ಮಂಗಳೂರು: ಹೊಸ ಆಹಾರ ಸಂಸ್ಕರಣೆ ಉದ್ಯಮ ಅಥವಾ ಕಿರು ಉದ್ಯಮಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಬ್ಯಾಂಕ್ಗಳು ತ್ವರಿತವಾಗಿ ಸಾಲ ಮಂಜೂರು ಮಾಡಬೇಕು ಎಂದು ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಸೂಚಿಸಿದ್ದಾರೆ.
ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕೃಷಿ ಇಲಾಖೆ ಮತ್ತು ಕೆಪೆಕ್ ಸಂಸ್ಥೆ ಸಹಯೋಗದಲ್ಲಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ನಡೆದ ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೈಯಕ್ತಿಕ ಉದ್ದಿಮೆ, ಗೃಹ ಉತ್ಪಾದನೆ ಹಾಗೂ ಆಹಾರ ಸಂಸ್ಕರಣಾ ಉದ್ದಿಮೆ ಸೇರಿದಂತೆ ಕಿರು ಉದ್ಯಮಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆದರೆ, ಬ್ಯಾಂಕ್ಗಳು ಸಾಲ ಮಂಜೂರಾತಿಗೆ ಸತಾಯಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ಯೋಜನೆಯ ಮೂಲ ಉದ್ದೇಶ ಈಡೇರುವುದಿಲ್ಲವಾದ್ದರಿಂದ ಸಾಲ ಮಂಜೂರು ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ನಡೆಸಬೇಕು ಎಂದರು.
2 ಲಕ್ಷ ಸಣ್ಣ ಉದ್ಯಮಶೀಲರಿಗೆ ಹಣಕಾಸು ಬೆಂಬಲ
ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು ಆತ್ಮನಿರ್ಭರ ಭಾರತ ಅಭಿಯಾನದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ದೇಶಾದ್ಯಂತ ಈ ಯೋಜನೆಯಡಿ 2 ಲಕ್ಷ ಸಣ್ಣ ಉದ್ಯಮಶೀಲರಿಗೆ ಹಣಕಾಸು ಬೆಂಬಲ ನೀಡುವ ಉದ್ದೇಶವಿದೆ ಎಂದು ಸಂಸದರು ತಿಳಿಸಿದರು.
ಕೃಷಿ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಮಾತನಾಡಿ, ಈ ಯೋಜನೆಯಡಿ ಗರಿಷ್ಠ ರೂ.15 ಲಕ್ಷದ ಸಹಾಯಧನ ದೊರಕಲಿದೆ. ಕೇಂದ್ರ ಸರ್ಕಾರದ ಶೇ.35 ಹಾಗೂ ರಾಜ್ಯ ಸರ್ಕಾರದ ಶೇ.15 ಪಾಲು ಇದೆ ಎಂದು ತಿಳಿಸಿದರು.
ಜಂಟಿ ಕೈಗಾರಿಕಾ ನಿರ್ದೇಶಕ ಗೋಕುಲದಾಸ್, ಕೆಪೆಕ್ ಅಧಿಕಾರಿ ಅರವಿಂದ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಶೆಟ್ಟಿ ಉಪಸ್ಥಿತರಿದ್ದರು. ಕೃಷಿ ಇಲಾಖೆ ಉಪನಿರ್ದೇಶಕಿ ಕುಮುದಾ ಸ್ವಾಗತಿಸಿದರು. ಉಪನಿರ್ದೇಶಕ ಶಿವಶಂಕರ್ ದಾನೇಗೊಂಡಲ್ ನಿರೂಪಿಸಿದರು.