ಬೆದ್ರಾಳ: ಹೆದ್ದಾರಿಯಲ್ಲೆ ವಾಹನ ಸವಾರರಿಗೆ ಸಂಕಷ್ಟ : ಅಪೂರ್ಣ ಕಾಮಗಾರಿ, ಬಿರುಕು ಬಿಟ್ಟ ಇಂಟರ್‌ಲಾಕ್!

0

ವರದಿ : ಯೂಸುಫ್ ರೆಂಜಲಾಡಿ


ಪುತ್ತೂರು: ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪುತ್ತೂರು ಪೇಟೆಯಿಂದ ಕೆಲವೇ ಕಿ.ಮೀ ದೂರದಲ್ಲಿರುವ ಬೆದ್ರಾಳದಲ್ಲಿ ವಾಹನ ಸವಾರರು ತೀರಾ ಸಂಕಷ್ಟದಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.


ಬೆದ್ರಾಳದಲ್ಲಿ ರಸ್ತೆ ಮಧ್ಯೆ ಹೊಂಡಗುಂಡಿಗಳು ಇದ್ದ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯವರು ರಸ್ತೆಗೆ ಇಂಟರ್‌ಲಾಕ್ ಹಾಕುವ ಕಾಮಗಾರಿ ಆರಂಭಿಸಿದ್ದರು. ಕಾಮಗಾರಿ ವೇಳೆ ಹೊಂಡಗಳಿಂದ ಕೂಡಿದ ರಸ್ತೆಯ ಇನ್ನೊಂದು ಬದಿಯಿಂದ ಎರಡು ವಾಹನಗಳ ಸಂಚಾರ ಆರಂಭಗೊಂಡಿತ್ತು. ಒಂದು ಬದಿಯ ವಾಹನಗಳು ಹೋದ ಬಳಿಕ ಇನ್ನೊಂದು ಬದಿಯಿಂದ ವಾಹನಗಳನ್ನು ಬಿಡಲಾಗುತ್ತಿತ್ತು, ಈ ಸಂದರ್ಭದಲ್ಲಿ ಟ್ರಾಫಿಕ್ ಸಮಸ್ಯೆ ಕೂಡಾ ಉಂಟಾಗಿತ್ತು. ಅಂತೂ ಇಂತೂ ತಿಂಗಳುಗಳ ಕಾಲ ಕೆಲಸ ನಡೆದು ಒಂದು ಬದಿ ಇಂಟರ್‌ಲಾಕ್ ಕಾಮಗಾರಿ ಪೂರ್ಣಗೊಂಡಿತ್ತು.

ಮುಗಿಯದ ಸಮಸ್ಯೆ:
ಒಂದು ಬದಿಯ ಇಂಟರ್‌ಲಾಕ್ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾದರೂ ಇನ್ನೊಂದು ಬದಿಯಲ್ಲಿ ರಸ್ತೆ ಕಾಮಗಾರಿ ನಡೆಸದೇ ಇದ್ದ ಪರಿಣಾಮ ಹೊಂಡಗುಂಡಿಗಳು ಹಾಗೆಯೇ ಉಳಿದಿದ್ದು ವಾಹನ ಸವಾರರು ತೀವ್ರ ತೊಂದರೆ ಎದುರಿಸುವಂತಾಗಿದೆ. ಪುತ್ತೂರಿನಿಂದ ಸುಬ್ರಹ್ಮಣ್ಯ ಕಡೆಗೆ ಹೋಗುವ ವಾಹನಗಳು ಇಂಟರ್‌ಲಾಕ್ ರಸ್ತೆಯಲ್ಲಿ ಸಂಚರಿಸುತ್ತಿದ್ದು ಸುಬ್ರಹ್ಮಣ್ಯ ಕಡೆಯಿಂದ ಪುತ್ತೂರು ಕಡೆಗೆ ಸಂಚರಿಸುವ ವಾಹನಗಳು ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲೇ ಸಂಚರಿಸಬೇಕಾಗಿದೆ.

ಬಿರುಕು ಬಿಟ್ಟ ಇಂಟರ್‌ಲಾಕ್..!
ಈ ಹಿಂದೆ ಇದ್ದ ಡಾಮರು ರಸ್ತೆಯ ಬದಲಾಗಿ ಇಲ್ಲಿ ಇಂಟರ್‌ಲಾಕ್ ಅಳವಡಿಸಲಾಗಿದ್ದು ಅದು ಕೂಡಾ ಅಳವಡಿಸಿದ ಕೆಲವೇ ದಿನದಲ್ಲಿ ಅಲ್ಲಲ್ಲಿ ಎದ್ದುಹೋಗಿದ್ದು ಒಂದು ರೀತಿಯಲ್ಲಿ ಬಿರುಕು ಬಿಟ್ಟ ಸ್ಥಿತಿ ನಿರ್ಮಾಣವಾಗಿದೆ. ಇಂಟರ್‌ಲಾಕ್ ಬಿರುಕುಬಿಟ್ಟ ರೀತಿಯಲ್ಲಿರುವುದರಿಂದ ದ್ವಿಚಕ್ರ ವಾಹನ ಸವಾರರಿಗಂತೂ ಇದು ಬಹಳ ಅಪಾಯಕಾರಿಯಾಗಿ ಪರಿಣಮಿಸಿದೆ. ಈಗಾಗಲೇ ಇಲ್ಲಿ ಕೆಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇಲ್ಲಿ ಕಾಮಗಾರಿ ಆಮೆಗತಿಯಲ್ಲಿ ಸಾಗಲು ಮತ್ತು ಆದ ಕಾಮಗಾರಿಯೂ ಪರಿಪೂರ್ಣವಾಗದೇ ಇರಲು ಕಾರಣವೇನು ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದ್ದು ಇದಕ್ಕೆ ಸಂಬಂಧಪಟ್ಟವರು ಉತ್ತರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

LEAVE A REPLY

Please enter your comment!
Please enter your name here