ಶಿಕ್ಷಕರ ದಿನಾಚರಣೆಯಂದು ವಿದ್ಯಾರ್ಥಿಗಳಿಂದ ನೆಚ್ಚಿನ ಅಮ್ಮಣ್ಣಿ ಟೀಚರ್ ರವರಿಗೆ ಗೌರವಾರ್ಪಣೆ

0

ಪುತ್ತೂರು: ಸೆ.5 ಶಿಕ್ಷಕರ ದಿನಾಚರಣೆ ಪ್ರಯುಕ್ತ 86 ವರ್ಷ ಪ್ರಾಯದ ಹಿರಿಯ ಶಿಕ್ಷಕಿ ಶ್ರೀಮತಿ ಅಮ್ಮಣ್ಣಿ ಟೀಚರ್ ರವರನ್ನು ಅವರ ಸ್ವಗೃಹವಾದ ಪಡೀಲು ಎಂಬಲ್ಲಿ ಅವರ ಪ್ರೀತಿಯ ವಿದ್ಯಾರ್ಥಿಗಳು ಸನ್ಮಾನಿಸಿ, ಗೌರವಿಸಿ ಶುಭ ಹಾರೈಸಿದರು.


ಅಮ್ಮಣ್ಣಿ ಟೀಚರ್ ರವರು ನಮ್ಮಲ್ಲಿ ಜೀವನದ ಮೌಲ್ಯವನ್ನು ರೂಪಿಸಿದವರು-ಬಲರಾಂ ಆಚಾರ್ಯ:
ಸ್ವರ್ಣೋದ್ಯಮಿ, ಜಿ.ಎಲ್ ಆಚಾರ್ಯ ಸಂಸ್ಥೆಯ ಮಾಲಕ, ಬಲರಾಮ ಆಚಾರ್ಯರವರು ಮಾತನಾಡಿ, ಅಮ್ಮಣ್ಣಿ ಟೀಚರ್ ರವರು ನಮ್ಮ ಅಚ್ಚುಮೆಚ್ಚಿನ ಟೀಚರ್ ಆಗಿದ್ದು ಮಾತ್ರವಲ್ಲ ನಮ್ಮಲ್ಲಿ ಜೀವನದ ಮೌಲ್ಯವನ್ನು ರೂಪಿಸಿದವರಾಗಿದ್ದಾರೆ. ನಮ್ಮ ಈ ಪ್ರಾಯದಲ್ಲಿ ನಮಗೆ ಕಲಿಸಿದ ಟೀಚರ್ಸ್ ಇರುವುದು ಬಹಳ ಅಪರೂಪ. ಆದರೆ ಅಮ್ಮಣ್ಣಿ ಟೀಚರ್ ರವರು ಈ ಇಳಿ ವಯಸ್ಸಿನಲ್ಲೂ ನಮ್ಮ ಗುರುತು ಹಿಡಿದು, ಪ್ರೀತಿಯಿಂದ ಮಾತನಾಡಿಸುವುದು ನೋಡಿದಾಗ ಖುಶಿಯಾಗುತ್ತದೆ ಎಂದು ಹೇಳಿ ಅಮ್ಮಣ್ಣಿ ಟೀಚರ್ ರವರ ಮುಂದಿನ ಆರೋಗ್ಯವು ಆಯುರಾರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದರು.

ಬಯೋಲಜಿ ಟೀಚರ್ ಅಮ್ಮಣ್ಣಿರವರು ನಮಗೆ ಹೆಚ್ಚು ಅಚ್ಚುಮೆಚ್ಚು-ಜೈರಾಜ್ ಭಂಡಾರಿ:
ಪ್ರಗತಿಪರ ಕೃಷಿಕರಾದ ಜೈರಾಜ್ ಭಂಡಾರಿರವರು ಮಾತನಾಡಿ, 1970ರಿಂದ ನನ್ನದು ಪುತ್ತೂರಿನ ಒಡನಾಟವಾಗಿದ್ದು ಮಾಣಿಯಿಂದ ನಾನು ಬೋರ್ಡ್ ಹೈಸ್ಕೂಲಿಗೆ ವ್ಯಾಸಂಗಕ್ಕೆ ಬರುತ್ತಿದ್ದೆ. ಅಂದು ನಾವೆಲ್ಲ ಬಯೋಲಜಿ ಪೆರೇಡ್ ಗೆ ಸದಾ ಕಾಯುತ್ತಿದ್ದೇವು. ಯಾಕೆಂದರೆ ಬಯೋಲಜಿ ಟೀಚರ್ ಆಗಿದ್ದವರು ನಮ್ಮ ಪ್ರೀತಿಯ ಅಮ್ಮಣ್ಣಿ ಟೀಚರ್ ರವರು. ಅವರು ನಮ್ಮೊಂದಿಗೆ ಸೀರಿಯಸ್ ಆಗಿ ಮಾತನಾಡಿದ್ದು ಕಂಡೇ ಇಲ್ಲ. ನಾವು ಎಷ್ಟು ತುಂಟಾಟ ಮಾಡಿದರೂ ಅವರು ನಮ್ಮನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಮೆಡಿಕಲ್ ವ್ಯಾಸಂಗ ಮಾಡಬೇಕಾದರೆ ಅದಕ್ಕೆ ಬಯೋಲಜಿ ಅನ್ನು ಆಭ್ಯಸಿಸಲೇ ಬೇಕಾಗುತ್ತದೆ. ನನಗೂ ಮೆಡಿಕಲ್ ಓದಬೇಕೆಂಬುದು ಆಸೆಯಿತ್ತು. ಆದರೆ ಅದು ನನ್ನಿಂದಾಗಲಿಲ್ಲವಾದರೂ ನಮ್ಮ ಬ್ಯಾಚಿನಿಂದ ಐದು ಮಂದಿ ಮೆಡಿಕಲ್ ವ್ಯಾಸಂಗಕ್ಕೆ ಹೋಗಿದ್ದಾರೆ ಎಂದು ಹೇಳಿ ಅಮ್ಮಣ್ಣಿ ಟೀಚರ್ ರವರಿಗೆ ಶುಭ ಹಾರೈಸಿದರು.

ತುಂಟನಿದ್ದ ನನ್ನನ್ನು ಬದಲಾಯಿಸಿದ್ದು ಅಮ್ಮಣ್ಣಿ ಟೀಚರ್ ರವರು-ವಾಮನ ಪೈ:
ದರ್ಬೆ ಗಣೇಶ್ ಟ್ರೇಡರ್ಸ್ ಮಾಲಕ ವಾಮನ್ ಪೈ ಮಾತನಾಡಿ, ಬೋರ್ಡ್ ಹೈಸ್ಕೂಲಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ತುಂಟನಿದ್ದ ನನ್ನನ್ನು ಬದಲಾಯಿಸಿದ್ದು ಅಮ್ಮಣ್ಣಿ ಟೀಚರ್ ರವರು. ಹೈಸ್ಕೂಲಿನಲ್ಲಿ ಆಂಗ್ಲ ಭಾಷೆಯನ್ನು, ಪಿಯುಸಿಯಲ್ಲಿ ಬಯೋಲಜಿ ಶಿಕ್ಷಣವನ್ನು ಅಮ್ಮಣ್ಣಿ ಟೀಚರ್ ರವರಿಂದ ಕಲಿತ್ತಿದ್ದೇನೆ. ಅಂದಿನ ದಿನಗಳಲ್ಲಿ ವ್ಯಾಸಂಗಕ್ಕೆ ಬಹಳ ಕಷ್ಟಪಡುತ್ತಿದ್ದಾಗ ಅಮ್ಮಣ್ಣಿ ಟೀಚರ್ ರವರು ನಮಗೆ ಪ್ರೋತ್ಸಾಹ ನೀಡುತ್ತಿದ್ದುದು ಇಂದಿಗೂ ನೆನಪಿದೆ ಎಂದು ಹೇಳಿ ಅಮ್ಮಣ್ಣಿ ಟೀಚರ್ ರವರ ಮುಂದಿನ ಬದುಕಿಗೆ ಶುಭ ಹಾರೈಸಿದರು.

ನಾನು ಅವರ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆಯಾಗುತ್ತದೆ-ಮನ್ಸೂರ್:
ಉದ್ಯಮಿ ಹಾಗೂ ಅಮ್ಮಣ್ಣಿ ಟೀಚರ್ ರವರ ನೆರೆಹೊರೆಯವರಾದ ಮನ್ಸೂರ್ ಮಾತನಾಡಿ, ಬೋರ್ಡ್ ಹೈಸ್ಕೂಲಿನಲ್ಲಿ ನಾನು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭ ಅಮ್ಮಣ್ಷಿ ಟೀಚರ್ ರವರು ನನಗೆ ಅವರ ನಿವೃತ್ತಿಯ ಹಿಂದಿನ ಮೂರು ತಿಂಗಳು ನನಗೆ ಕಲಿಸಿರುತ್ತಾರೆ. ಅಮ್ಮಣ್ಣಿ ಟೀಚರ್ ರವರು ನನ್ನ ನೆರೆಹೊರೆಯವರಾದ ಕಾರಣ ನನಗೆ ಅವರು ಹೆಚ್ಚು ಪರಿಚಿತರಾಗಿದ್ದು ನಾನು ಅವರ ವಿದ್ಯಾರ್ಥಿ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ಅಮ್ಮಣ್ಣಿ ಟೀಚರ್ ನಮಗೆ ಕೇರ್ ಟೇಕರ್ ಆಗಿದ್ದರು-ಆಸ್ಕರ್ ಆನಂದ್:
ಬೊಳ್ವಾರು ಮೆಗಾ ಪ್ಲಾಸ್ಟಿಕ್ ಮಾಲಕ ಆಸ್ಕರ್ ಆನಂದ್ ಸ್ವಾಗತಿಸಿ, ನಾನು ಚಿಕ್ಕವನಿದ್ದಾಗಲೇ ತಂದೆಯನ್ನು ಕಳೆದುಕೊಂಡೆ. ತಾಯಿ ನರ್ಸ್ ಆದ ಕಾರಣ ಅವರು ವಿವಿಧೆಡೆ ಕಾರ್ಯದ ನಿಮಿತ್ತ ತೆರಳುತ್ತಿದ್ದ ಸಂದರ್ಭದಲ್ಲಿ ನನ್ನನ್ನು ಮತ್ತು ನನ್ನ ಸಹೋದರಿಯನ್ನು ಅಮ್ಮಣ್ಣಿ ಟೀಚರ್ ರವರು ಕೇರ್ ಟೇಕರ್ ಆಗಿ ಸಲಹಿರುವುದು ಯಾವಾಗಲೂ ನೆನಪಿನಲ್ಲಿಡತ್ತಕ್ಕವಾಗಿದೆ ಎಂದು ಹೇಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಆಸ್ಕರ್ ಆನಂದ್ ರವರ ಪತ್ನಿ ಸೆನೋರಿಟ ಆನಂದ್ ಉಪಸ್ಥಿತರಿದ್ದರು.


ಪ್ರೀತಿಗೆ ಎಂದಿಗೂ ಚಿರಋಣಿ..
ಶಿಕ್ಷಕರ ದಿನಾಚರಣೆ ದಿನದಂದು ನನ್ನ ಪ್ರೀತಿಯ ವಿದ್ಯಾರ್ಥಿಗಳು ನನ್ನನ್ನು ಗೌರವಿಸಲು ಬರುತ್ತಾರೆ ಎಂದು ಚಿಂತಿಸಲೇ ಇಲ್ಲ. ಆದರೂ ನನ್ನ ಪ್ರೀತಿಯ ವಿದ್ಯಾರ್ಥಿಗಳು ಆಗಮಿಸಿ ನನ್ನನ್ನು ಪ್ರೀತಿಯಿಂದ ಗೌರವಿಸಿದ್ದೀರಿ, ನಿಮ್ಮ ಭೇಟಿ ನನಗೆ ಬಹಳ ಸಂತೋಷ ತಂದಿದೆ. ನನ್ನ ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇದೆ. ನಿಮ್ಮ ಮುಂದಿನ ಜೀವನಕ್ಕೆ ಜ್ಞಾನ, ತ್ರಾಣ ದೇವರು ಕರುಣಿಸುವಂತಾಗಲಿ. ನಿಮ್ಮ ಪ್ರೀತಿಗೆ ಎಂದಿಗೂ ಚಿರಋಣಿ.
-ಅಮ್ಮಣ್ಣಿ ಟೀಚರ್, ಗೌರವಿಸಲ್ಪಟ್ಟ ಶಿಕ್ಷಕಿ

ಅಮ್ಮಣ್ಣಿ ಟೀಚರ್ ಬಗ್ಗೆ..
ಗೌರವ ಸ್ವೀಕರಿಸಿದ ಅಮ್ಮಣ್ಣಿ ಟೀಚರ್ ಮೂಲ ನಾಮ ಶ್ರೀಮತಿ ವಿಲ್ಹೆಲ್ಮಿನಾ ಅಮ್ಮಣ್ಣ. 1939 ರಲ್ಲಿ ಮೊದಲನೇ ಮಹಾಯುದ್ಧದ ಮಾಜಿ ಸೈನಿಕರಾದ ಬೆಂಜಮಿನ್ ಕುಂದರ್ ಮತ್ತು ಶ್ರೀಮತಿ ಲೀಲಾವತಿ ಕುಂದರ್ ದಂಪತಿ ಪುತ್ರಿ. ಅವರು ಬಿಎಸ್ಸಿ, ಬಿಎಡ್ ಮುಗಿಸಿ ಕಾರ್ಕಳದಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ 1963ರಲ್ಲಿ ಫಿಲೋಮಿನಾ ಕಾಲೇಜಿನಲ್ಲಿ ಗ್ರಂಥಪಾಲಕರಾಗಿದ್ದ ಜೆ ಆರ್ ಜಿ ಅಮ್ಮಣ್ಣ ಅವರನ್ನು ವಿವಾಹವಾಗಿ ಶ್ರೀಮತಿ ವಿಲ್ಹೆಲ್ಮಿನಾ ಅವರನ್ನು ಅಮ್ಮಣ್ಣಿ ಟೀಚರ್ ಎಂದೇ ಪರಿಚಿತರು.1964 ರಲ್ಲಿ, ಅವರು ಪುತ್ತೂರಿನ ಕೊಂಬೆಟ್ಟುವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಬಯೋಲಜಿ ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ನಂತರ ಅವರು ಸಮಾಜಶಾಸ್ತ್ರದಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಎಂಎ ಪದವಿ ಪಡೆದಿರುತ್ತಾರೆ. ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಅವರು 1997 ರಲ್ಲಿ ಬುಳೇರಿಕಟ್ಟೆಯ ಸರ್ಕಾರಿ ಪೂರ್ವ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವಾ ನಿವೃತ್ತಿ ಹೊಂದಿದ್ದರು.

LEAVE A REPLY

Please enter your comment!
Please enter your name here