್ಟದ ಹಾಲು ಪೂರೈಸಿ ಸಂಘದ ಯಶಸ್ವಿಗೆ ಕಾರಣರಾದ ಎಲ್ಲಾ ಹಾಲು ಉತ್ಪಾದಕ ಸದಸ್ಯರಿಗೂ ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೂ ಮತ್ತು ಸೇವಾ ಮನೋಭಾವದಿಂದ ದುಡಿದ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಪರಮೇಶ್ವರ ಕಂಪ (ಪ್ರಥಮ), ವಸಂತ ಕುಂಟಿನಿ (ದ್ವಿತೀಯ), ಸದಾನಂದ ಶೆಟ್ಟಿ ಕಿಂಡೋವು (ತೃತೀಯ) ಅವರಿಗೆ ಸಭೆಯಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಬೊಳ್ಳಾವು, ನಿರ್ದೇಶಕರಾದ ಪ್ರಶಾಂತ್ ಯು, ದೇರಣ್ಣ ಗೌಡ, ಬಾಲಚಂದ್ರ ಕೆ., ವಿಶ್ವನಾಥ ಗೌಡ, ಸೇಸಪ್ಪ ಗೌಡ, ವಸಂತ ಕೆ., ಕೊರಗಪ್ಪ ಮುಗೇರ, ಸುಮತಿ, ವನಿತಾ, ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ಒಕ್ಕೂಟದ ಡಾ. ಸತೀಶ್ ರಾವ್, ಸ್ಥಾಪಕ ನಿರ್ದೇಶಕರಾದ ಜಯಂತ ಪೊರೋಳಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ವಿದ್ಯಾಶ್ರೀ ಪ್ರಾರ್ಥಿಸಿದರು. ನಿರ್ದೇಶಕರಾದ ಎಂ. ಜಗದೀಶ ರಾವ್ ಸ್ವಾಗತಿಸಿದರು. ಧರ್ನಪ್ಪ ನಾಯ್ಕ ವಂದಿಸಿದರು. ಹಾಲು ಪರೀಕ್ಷಕರಾದ ಸುರೇಶ್ ಗೌಂಡತ್ತಿಗೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಚೆನ್ನಯ್ಯ ಪಿ., ವಿಶಾಂತ್ ಸಹಕರಿಸಿದರು.
ಕಾರ್ಯದರ್ಶಿಗೆ ಬೀಳ್ಕೊಡುಗೆ
18 ವರ್ಷಗಳ ಕಾಲ ಸಂಘದ ಕಾರ್ಯದರ್ಶಿಯಾಗಿ ಸಂಘದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದ, ಮಧುಷಾ ಅವರು ವೈಯಕ್ತಿಕ ಕಾರಣದಿಂದ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದು, ಅವರನ್ನು ಸಂಘದ ಪರವಾಗಿ ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತ್ತಲ್ಲದೆ, ಚಿನ್ನದ ಉಂಗುರ ನೀಡಿ ಬೀಳ್ಕೊಡಲಾಯಿತು.